ಪಲ್ಲಕ್ಕಿಯಲ್ಲಿ ಸಾಗಿದ ಪ್ರಾಥಿ೯ವ ಶರೀರದ ಭವ್ಯ ಮೆರವಣಿಗೆ- ರಸ್ತೆಯ ಇಕ್ಕೆಲಗಳಲ್ಲೂ ನಿಂತು ಅಗಲಿದ ಪೂಜ್ಯರಿಗೆ ನಮಿಸಿದ ಜನಸ್ತೋಮ


ಆಲಮಟ್ಟಿ:
ಸಮಾಜೋಧಾಮಿ೯ಕ ಚಿಂತಕ, ನಿಷ್ಠ ಆಚಾರಾನುಷ್ಟಾನ ಶೀಲ,ವೀರಶೈವ ಧರ್ಮ ಸಿದ್ಧಾಂತದ ಪರಿಪಾಲಕ, ಸಂವರ್ಧಕರಾಗಿ ಜನಾನುರಾಗಿದ್ದ ಸಮೀಪದ ಚಿಮ್ಮಲಗಿ ಭಾಗ-2 ರ ಅರಳೆಲೆ ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಶ್ರೀ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಶುಕ್ರವಾರ ಸಂಜೆ ಪ್ರಕೃತಿ ಮಡಿಲಿನಲ್ಲಿ ಲೀನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನೀಲಕಂಠ ಶ್ರೀಗಳವರು ಗುರುವಾರ ರಾತ್ರಿ ಇಹಲೋಕ ತ್ಯಜಿಸಿದರು. ಭೂಲೋಕಕ್ಕೆ ವಿದಾಯ ಹೇಳಿ ಬಾರದ ಲೋಕಕ್ಕೆ ಪಯಣಿಸಿದ್ದರು. ಭಕ್ತರ ಉದ್ದಾರಕ,ಅಪರೂಪದ ಸಂತರಾಗಿ 92 ನೇ ಇಳಿವಯೋಮಾನದಲ್ಲಿ ನೀಲಕಂಠ ಸ್ವಾಮೀಜಿಯವರು ತಮ್ಮ ನಡೆ ನಿಲ್ಲಿಸಿ ಎಲ್ಲರ ಮಧ್ಯೆಯಿಂದ ನಿರ್ಗಮಿಸಿದ್ದಾರೆ.ಅಪಾರ ಭಕ್ತ ಸಮೂಹವನ್ನು ಶೋಕ ಸಾಗರದಲ್ಲಿ ಮೊಳಗಿಸಿದ್ದಾರೆ.


ಚಿಮ್ಮಲಗಿ ಶ್ರೀ ಮಠದಲ್ಲಿ ಲಿಂಗೈಕ್ಯ ನೀಲಕಂಠ ಶ್ರೀಗಳವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಧಾಮಿ೯ಕ ಶಾಸ್ತ್ರ, ಸಂಪ್ರದಾಯದ ವಿಧಿವಿಧಾನಗಳೊಂದಿಗೆ ಸಹಸ್ರಾರು ಭಕ್ತಗಣದ ಸಮ್ಮುಖದಲ್ಲಿ ಸರಳವಾಗಿ ನೆರವೇರಿಸಲಾಯಿತು.
ಸಾಧನಾದೃಢ,ಗುರುಸೇವಾ ನಿಷ್ಟ ಶಿವಾಚಾರ್ಯರಾಗಿ ಸಮಾಜೋದ್ದಾರ ಕೈಂಕರ್ಯದ ಕ್ರಿಯಾಕಾರ್ಯಗಳಲ್ಲಿ ನೀಲಕಂಠ ಶ್ರೀ ತಮ್ಮನ್ನು ತಾವು ತೋಡಗಿಸಿಕೊಂಡಿದ್ದರು. ಧರ್ಮ,ಸಂಸ್ಕೃತಿ ಸಾಕಾರಗೊಳಿಸುವಲ್ಲಿ ಸದಾ ಪರಿಶ್ರಮಿಸುತ್ತಿದ್ದ ಹಿರಿಯ ತೇತನ ನೀಲಕಂಠ ಮಹಾಸ್ವಾಮಿಗಳು ಆಚಾರ ಶ್ರೇಷ್ಠತೆಯ ಫಲವನ್ನು ಭಕ್ತರಿಗೆ ಕರುಣಿಸಿ ಈಗ ಮರೆಯಾಗಿರುವುದು ಭಕ್ತ ವೃಂದಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ನೋವಿನ ಮುಡುವಿನಲ್ಲಿ ಶೋಕ ಕಂಬನಿ ಮಿಡಿಯುತ್ತಲ್ಲಿದ್ದಾರೆ. ಭಕ್ತ ಉದ್ದಾರಕ, ಸರಳತೆಯ ನೀಲಕಂಠ ಎಂಬ ಸತ್ವಯುತ ಜೀವ ಇಂದು ಭೂಮಿಯಲ್ಲಿ ಮರೆಯಾಗಿದೆ.ಈ ಪರೋಪಜೀವಿ ಜೀವಿತಾವಧಿಯಲ್ಲಿ ಗೈದ ಪರೋಪಕಾರದ ಕಾಯಕಗಳು ಶಾಶ್ವತವಾಗಿ ಜನತೆಯ ಮನದಲ್ಲಿ ನೆಲೆಯೂರಿವೆ. ಈಗ ನೀಲಕಂಠ ಶ್ರೀ ಬರೀ ನೆನಪು ಮಾತ್ರ ! ಪಲ್ಲಕ್ಕಿಯಲ್ಲಿ ಪ್ರಾಥಿ೯ವ ಶರೀರದ ಮೆರವಣಿಗೆ…
ಅಂತ್ಯಕ್ರಿಯೆಗೂ ಮುನ್ನ ಚಿಮ್ಮಲಗಿಯ ಬೀದಿಗಳಲ್ಲಿ ಲಿಂ,ನೀಲಕಂಠ ಶ್ರೀಗಳ ಪ್ರಾಥಿ೯ವ ಶರೀರದ ಅಭೂತಪೂರ್ವ ಮೆರವಣಿಗೆ ಪಲ್ಲಕ್ಕಿಯಲ್ಲಿ ಸಾಗಿತ್ತು. ರಸ್ತೆಯ ಇಕ್ಕೆಲಗಳಲ್ಲೂ ನಿಂತಿದ್ದ ಅಸಂಖ್ಯ ಜನತೆ ಶ್ರೀಗಳ ಅಂತಿಮ ದರ್ಶನ ಪಡೆದರು,ಮನೆಯ ಮಹಡಿಗಳ ಮೇಲೆ ನಿಂತಿದ್ದ ಜನತೆಯೂ ಕೈಮುಗಿದು ನಮಿಸಿ ಧನ್ಯತೆ ಮೆರೆದರು.
ಶ್ರೀಗಳ ಅಂತ್ಯ ಸಂಸ್ಕಾರದ ಕಾರ್ಯದಲ್ಲಿ ಅನೇಕ ಗಣ್ಯರು, ರಾಜಕೀಯ ಧುರೀಣರು, ವಿವಿಧ ಮಠಾಧೀಶರು,ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಧಾವಿಸಿ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು. ಕೊನೆಗೆ ದಿವ್ಯಾತ್ಮನ ದಿವ್ಯ ದರ್ಶನ ಪಡೆದು ಭಾವುಕರಾಗಿ ಕಂಬನಿ ಧಾರೆಯೊಂದಿಗೆ ಕಣ್ಣು ಪೀಳಿಕಿಸಿದರು.

ದರ್ಶನ ನಿಲ್ಲಿಸಿದ ಚಿಮ್ಮಲಗಿಯ ತಪೋನಿಧಿ ನೀಲಕಂಠ ಸ್ವಾಮೀಜಿ ವಯೋಸಹಜ ಕಾಯಿಲೆಗಳಿಂದ ಬಹುದಿನಗಳಿಂದ ಬಳಲುತ್ತಿದ್ದರು. ಕಳೆದ ಎರಡು ವರ್ಷಗಳಿಂದ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯ ವೈದ್ಯರಾದ ಫಿಜಿಷಿಯನ್ ಡಾ.
ವಿಜಯಕುಮಾರ ವಾರದ ಮತ್ತು ಯುರೊಲಾಜಿಸ್ಟ್ ಡಾ. ಸಂತೋಷ ಪಾಟೀಲ ಅವರು ಸ್ವಾಮೀಜಿಯವರಿಗೆ ಚಿಕಿತ್ಸೆ ನೀಡಿದ್ದರು.
ಲಿಂ. ಶ್ರೀ ನೀಲಕಂಠ ಸ್ವಾಮೀಜಿ ಕಳೆದ ಸುಮಾರು ದಿನಗಳಿಂದ ಮಠದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ರಾತ್ರಿ ಸ್ಥಳೀಯ ಶಾಸಕ ಮಾಜಿ ಸಚಿವ ಶಿವಾನಂದ ಪಾಟೀಲ ಅವರ ಸಲಹೆಯ ಮೇರೆಗೆ ವಿಜಯಪುರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು. ನಂತರ ಗುರುವಾರ ಸಂಜೆಯ ವೇಳೆಗೆ ಶ್ರೀಗಳ ಆರೋಗ್ಯದಲ್ಲಿ ಅತೀ ಗಂಭೀರತೆ ಕಾಣಿಸಿಕೊಂಡಿದ್ದರಿಂದ ಮರಳಿ ಚಿಮ್ಮಲಗಿಯಲ್ಲಿರುವ ಶ್ರೀ ಮಠಕ್ಕೆ ಕರೆತರಲಾಗಿತ್ತು.ರಾತ್ರಿ 10.02ಕ್ಕೆ ಲಿಂಗೈಕ್ಯರಾಗಿದ್ದಾರೆ.

ಶ್ರೀಗಳ ಅಗಲಿಕೆಗೆ ಸಂತಾಪ ಚಿಮ್ಮಲಗಿ ಶ್ರೀಗಳ ನಿಧನಕ್ಕೆ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ತಾ.ಪಂ.ಮಾಜಿ ಸದಸ್ಯ ಮಲ್ಲು ರಾಠೋಡ, ಜಿ.ಪಂ.ಮಾಜಿ ಸದಸ್ಯ ಶಿವಾನಂದ ಅವಟಿ ಸೇರಿದಂತೆ ಬಸವ ನಾಡಿನ ಎಲ್ಲ ಜನಪ್ರತಿನಿಧಿಗಳು, ಇತರ ಜಿಲ್ಲೆಗಳ ನಾನಾ ಮಠಾಧೀಶರು ಹಾಗೂ ಗಣ್ಯರ ಸಂತಾಪ ಸೂಚಿಸಿದ್ದಾರೆ.
ನೀಲಕಂಠ ಶ್ರೀ ಯಶೋಗಾಥೆ…! ಲಿಂಗೈಕ್ಯ ತಪೋನಿಧಿ ನೀಲಕಂಠ ಸ್ವಾಮೀಜಿಯವರು ಆಗಿನ ಬಸವನಬಾಗೇವಾಡಿ ತಾಲ್ಲೂಕಿನ ಶೀಕಳವಾಡಿ ಗ್ರಾಮದ ವೇ.ಚೆನಸಂಗಯ್ಯ, ನೀಲಮ್ಮ ದಂಪತಿಗಳ ಉದರದಲ್ಲಿ ಕಿರಿಯ ಸುಪುತ್ರನಾಗಿ ಜನಿಸಿದರು.
ಚೆನಸಂಗಯ್ಯನವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಜನಿಸಿದ್ದು ಮೊದಲನೆಯವರು ಈರಯ್ಯ ಎರಡನೇಯವರೇ ಶ್ರೀ ನೀಲಕಂಠ ಸ್ವಾಮೀಜಿಯವರಾಗಿದ್ದಾರೆ, ಇವರಿಗೆ ಸಂಗಮ್ಮ ಎನ್ನುವ ಪುತ್ರಿಯಿದ್ದರು. ಕಿರಿಯ ಪುತ್ರನಾಗಿದ್ದ ನೀಲಕಂಠ ಸ್ವಾಮೀಜಿಯವರು ಹುಟ್ಟಿದ ಮೂರು ದಿನಗಳವರೆಗೆ ತಾಯಿಯ ಎದೆ ಹಾಲು ಕುಡಿಯದೇ ಹಠ ಮಾಡಿದ ಮಹಾನ್ ಶಿವಯೋಗಿ, ನಾಲ್ಕನೇಯ ದಿನಕ್ಕೆ ಚಿಮ್ಮಲಗಿಯಲ್ಲಿದ್ದ ಅರಳೆಲೆ ಕಟ್ಟಿಮನಿ ಹಿರೇಮಠದ ಪೀಠಾಧಿಪತಿಯಾಗಿದ್ದ ಶ್ರೀ ಗುರುಶಾಂತವೀರ ಸ್ವಾಮೀಜಿಯವರಲ್ಲಿ ವಿನಂತಿಸಿದಾಗ ಅವರು
ನೀಡಿದ ವಿಭೂತಿ ಭಸ್ಮ ಹಾಗೂ ರುದ್ರಾಕ್ಷಿಯ ಮಾಲೆಯನ್ನು ಮಗುವಿಗೆ ಧರಿಸಿದ ನಂತರವೇ ತಾಯಿಯ ಎದೆ ಹಾಲನ್ನು ಸೇವನೆ ಮಾಡಿದ್ದರೆಂದು ಹಿರಿಯರು ಹೇಳುತ್ತಾರೆ. ನಂತರ ನೀಲಕಂಠ ಸ್ವಾಮೀಜಿಯವರನ್ನು ಗುರುಶಾಂತವೀರೆಶ್ವರರ ಇಚ್ಛೆಯಂತೆ ಚಿಮ್ಮಲಗಿಯ ಮಠದ ಪೀಠಾಧಿಪತಿಯಾಗುತ್ತಾರೆ. ನೀಲಕಂಠ ಸ್ವಾಮೀಜಿಯವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಶಹಾಪುರ ದರ್ಗಾದಲ್ಲಿ, ನಂತರ ಸೋಲಾಪುರ ಜಿಲ್ಲೆ ಹೊಟಗಿ ಮಠದ ಗುರುಕುಲದಲ್ಲಿ ವಿದ್ಯಾಭ್ಯಾಸ ಪೂರೈಸಿದ್ಗಾರೆ. ನಂತರ ಶಿವಯೋಗಮಂದಿರ ಮತ್ತು ಮುಕ್ತಿ ಮಂದಿರದಲ್ಲಿ ಸಂಸ್ಕೃತ, ಯೋಗಧ್ಯಾನ ಕರಗತ ಮಾಡಿಕೊಂಡಿದ್ದಾರೆ.

ಇವರು ಬಾಲಕರಾಗಿದ್ದಾಗಲೇ ನಾಗರ ಹಾವನ್ನು ಕೈಯಲ್ಲಿಡಿದುಕೊಂಡು ಆಟವಾಡಿದರೂ ಅವರಿಗೆ ಹಾವುಗಳು ಕಚ್ಚಿದ ಉದಾಹರಣೆಗಳಿಲ್ಲ. ಬಾಳೆಹೊನ್ನೂರು ವೀರಸಿಂಹಾಸನದ ಪೀಠಾಧಿಪತಿ ಜಗದ್ಗುರು ವೀರಗಂಗಾಧರ ಜಗದ್ಗುರುಗಳ ಅನುಗ್ರಹದಿಂದ ಪ್ರಪ್ರಥಮವಾಗಿ ಬಾಗಲಕೋಟ ಜಿಲ್ಲೆಯ ಕಡ್ಲಿಮಟ್ಟಿ ಬಳಿಯಿರುವ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ 101 ದಿನ
ತಪೋನುಷ್ಠಾನ ಕೈಗೊಳ್ಳುತ್ತಾರೆ. ಮುಚಖಂಡಿಯ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ 45ದಿನ, ವಿಜಯಪುರ ನಗರದ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ 31ದಿನ, ಬ.ಬಾಗೇವಾಡಿ ತಾಲ್ಲೂಕಿನ ಮಸೂತಿ ಗ್ರಾಮದ ಜಗದೀಶ್ವರ ಹಿರೇಮಠದಲ್ಲಿ 45 ದಿನ ನಂತರ ಚಿಮ್ಮಲಗಿ ಬಳಿ ಇರುವ ಕೃಷ್ಣೆಯ ದಡದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿಯವರು ಕೈಗೊಂಡಿದ್ದ ಅನುಷ್ಟಾನ ಸ್ಥಳದ ಸಮೀಪದಲ್ಲಿ 149 ದಿನಗಳ ಕಾಲ ನಿರಾಹಾರ ಗುಪ್ತವಾದ 6ನೇ ತಪೋನುಷ್ಟಾನ ಕೈಗೊಂಡಿದ್ದರು.
ನಂತರ 12.4.2000 ಬುಧವಾರ ಧರ್ಮದ ಏಳ್ಗೆಗಾಗಿ ಗುರುಶಾಂತವೀರಸ್ವಾಮೀಜಿಯವರ 105 ನೇ ವಾರ್ಷಿಕ ಜಯಂತಿ ಅಂಗವಾಗಿ 13 ತಿಂಗಳುಗಳಕಾಲ ನಿರಾಹಾರ ಹಾಗೂ ಮೌನವೃತ ಅನುಷ್ಠಾನ ಕೈಗೊಂಡಿದ್ದರು. ಹೀಗೆ ನೀಲಕಂಠ ಸ್ವಾಮೀಜಿಯವರು ತಮ್ಮ ಜೀವನದುದ್ದಕ್ಕೂ ವಿವಿಧ ಸ್ಥಳಗಳಲ್ಲಿ ತಪವನ್ನಾಚರಿಸಿ ಜನಾನುರಾಗಿಯಾಗಿ ಬೇಡಿದ ಭಕ್ತರಿಗೆ ಕಲ್ಪವೃಕ್ಷವಾಗಿದ್ದರು. ಇವರು ಚಿಮ್ಮಲಗಿ, ಯಂಭತ್ನಾಳ ಮತ್ತು ವಿಜಯಪುರದಲ್ಲಿ ಮಠಗಳನ್ನು ಸ್ಥಾಪಿಸಿ ಭಕ್ತರ ಸಂಕಟವನ್ನು ದೂರ ಮಾಡಲು ಶ್ರಮಿಸಿದ್ದಾರೆ.
ಇವರು ತಮಗೆ ವಯೋಸಹಜ ಖಾಯಿಲೆಯಿಂದ ತೊಂದರೆ ಕಾಣಿಸಿಕೊಂಡ ನಂತರ ಮಠದ ಭಕ್ತರ ಏಳ್ಗೆಗಾಗಿ ಧರ್ಮರಕ್ಷಕರಾಗಲು ಕಳೆದ ವರ್ಷ ಸಿದ್ದರೇಣುಕರನ್ನು ನೂತನವಾಗಿ ಬಾಳೆಹೊನ್ನೂರುಮಠದ ರಂಭಾಪುರಿ ವೀರಸೀಮಹಾಸನದ ವೀರಸೋಮೇಶ್ವರ ಜಗದ್ಗುರುಗಳ
ಸಾನಿಧ್ಯದಲ್ಲಿ ಪೀಠಾಧಿಪತಿಯಾಗಿ ನೇಮಕ ಮಾಡಿದರು.
ಗುರುವಾರ ಗ್ರಾಮದ ಗುರುಪರಂಪರೆಯ ಗುರುಗಳಾಗಿರುವ ನೀಲಕಂಠಸ್ವಾಮೀಜಿಯವರ ಗುರುಗಳು ರಾತ್ರಿ 10.02ಗಂ.ಗೆ ಲಿಂಗೈಕ್ಯರಾಗಿದರು ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದರಿಂದ
ರಾತ್ರಿಯ ವೇಳೆಯಲ್ಲಿಯೇ ಸಾವಿರಾರು ಭಕ್ತರು ಚಿಮ್ಮಲಗಿ ಗ್ರಾಮಕ್ಕೆ ಆಗಮಿಸಿದರು.
ಇನ್ನು ವಿಜಯಪುರ ಜಿಲ್ಲೆಯಲ್ಲಿ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಯವರು ಲಿಂಗೈಕ್ಯರಾದ ಕೇವಲ 11ದಿನ ಮತ್ತೊಬ್ಬ ಯತಿವರ್ಯರು ಭಕ್ತಗಣಂಗಳಿಂದ ದೂರವಾಗಿರುವದು ಭಕ್ತರಲ್ಲಿ ದುಃಖ ಮಡುಗಟ್ಟುವಂತಾಗಿದೆ.

Leave a Reply

Your email address will not be published. Required fields are marked *

You May Also Like

ಶೌಚದಲ್ಲಿ ಕಾಣದ ನೀರು ? ಪ್ರವಾಸಿಗರ ದಿಗಿಲು !!! “ಪ್ರಯಾಸ-ಪರದಾಟ-ಹೈರಾಣ-ಫಜೀತಿ”

ಆಲಮಟ್ಟಿ: ನಿಸರ್ಗ ಸಹಜ ಕ್ರಿಯೆಗೆ ಹೊತ್ತು ಗೊತ್ತಿಲ್ಲ. ಅದು ಹೇಳಿ ಕೇಳಿ ಬರದು. ಶೌಚಾಲಯಕ್ಕೆ ಕಾಲಿರಿಸುವ…

ಆಲಮಟ್ಟಿಯಲ್ಲಿ ಆದ್ದೂರಿ ವಾಷಿ೯ಕ ಸ್ನೇಹ ಸಮ್ಮೇಳನ- ಮನರಂಜನಾ ಲೋಕ ಅನಾವರಣ ಸಾಂಸ್ಕೃತಿಕ ಕಲರವ…ಮಕ್ಕಳ ಸಂಭ್ರಮ..!

ವರದಿ: ಗುಲಾಬಚಂದ ಜಾಧವಆಲಮಟ್ಟಿ : ಇಲ್ಲಿನ ಎಸ್.ವ್ಹಿ. ವ್ಹಿ ಸಂಸ್ಥೆಯಡಿಯಲ್ಲಿನ ವಿವಿಧ ಶಾಲಾ,ಕಾಲೇಜುಗಳ ವಾಷಿ೯ಕ ಸ್ನೇಹ…

ಮನುಕುಲದ ಸೂರ್ಯ ಲಿಂ.ತೋಂಟದ ಸಿದ್ದಲಿಂಗ ಶ್ರೀ

ಆಲಮಟ್ಟಿ : ಲಿಂ, ತೋಂಟದ ಡಾ.ಸಿದ್ದಲಿಂಗ ಶ್ರೀ ಕರುನಾಡು,ದೇಶ ಕಂಡ ಅಪರೂಪದ ಜೀವ ದೈವ. ನಿಭೀ೯ಡೆ…

ದೇಗುಲಗಳಲ್ಲಿ ಪೂಜಾ ಕೈಂಕರ್ಯ ಸಡಗರ
ಸಂಕ್ರಾಂತಿ ಸೊಗಸು ಆಲಮಟ್ಟಿ ಮೊನಚು..!

ವರದಿ : ಗುಲಾಬಚಂದ ಜಾಧವಆಲಮಟ್ಟಿ: ಶೀತಗಾಳಿ, ಚಳಿ ಲೆಕ್ಕಿಸದೇ ಬೆಳ್ಳಂ ಬೆಳಿಗ್ಗೆ ಜನ ಪ್ರವಾಹ ಇತ್ತ…