ಆಲಮಟ್ಟಿ : ಲಿಂ, ತೋಂಟದ ಡಾ.ಸಿದ್ದಲಿಂಗ ಶ್ರೀ ಕರುನಾಡು,ದೇಶ ಕಂಡ ಅಪರೂಪದ ಜೀವ ದೈವ. ನಿಭೀ೯ಡೆ ನಡೆ,ನುಡಿ ಖ್ಯಾತಿಯ ಪೂಜ್ಯರು ಮಾನವತೆಯ ದಿವ್ಯ ನಂದಾದೀಪವಾಗಿ ಮಿನುಗಿದ್ದಾರೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ನುಡಿದರು. ಇಲ್ಲಿನ ವಚನ ಪಿತಾಮಹ ರಾವಬಹದ್ದೂರ ಡಾ. ಫ.ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ತ್ರಿವಿಧ ದಾಸೋಹಿ ಲಿಂಗೈಕ್ಯ ತೋಂಟದ ಡಾ.ಸಿದ್ದಲಿಂಗ ಮಹಾ ಸ್ವಾಮೀಜಿಯವರ ನಾಲ್ಕನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

   ಲಿಂ,ಸಿದ್ದಲಿಂಗ ಸ್ವಾಮೀಜಿಯವರ ವ್ಯಕ್ತಿತ್ವ  ಶ್ರೀಗಂಧದ ಸುವಾಸನೆಯಂತೆ ಜಗದಗಲಕ್ಕೆ ಪರಿಮಳಿಸಿದೆ. ಸಮಾನತೆ ಭಾವದ ಪೂಜ್ಯರು ಸದಾ ವೈಚಾರಿಕತೆಯ ಚಲನಶೀಲತೆ ಜಾಡಿನಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಅಮೋಘ ಸಮಾಜಮುಖಿ ಕೈಂಕರ್ಯಗಳನ್ನು ಗೈದು ಭಕ್ತ ವೃಂದದವರ ಮನದಲ್ಲಿ ಜನಾನುರಾಗಿ ಜನಪ್ರಿಯರಾಗಿ ನೆಲೆಗೊಂಡಿದ್ದಾರೆ. ಸ್ವಾಮೀತ್ವ ಪದಕ್ಕೆ ಪವಿತ್ರತೆ ಲೇಪಿಸಿದ್ದಾರೆ. ನಮಗೆಲ್ಲ ನವದಿಸೆ ತೋರಿದ್ದಾರೆ. ಪುಸ್ತಕ ಸಂಸ್ಕೃತಿಯ ಹೂರಣದಲ್ಲಿ ಮಿಂದಿರುವ ಸಿದ್ದಲಿಂಗ ಪೂಜ್ಯರು ಸಾಮರಸ್ಯದ ಹರಿಕಾರರು. ಈ ಲೋಕ ಕಂಡ ವೈವಿಧ್ಯತೆಯ ಶಿಖರ ಎಂದು ಬಣ್ಣಿಸಿದರು. ಸಿದ್ದಲಿಂಗ ಶ್ರೀಗಳವರ ಬದುಕು,ಸಾಧನೆ ತುಂಬಾ ರೋಚಕಮಯ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮೌಢ್ಯತೆಗಳಿಗೆ ಎಂದೂ ಅವರು ಅಂಟಿಕೊಳ್ಳಲಿಲ್ಲ.ಇಂಥ ಅಂಧಶ್ರದ್ಧೆಯನ್ನು ನೇರಾ ನೇರ ಪ್ರಬಲವಾಗಿ ಪ್ರತಿಕ್ರಿಯಿಸುವ, ವಿರೋಧಿಸುವ ದಿಟ್ಟ ಛಾತಿ ಎದೆಗಾರಿಕೆ ಹೊಂದಿದ್ದರು.ಅದಕ್ಕೆಂದೆ ಖಡಕ್ ಸ್ವಾಮೀಜಿಗಳಾಗಿ ಜನಮನದಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.

     ಸರ್ವ ಜನಾಂಗದವರನ್ನು ಅದರದಿಂದ ಔದಾರ್ಯತೆಯಿಂದ ಅಭಿಮಾನದಿಂದ ಪ್ರೀತಿಸುವ ಗುಣ ಶ್ರೀಗಳು ಹೊಂದಿದ್ದರು. ಎಲ್ಲರ ಮನಸ್ಸನ್ನು ಶ್ರೀಮಂತಗೊಳಿಸುವ ಇರಾದೆ ಇಚ್ಚೆ ಹೆಮ್ಮರವಾಗಿತ್ತು.ಸರ್ವ ಜನಾಂಗದ ಶಾಂತಿಯ ತೋಟ ಕರುನಾಡು,ಭಾರತ ಅಗಬೇಕೆಂಬ ಉತ್ಕಟ ಬಯಕೆ ಹೊತ್ತಿದ್ದರು. ನಿಜಕ್ಕೂ ತೋಂಟದ ಸಿದ್ದಲಿಂಗ ಶ್ರೀಗಳವರ ಸಾಮಾಜಿಕ ಕಾರ್ಯ,ದಕ್ಷತೆ ನಮಗೆಲ್ಲ ಅದರಣೀಯ ಎಂದರು. ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ, ಬಸವಾದಿ ಶರಣರ ವಿಚಾರಧಾರೆಗಳ ತತ್ವಗಳನ್ನು ತಮ್ಮ ಬದುಕಿನುದ್ದಕ್ಕೂ ಲಿಂ,ತೋಂಟದ ಸಿದ್ದಲಿಂಗ ಸ್ವಾಮೀಜಿಯವರು ಪರಿಪಾಲಿಸಿ  ಮನುಕುಲದ ಪ್ರಖರ ಸೂರ್ಯರಾಗಿ ನಾಗರಿಕತೆಯ ಸಮಾಜಕ್ಕೆ ಕಂಡಿದ್ದಾರೆ ಎಂದರು.

  ಆಂಗ್ಲ ಭಾಷಾ ಶಿಕ್ಷಕ ಆರ್.ಎಂ.ರಾಠೋಡ ಮಾತನಾಡಿ, ಅಪ್ರತಿಮ ಮೌಲ್ಯಗಳನ್ನು ಬಿತ್ತಿ ಮರೆಯಾಗಿರುವ ತೋಂಟದ ಸಿದ್ದಲಿಂಗ ಶ್ರೀಗಳವರ ಜೀವನ ಚರಿತ್ರಾರ್ಹ ಸಾಧನೆ ಇಂದಿನ ವಿದ್ಯಾರ್ಥಿಗಳು ಅರಿಯಬೇಕು. ಮಾತೃಹೃದಯಿ ಭಾವನೆ ಪೂಜ್ಯರಲ್ಲಿ ತುಂಬಿದ್ದರಿಂದಲೇ ಎಲ್ಲಕ್ಕಿಂತ ಶ್ರೇಷ್ಠವಾದ ಅನ್ನ ದಾಸೋಹ,ಅಕ್ಷರ ಜ್ಞಾನ ದಾಸೋಹದಂಥ ಕೈಂಕರ್ಯ ನಿರಂತರ ನಡೆಯುತ್ತಿರಲೆಂಬ ಮಹಾದಾಸೆಯ ಒಲವಿನಿಂದ  ರಾಜ್ಯದ ವಿವಿಧೆಡೆ ನೂರಾರು  ಶಿಕ್ಷಣ ಸಂಸ್ಥೆಗಳನ್ನು ತೆರೆದು ಮಹೋನ್ನತ ಜ್ಞಾನ ದೀಪ್ತಿ ಪ್ರಸಾರ ಕ್ರಾಂತಿ ಮಾಡಿದ್ದಾರೆ. ಶ್ರೀಗಳವರ ಪರೋಪಕಾರದ ಮನ ಎಂದು ಮರೆಯಲಾಗದು.  ಅವರು ಕಟ್ಟಿಸಿ ಬೆಳೆಸಿರುವ ವಿದ್ಯಾ ಮಂದಿರದಲ್ಲಿ ಜ್ಞಾನ ಧಾರೆ ಎರೆಯುತ್ತಾ ಕಲಿಸುತ್ತಿರುವ ಗುರುಗಳು ಹಾಗು ಕಲಿಯುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ಸೌಭಾಗ್ಯವಂತರು. ಪೂಜ್ಯರಿಗೆ ನಾವೆಲ್ಲರೂ ಚಿರಋಣಿಯಾಗಿ ಸದಾ ನೆನೆಯೋಣ. ನಮ್ಮ ಪಾಲಿನ ಕಾಯಕ ಬದ್ದತೆಯಿಂದ ಗೈದು ಓದು ಬರಹದಲ್ಲಿ ಏನಾದರೂ ಒಳ್ಳೆಯ ಸಾಧನೆ ಮಾಡಿ ಪೂಜ್ಯರಿಗೆ ಅಪಿ೯ಸೋಣ ಎಂದರು. 

   ಶ್ರೀಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಗೌರವಪೂರ್ವಕ ನಮನ ಸಲ್ಲಿಸಲಾಯಿತು. ಶಾಲಾ ಮಕ್ಕಳು ಭಾಗಿಯಾಗಿದ್ದರು. ಜಿ.ಆರ್.ಜಾಧವ,ಶಾಂತೂ ತಡಸಿ, ಅನಿತಾ ರಾಠೋಡ,ಪಲ್ಲವಿ ಸಜ್ಜನ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ,ದಾನಾಬಾಯಿ ಲಮಾಣಿ,ಗೋಪಾಲ ಬಸಪ್ಪ ಬಂಡಿವಡ್ಡರ ಇತರರಿದ್ದರು. ಪೋಟೋ : ಆಲಮಟ್ಟಿಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಲಿಂ, ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ನಾಲ್ಕನೇ ಪುಣ್ಯ ಸ್ಮರಣೆ ಆಚರಿಸಲಾಯಿತು

Leave a Reply

Your email address will not be published. Required fields are marked *

You May Also Like

ಲೇಖಕರಾದ ಶ್ರೀಮತಿ ಸುಧಾ ಹುಚ್ಚಣ್ಣವರ ಗೆ ‘ಕದಳಿಶ್ರೀ’ ಪ್ರಶಸ್ತಿ

ಉತ್ತರಪ್ರಭ ಶಿರಹಟ್ಟಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ…

ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಆಕ್ರೋಶ: ಸರ್ಕಾರದ ಕೆಟ್ಟ ಧೋರಣೆ ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲದು

ಸರ್ಕಾರದ ಕೆಟ್ಟ ಧೋರಣೆಗಳು ಎಲ್ಲಿಯವರೆಗೆ ನಡೆಯುತ್ತವೇಯೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವದಿಲ್ಲ ನಮ್ಮ ಕಾರ್ಮಿಕ ವರ್ಗದವರು ಅನುಭವಿಸುವ ನೋವು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಸರ್ಕಾರದ ವಿರುದ್ಧ ಕಿಡಿಕಾರಿದರು.

ನರೆಗಲ್ ಗಾರ್ಡನ್ ಕಥೆ: 10 ಲಕ್ಷ ಖರ್ಚು ಮಾಡಿ 9 ವರ್ಷವಾದ್ರು, ಉಪಯೋಗಕ್ಕೆ ಬಾರದ ಉದ್ಯಾನವನ..!

ಗದಗ: ದೇವಾಲಯದ ಪಕ್ಕದಲ್ಲಿರುವ ಉದ್ಯಾನವನ ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎನ್ನುವಂತಿದೆ. ಸರ್ಕಾರ…