ವರದಿ : ಗುಲಾಬಚಂದ ಜಾಧವ
ಆಲಮಟ್ಟಿ: ಶೀತಗಾಳಿ, ಚಳಿ ಲೆಕ್ಕಿಸದೇ ಬೆಳ್ಳಂ ಬೆಳಿಗ್ಗೆ ಜನ ಪ್ರವಾಹ ಇತ್ತ ಹರಿದು ಬಂದಿತು. ಚುಮ್ ಚುಮ್ ಮುಸುಕು ಮಂಜಿನ ಮರೆಯಲ್ಲಿ ಆಹಹಹಾ ಎಂದು ಕೃಷ್ಣೆಯ ಅಂಗಳದಲ್ಲಿ ಅವರೆಲ್ಲ ಉಸುರಿಸುತ್ತಿದ್ದರು. ಅಸಂಖ್ಯ ಜನತೆ ಕೃಷ್ಣಾ ನದಿ ತೀರದ ದಡಗಳಲ್ಲಿ ಸಂಗಮಿಸಿ ಚಳಿರಾಯನ ಕಚಗುಳಿ ಮಧ್ಯೆ ಪುಣ್ಯ ಸ್ನಾನ ಮಾಡಿ ಧನ್ಯತೆ ಮೆರೆದರು. ಬಳಿಕ ದೇಗುಲಗಳಿಗೆ ತೆರಳಿ ಪೂಜೆ ಪುರಸ್ಕಾರ ಕೈಂಕರ್ಯ ಭಕ್ತಿಭಾವದಿಂದ ಕೈಗೊಂಡರು. ತದನಂತರ ಚಿತ್ತಾಕರ್ಷಕ ಗಾರ್ಡನ್‌ ಗಳೆಲ್ಲ ಜನದಟ್ಟಣೆಯಿಂದ ತುಂಬಿ ತುಳುಕಿದವು. ಎತ್ತ ನೋಡಿದರು ಜನರೋ ಜನ. ಫೂಲ್ ರಶ್. ಹೌಸಘೂಲ್…!

ವೀಕೆಂಡ್ ಭಾನುವಾರ ಉದ್ಯಾನ ನಗರಿ ಆಲಮಟ್ಟಿಯಲ್ಲಿ ಕಂಡು ಬಂದ ದೃಶ್ಯ ವೈಭವಗಳಿವು !
ಮಕರ ಸಂಕ್ರಮಣ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿಗೆ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜನಸ್ತೋಮ ಭೇಟಿ ನೀಡಿ ವಿಶೇಷತೆಗೆ ಸಾಕ್ಷಿಯಾದರು. ಇಲ್ಲಿ ಮೈದೇಳಿರುವ ರಮ್ಯ ನಿಸರ್ಗದ ಮಡಿಲಿನಲ್ಲಿ ಬೇರೆತು ಸಂಕ್ರಾಂತಿ ಹಬ್ಬದ ಪರಿಮಳ ಸಂತಸ,ಸಂಭ್ರಮದಿಂದ ಬೀರಿದರು.
ಸೂರ್ಯನ ಪ್ರಭೆ ಭೂವೊಡಲಿಗೆ ತಾಗುತ್ತಿದ್ದಂತೆ ತಣ್ಣನೆಯಿಂದ ಕಂಗೊಳಿಸುತ್ತಿದ್ದ ತಂಪು ತಂಪು ಉದ್ಯಾನವನದತ್ತ ಜನ ಲಗ್ಗೆಯಿರಿಸಿದರು. ಅದಕ್ಕೂ ಮುನ್ನ ಕೃಷ್ಣಾ ನದಿಯ ಅಲ್ಲಲ್ಲಿ ದಂಡೆಗಳಲ್ಲಿ ಪುಣ್ಯ ಸ್ನಾನಾದಿಗಳನ್ನು ಮುಗಿಸಿ ವಿವಿಧ ದೇಗುಲಗಳ ಸನ್ನಿಧಿಯಲ್ಲಿ ಸೇರಿದರು. ಭಕ್ತಿಭಾವದಿಂದ ಸುಕ್ಷೇತ್ರ ಯಲಗೂರ ಗ್ರಾಮದ ಯಲಗುರೇಶನ, ಚಂದ್ರಗಿರಿ ಚಂದ್ರಮ್ಮಾದೇವಿಯ ದರ್ಶನ ಸೇರಿದಂತೆ ಯಲ್ಲಮ್ಮನ ಬೂದಿಹಾಳ, ಆಲಮಟ್ಟಿ ಅನ್ನದಾನೇಶ್ವರ ಮಠಕ್ಕೆ ಮತ್ತು ಆಲಮಟ್ಟಿ ಅಕ್ಕಪಕ್ಕದ ಇನ್ನಿತರ ಪ್ರಸಿದ್ಧ ದೇಗುಲಗಳಿಗೆ ತೆರಳಿ ದೇವರ ಕೃಪೆಗೆ ಪಾತ್ರರಾದರು.


ದೇವಸ್ಥಾನಗಳು ಸಹ ಜನತೆಯಿಂದ ತುಂಬಿದವು. ಈ ಪುಣ್ಯ ಪರ್ವಕಾಲದಲ್ಲಿ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿದವು. ಮಧ್ಯಾಹ್ನವಾಗುತ್ತಿದ್ದಂತೆ ಜನಜಂಗುಳಿ ಹೆಚ್ಚಾಯಿತು. ಉದ್ಯಾನವನದಲ್ಲಿ ಹಾಗೂ ರಸ್ತೆಗಳಲ್ಲಿ ವಿಪರೀತ ಜನಸಮೂಹ ಕಂಡು ಬಂತು. ಸಂಜೆವಾಗುತ್ತಿದ್ದಂತೆ ಮತ್ತಿಷ್ಟು ಜನದಟ್ಟಣೆ ದ್ವಿಗುಣ ಕಂಡಿತು.
ವಿಶೇಷ ಸ್ವಾದಿಷ್ಟ ಭೋಜನ ಸವಿದ ಜನ ! ಹಿರಿಯರು,ಕಿರಿಯರು ಎನ್ನದೇ ಭಾಗಶಃ ಎಲ್ಲ ವಯೋಮಾನದವರು ಇತ್ತ ಧಾವಿಸಿದ್ದರು. ಮನೆ ಮಂದಿ,ಚಿಕ್ಕ ಮಕ್ಕಳಯಾದಿಯಾಗಿ ಲಗ್ಗೆಯಿರಿದ್ದರು. ಮನೆಯಿಂದ ಬರುವಾಗ ಬುತ್ತಿಗಂಟು ಕಟ್ಟಿಕೊಂಡು ಬಂದಿದ ಜನ ಮಧ್ಯಾಹ್ನ ಗಾರ್ಡನ್ ಗಳಲ್ಲಿ, ಇತರೆ ಜಾಗದಲ್ಲಿ ಬುತ್ತಿ ಬಿಚ್ಚಿ ಸವಿರುಚಿ ಅಡುಗೆಯ ಭಕ್ಷಭೋಜನ ಸವಿದು ಸಂತಪಟ್ಟರು. ಈ ನೋಟದ ಸೊಬಗು, ಸೊಗಸು ಬಲು ಚಂದವಾಗಿತ್ತು. ಒಲವು, ನಲಿವಿನ ಸಡಗರ ಮಾರ್ದನಿಸಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಂಕ್ರಾಂತಿ ಸಂಭ್ರಮ ಜೋರಾಗಿತ್ತು.


ಭಕ್ತಿ, ಸಂತೋಷ ಅಪರಿಮಿತ…! ಅನೇಕ ಕಡೆಗಳಿಂದ ಆಗಮಿಸಿದ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ ಹಾಗೂ ಅವರೆಲ್ಲ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದು ಸಂಭ್ರಮದಿಂದ ನಲಿದಾಡಿದರು.
ಪ್ರಕೃತಿ ಪ್ರಿಯರ ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿರುವ ಆಲಮಟ್ಟಿ ಭಿನ್ನಾಣ, ವಯ್ಯಾರ ಅನನ್ಯ. ಕಣ್ಣಿಗೆ ಕಟ್ಟುವಂತೆ ಧರೆ ಮೇಲಿನ ಹಚ್ಚ ಹಸಿರು ತಾಜಾತನದ ನಿಸರ್ಗವಾಗಿದೆ. ಸಹಸ್ರಾರು ವಿಭಿನ್ನ ಸಸ್ಯ ಹಸಿರೆಲೆಗಳ ಲೋಕ ಇಲ್ಲಿ ಸೃಷ್ಟಿಯಾಗಿದೆ. ಅದರ ಪರಿಮಳ, ಸುವಾಸನೆ ಪ್ರಫೂಲ್ ವಾಗಿ ಎಲ್ಲೆಡೆಗೂ ಸೂಸಿದೆ. ಅದ್ಬುತ ಉದ್ಯಾನವನಗಳು ಒಂದಕ್ಕಿಂತ ಒಂದು ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತವೆ. ಪ್ರವೇಶ ದ್ವಾರದ ಮುಕುಟವೇ ಕುತೂಹಲ ಕೆರಳಿಸುತ್ತದೆ. ವಿಶೇಷ ದಿನಗಳಲ್ಲಿ ಹೃನ್ಮನ ಗೆಲ್ಲುವ ರಸವತ್ತಾದ ಸ್ಪಾಟ್ ತಾಣಗಳಿವೆ. ಅವುಗಳನ್ನು ಹತ್ತಿರದಲ್ಲೇ ನೋಡಿ ಕಣ್ತುಂಬಿಸಿಕೊಳ್ಳಬಹುದು. ಖುಷಿಯ ಆಮಲಿನಲ್ಲಿ ತೇಲಬಹುದಾಗಿದೆ. ವೈವಿಧ್ಯಮಯ ಗಾರ್ಡನ್ ಜನಾಕಷಿ೯ತವಾಗಿವೆ. ಹೀಗಾಗಿ ಧರೆ ಮೇಲಿನ ಸ್ವರ್ಗ ಎಂದು ಜನಜನಿತವಾಗಿದೆ. ನಿಸರ್ಗ ಪ್ರಿಯರಿಗೆ ದಿವ್ಯಾನುಭೂತಿ ಉಂಟು ಮಾಡುತ್ತದೆ. ಇಲ್ಲಿ ಹೆಜ್ಜೆಯಿರಿಸಿದರೇ ಸಾಕು. ವಿಸ್ಮಯ ಲೋಕದ ಹಸಿರು ನವ್ಯತೆ ಸಂಚಲನ ಉಂಟಾಗುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಂಕ್ರಾಂತಿಗೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿರೀಕ್ಷೆಗೂ ಮೀರಿ ಜನರು ಬಂದಿರುವುದು ಕಂಡುಬಂತು.


ಕೃಷ್ಣಾ ನದಿ ದಂಡೆ, ಸೇರಿದಂತೆ ವಿವಿಧೆಡೆ ಜನಸಾಗರ ಕಂಡು ಬಂತು. ಆಲಮಟ್ಟಿ ಯಾವಾಗಲೂ ಕೃಷ್ಣಾ ನದಿ ನೀರು ಹಂಚಿಕೆ, ಕೃಷ್ಣಾ ನದಿಗೆ ಮಹಾಪೂರದಿಂದಲೇ ಪ್ರಸಿದ್ಧಿ. ಆದರೇ ಇಂದು ಸಂಕ್ರಮಣದ ನಿಮಿತ್ಯ ಎಲ್ಲೆಡೆಯೂ ಜನ ಮಹಾಪೂರದಂತೆ ಆಗಮಿಸುತ್ತಿದ್ದರು. ಟ್ಯಾಕ್ಟರ್, ಅಟೋ, ಬಂಡೆ, ಬಸ್‍ಗಳ ಮೂಲಕ ಬೆಳಿಗ್ಗೆಯಿಂದಲೇ ಜನ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಹಸ್ರಾರು ಜನತೆ ಕೃಷ್ಣೆಯಲ್ಲಿ ಮಿಂದು ಅಲ್ಲಿಯೇ ಪಕ್ಕದ ನದಿ ದಂಡೆ ಮೇಲೆ, ವಿವಿಧ ಉದ್ಯಾನವನಗಳಲ್ಲಿ ಜನ ಊಟ ಮಾಡುವುದು, ಹಳ್ಳಿಯ ಜನರು ಶೇಂಗಾ ಹೋಳಗಿ, ಕಡಕ್ ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಮೊಸರು, ಬದನೆ ಕಾಯಿ ಪಲ್ಯೆ ಮೊದಲಾದವುಗಳನ್ನು ಬಹುತೇಕ ಜನ ತಂದು ಮೃಷ್ಟಾನ್ನ ಭೋಜನ ಸೇವಿಸಿದ್ದು ಕಂಡು ಬಂತು. ಮಕ್ಕಳಂತೂ ನದಿ ತೀರದಲ್ಲಿ ಆಟ ಆಡಿ ವಿಜ್ರಂಭಿಸಿದರು.
ರಾಕ್ ಉದ್ಯಾನವನದ ಪ್ರವೇಶ ದ್ವಾರ ಮಧ್ಯಾಹ್ನ 2 ರ ನಂತರ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಿಗೆ ಆಗಿದ್ದರಿಂದ ಪ್ರವಾಸಿಗರು ಟಿಕೆಟ್ ಪಡೆಯಲು ಹರಸಾಹಸ ಮಾಡುತ್ತಿದ್ದರು. ಒಟ್ಟಾರೇ ಆಲಮಟ್ಟಿಯಲ್ಲಿಂದು ಜನ ಜಾತ್ರೆ ನೆರದಿತ್ತು. ಮುಸ್ಸಂಜೆ ಮೋಘಲ್ ಪ್ಲಾಜಾ ಮುಂದೆ ಜನಸಾಗರ ಜಮಾವಣೆಯಾಗಿತ್ತು. ಸಂಗೀತ ಕಾರಂಜಿ ನೋಡಲು ತವಕ ಹೆಚ್ಚಾಗಿತ್ತು.
ಆಲಮಟ್ಟಿಯ ರಾಕ್, ಲವಕುಶ, ಕೃಷ್ಣಾ ಉದ್ಯಾನ, ಸಂಗೀತ ಕಾರಂಜಿ ದಿಂದ ಒಟ್ಟಾರೆ ಅಧಿಕ ಪ್ರವೇಶ ದರ ಈ ಬಾರಿ ಸಂಗ್ರಹವಾಗಿದೆ ಎಂದು ಆರ್. ಎಫ್‍.ಓ ಮಹೇಶ ಪಾಟೀಲ ಮಾಹಿತಿ ನೀಡಿದರು.

ಪಾಕಿ೯ಂಗ್ ದಟ್ಟಣೆ: ವಾಹನಗಳ ದಟ್ಟಣೆ ಹೆಚ್ಚಿದ್ದರಿಂದ ವಾಹನ ನಿಲ್ಲಿಸಲು ಜನರು ಪರದಾಡಿದರು. ರಾಕ್ ಉದ್ಯಾನದ ಪಕ್ಕದಲ್ಲಿನ ಪಾಕಿ೯ಂಗ್ ಲಾಟ್ ಹೊರತುಪಡಿಸಿ ರಸ್ತೆಯುದ್ದಕ್ಕೂ ಅಡ್ಜಾದಿಡ್ಜಿಯಾಗಿ ವಾಹನ ನಿಲ್ಲಿಸಿದ್ದರಿಂದ ಸಂಚಾರ ದಟ್ಟಣೆಯಿಂದ ಸಮಸ್ಯೆ ಉಂಟಾಯಿತು.
ಎಂ.ಡಿ.ಕಚೇರಿ ಬಳಿ,ಜಲಾಶಯದ ಬಳಿ, ಪ್ರವಾಸಿ ಮಂದಿರ ಬಳಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಪುತ್ಥಳಿಯಿಂದ ಹಿಡಿದು ಜಲಾಶಯದವರೆಗೆ ರಸ್ತೆಯ ಎರಡು ಬದಿ ವಾಹನಗಳ ಸಾಲು ಸಾಲೇ ಕಂಡು ಬಂತು. ಅಲ್ಲೆಲ್ಲಾ ಪಾಕಿ೯ಂಗ್ ಮಾಡಿಸಿದಾಗ್ಯೂ ವಾಹನ ನಿಲುಗಡೆಗೆ ಜಾಗ ಇರಲಿಲ್ಲ. ಪ್ರತಿ ವರ್ಷ ಹೆಲಿಪ್ಯಾಡ್ ನಲ್ಲಿ ಪಾಕಿ೯ಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಸಲ ಹೆಲಿಪ್ಯಾಡ್ ನಲ್ಲಿ ಕಾಮಗಾರಿ ನಡೆದಿರುವುದರಿಂದ ಅಲ್ಲಿ ಪಾಕಿ೯ಂಗ್ ಗೆ ಅವಕಾಶ ಕಲ್ಪಿಸಲಿಲ್ಲ.
ಪೋಲೀಸ್ ಬಂದೋ ಬಸ್ತ್ ಸಂಕ್ರಮಣ ಗದ್ದಲ ಹೆಚ್ಚುವುದನ್ನು ಮೊದಲೇ ಅರಿತಿದ್ದರಿಂದ ನಿಡಗುಂದಿ ಸುತ್ತಮುತ್ತಲಿನ 90 ಕ್ಕೂ ಹೆಚ್ಚು ಪೋಲೀಸರು ನಿಯೋಜನೆಗೊಂಡಿದ್ದರು. ಆದರೂ ವಾಹನಗಳ ನಿಯಮತ್ರಣ ಕಾರ್ಯ ಸಮರ್ಪಕವಾಗಿ ಜರುಗಲಿಲ್ಲ ಎಂಬ ದೂರಗಳು ಕೇಳಿ ಬಂದಿತ್ತು. ಸಿಪಿಐ ಸೋಮಶೇಖರ್ ಜುಟ್ಟಲ ನೇತ್ರತ್ವದಲ್ಲಿ 7 ಜನ ಪಿಎಸ್ ಐ, 2 ಡಿ ಆರ್ ವಾಹನ ಸೇರಿದಂತೆ 90 ಜನ ಪೋಲಿಸರು ಭದ್ರತೆಗೆ ನಿಯೋಜನೆಗೊಂಡಿದ್ದರು.
250 ಜನ ಅರಣ್ಯ ಇಲಾಖೆಯ ಸಿಬ್ಬಂದಿ ! ಆಲಮಟ್ಟಿಯ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಡಿಎಫ್ ಓ ಆರ್. ನಾಗಶೆಟ್ಚಿ ಹಾಗೂ ಆರ್ ಎಫ್ ಓ ಮಹೇಶ ಪಾಟೀಲ ನೇತೃತ್ವದಲ್ಲಿ 250 ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ದಿನಗೂಲಿಗಳು ಪ್ರವಾಸಿಗರ ಮೂಲಭೂತ ಸೌಕರ್ಯ ಒದಗಿಸಲು ನರವಾದರು. ಇವರ ಜೊತೆ ಆಲಮಟ್ಟಿ ಕೆಎಸ್ ಐ ಎಸ್ ಎಫ್ ಇನ್ಸಪೆಕ್ಟರ್ ಶರಣಬಸವರಾಜ ನೇತೃತ್ವದಲ್ಲಿ ಕೆಎಸ್ ಐ ಎಸ್ ಪೋಲೀಸರು ಕೂಡಾ ಸಮರೋಪಾದಿಯಲ್ಲಿ ಕಾರ್ಯ ಕೈಗೊಂಡರು.
ಓರ್ವ ಡಿವೈಎಸ್‍ಪಿ, ಓರ್ವ ಸಿಪಿಐ ಐವರು ಪಿಎಸ್‍ಐ, ಜನ ಎಎಸೈ, ಮುಖ್ಯಪೇದೆ, ಪೊಲೀಸ್ ಪೇದೆ, ಎರಡು ಡಿಆರ್ ವ್ಯಾನ್, ಕೆಎಸ್‍ಐಎಸ್‍ಎಫ್ ಪೊಲೀಸರು, ಅರಣ್ಯ ಇಲಾಖೆಯ ದಿನಗೂಲಿಗಳು ಭದ್ರತೆಗೆ ನಿಯೋಜನೆಗೊಂಡಿದ್ದರು..

Leave a Reply

Your email address will not be published. Required fields are marked *

You May Also Like

ಗಣೇಶ ಸಂಭ್ರಮ- ಸಾಂಸ್ಕೃತಿಕ ಕಲರವ

ಉತ್ತರಪ್ರಭ ಸುದ್ದಿಆಲಮಟ್ಟಿ: ಇಲ್ಲಿನ ವಿವಿಧ ಬಡಾವಣೆಯಲ್ಲಿ ಗಣೇಶ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಲ ಗಜಾನನ ಯುವಕ…

ಆಗಷ್ಟ 5 ರಿಂದ 8 ದಿನಗಳಕಾಲ ಆಲಮಟ್ಟಿ ಟೂ ತಾಳಿಕೋಟಿ ಯುವಜನ ಸಂಕಲ್ಪ ನಡಿಗೆ ಯಾತ್ರೆ

20 ಸಾವಿರ ಯುವಕ-ಯುವತಿಯರಿಗೆ ಸಮವಸ್ತ್ರ ವಿತರಣೆ- ಆಲಮಟ್ಟಿಯಲ್ಲಿ ಶಾಸಕ ನಡಹಳ್ಳಿ ಚಾಲನೆಉತ್ತರಪ್ರಭಆಲಮಟ್ಟಿ: 75 ನೇ ಸ್ವಾತಂತ್ರ್ಯ…

ಶೇ 40 ರಷ್ಟು ಮಧ್ಯಂತರ ಪರಿಹಾರಕ್ಕೆ ಆಗ್ರಹ : ಮಾ.1 ರಿಂದ ನೌಕರರ ಮುಷ್ಕರ-ದಳವಾಯಿ

ಆಲಮಟ್ಟಿ: ಶೇ 40 ರಷ್ಟು ಮಧ್ಯಂತರ ಪರಿಹಾರಕ್ಕೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ…

ಶೌಚದಲ್ಲಿ ಕಾಣದ ನೀರು ? ಪ್ರವಾಸಿಗರ ದಿಗಿಲು !!!
“ಪ್ರಯಾಸ-ಪರದಾಟ-ಹೈರಾಣ-ಫಜೀತಿ”

ಉತ್ತರಪ್ರಭ ಸುದ್ದಿಆಲಮಟ್ಟಿ: ನಿಸರ್ಗ ಸಹಜ ಕ್ರಿಯೆಗೆ ಹೊತ್ತು ಗೊತ್ತಿಲ್ಲ. ಅದು ಹೇಳಿ ಕೇಳಿ ಬರದು. ಶೌಚಾಲಯಕ್ಕೆ…