ಉತ್ತರಪ್ರಭ
ಆಲಮಟ್ಟಿ: ಆತ ನೋಡಲು ಸುಂದರವಾಗಿದ್ದಾನೆ. ಮಾತುಗಳು ಮುಗ್ದತೆಯಿಂದಿವೆ. ಪುರುಷರಾಡುವ ನುಡಿಗಳಿಂತಿಲ್ಲ ಆತನ ಮಾತುಗಳು. ಸ್ವಭಾವ, ಹಾವ ಭಾವವಂತೂ ನಾಜೂಕು. ಮಹಿಳೆಯರುಡುವ ಬಟ್ಟೆ, ವಸ್ತ್ರಗಳೆಂದರೆ ಪ್ರೀತಿ, ವ್ಯಾಮೋಹ. ಬುಖಾ೯ಧರಿಸುವ ಹವ್ಯಾಸ ಅಗಾಗ ಬೆಳೆಸಿಕೊಂಡಿದ್ದಾನೆ. ಅದು ಇದೀಗ ಎಡವಟ್ಟಿಗೆ ಕಾರಣವಾಗಿ ಫಜೀತಿಗೆ ಸಿಲುಕಿದ್ದಾನೆ. ಪೋಲೀಸರ ಬಲೆಯಲ್ಲಿ ಬಿದ್ದು ವಿಚಾರಣೆ ಎದುರಿಸುತ್ತಿದ್ದಾನೆ ಆತ..! ಇಂಥದೊಂದು ವಿಲಕ್ಷಣ ರೀತಿಯ ಸನ್ನಿವೇಶದಲ್ಲಿ ಯುವಕನೋರ್ವ ಗೋಚರವಾಗಿ ಪೋಲೀಸರ ವಶಕ್ಕೆ ಒಳಗಾಗಿದ್ದಾನೆ. ತೀವ್ರ ವಿಚಾರಣೆ ಎದುರಿಸುತ್ತಿತಿರುವ ಘಟನೆಯೊಂದು ಆಲಮಟ್ಟಿಯಲ್ಲಿ ಸೋಮವಾರ ಮುಂಜಾನೆ ನಡೆದಿರುವುದು ಬೆಳಕಿಗೆ ಬಂದಿದೆ.

ಅಂದಹಾಗೆ, ಏನಿದು ಕುತೂಹಲ,ಕೌತಕ ಘಟನೆ ?
ಸೋಮವಾರ ಮುಂಜಾವಿನ ವೇಳೆ ಮಹಿಳೆಯರ ವೇಷದಲ್ಲಿದ್ದ ಶಂಕಿತ ಯುವಕನೊಬ್ಬ ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನುಗ್ಗಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ಬೆಳಗಿನ ಜಾವ ಆಲಮಟ್ಟಿ ಪರಿಸರದಲ್ಲಿ ಕಾಣಿಸಿಕೊಂಡ ಯುವಕ ಬುರ್ಖಾ ಧರಿಸಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯ ಪ್ರವೇಶಕ್ಕೆ ಮುಂದಾಗಿದ್ದಾನೆ. ಈ ವೇಳೆ ಜಲಾಶಯದ ಪ್ರವೇಶ ದ್ವಾರದಲ್ಲಿ ಭದ್ರತೆಗೆ ಇದ್ದ ಪೊಲೀಸರು ಇಷ್ಟು ಬೇಗ ಜಲಾಶಯ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಈ ವೇಳೆ ನಡೆದ ಮಾತುಕತೆಯಲ್ಲಿ ಬುರ್ಖಾ ಧರಿಸಿದ್ದು ಮಹಿಳೆಯಲ್ಲ ಪುರುಷ ಎಂಬುದು ಧ್ವನಿಯಿಂದ ಸ್ಪಷ್ಟವಾಗಿದೆ. ಪರಿಣಾಮ ಪೊಲೀಸರು ಆತನ ಮೇಲೆ ನಿಗಾ ಇರಿಸಿದಾಗ ಕೆಲ ಸಮಯದ ಬಳಿಕ ಬುರ್ಖಾಧಾರಿ ಪಕ್ಕದ ಬೇಲಿಯತ್ತ ತೆರಳಿ ಬುರ್ಖಾ ಬದಲಿಸಿ ಯುವಕನ ವೇಷದಲ್ಲಿ ಮತ್ತೆ ಜಲಾಶಯದ ಪ್ರವೇಶ ದ್ವಾರದಲ್ಲಿ ಪತ್ತೆಯಾಗಿದ್ದಾನೆ.
ಇದರಿಂದ ಕೂಡಲೇ ಎಚ್ಚೆತ್ತ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕೈಚೀಲದಲ್ಲಿ ಯುವತಿಯರು ಧರಿಸುವ ಬಟ್ಟೆಗಳು, ಲಿಪ್ ಸ್ಟಿಕ್, ನೈಲ್ ಪಾಲಿಶ್ ಹೀಗೆ ಇತರೆ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ವಶಕ್ಕೆ ಪಡೆದ ಯುವಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ವಶದಲ್ಲಿರುವ ಯುವಕ ಒಮ್ಮೆ ಕಿಶೋರ ಅಂತಾ ತನ್ನ ಹೆಸರು ಹೇಳುತ್ತಾನೆ. ಮತ್ತೊಮ್ಮೆ ಯಾರಾದರು ಕೇಳಿದರೆ ಮತ್ತೆ ಬೇರೆ ಹೆಸರು ಹೇಳಿಕೊಳ್ಳುತ್ತಾನೆ. ಹೀಗೆ ಹಲವು ಬಗೆಯ ಹೆಸರುಗಳನ್ನು ಹೇಳುತ್ತಿದ್ದು, ತಾನು ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಎಂದು ಹೇಳಿಕೊಂಡಿದ್ದಾನೆ.
ಸಕಲೇಶಪುರ ಪಟ್ಟಣದಲ್ಲಿ ಎರಡು ಬೇಕರಿ ಅಂಗಡಿ ಹೊಂದಿರುವುದಾಗಿ, ದೈಹಿಕವಾಗಿ ತನ್ನಲ್ಲಿ ಮಹಿಳಾತನ ಪರಿವರ್ತನೆ ಆಗುತ್ತಿರುವ ಕಾರಣ ಯುವತಿಯರ ವೇಷ ಧರಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.
ಹೆತ್ತವರು ತನಗೆ ಮದುವೆ ಮಾಡಲು ವಧು ಅನ್ವೇಷಣೆ ಮಾಡುತ್ತಿದ್ದಾರೆ. ನನ್ನಲ್ಲಿ ಗಂಡಿನಿಂದ ಹೆಣ್ಣಿನ ಬದಲಾವಣೆಯಾಗುತ್ತಿದೆ. ಹೀಗಾಗಿ ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿರುವ ನನಗೆ ಮದುವೆ ಬೇಡ ಎಂದರೂ ಒತ್ತಡ ಹೇರುತ್ತಿರುವ ಕಾರಣ ಮನೆ ತೊರೆದು ಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ಪೊಲೀಸರಿಗೆ ಲಿಂಗ ಪರಿವರ್ತನೆಯ ಭೀತಿಯಲ್ಲಿರುವ ಯುವಕನ ವಿಚಿತ್ರ ವರ್ತನೆ ಮಾತ್ರ ಎಂಬ ಮಾಹಿತಿ ಲಭಿಸಿದೆ.
ಆದರೂ ಯುವಕ ಹಾಸನದಿಂದ ಆಲಮಟ್ಟಿಗೆ ಬಂದದ್ದು ಏಕೆ, ನಸುಕಿನಲ್ಲೇ ಜಲಾಶಯ ಪ್ರವೇಶಕ್ಕೆ ಯತ್ನಿಸಿದ್ದು ಏಕೆ ಎಂದೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಆಲಮಟ್ಟಿ ಪೋಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.