ಸೈಯ್ಯದ್ ಅಹಮದ್ ಖಾನ್ (1817-1898) ಆಧುನಿಕ ಭಾರತದ ಇಸ್ಲಾಂ ಚಿಂತಕರಲ್ಲಿ ಮೊದಲಿಗರಿವವರು. ಆಧುನಿಕ ಉನ್ನತ ಶಿಕ್ಷಣ ಹಾಗೂ ಆಡಳಿತದ ಮೂಲಕ ಮಾತ್ರ ಭಾರತೀಯ ಮುಸ್ಲಿಂರ ಏಳ್ಗೆ ಸಾಧ್ಯವೆಂದು ಅರಿತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣಕರ್ತರಾದವರು ಹೆಸರಾಂತ ಬರಹಗಾರರು.

ಇವರು 1817 ಅಕ್ಟೋಬರ್ 17 ರಂದು ದೆಹಲಿಯಲ್ಲಿ ಜನಿಸಿದವರು. ಇವರ ತಂದೆ ಸೈಯದ್ ಅಹಮದ್ ತಾಖಿ ಅಂತ. ಇವರ ವಂಶಜರು ಮೊಗಲ್ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದರು. ಇವರ ತಾತ ಈಸ್ಟ್ ಇಂಡಿಯ ಕಂಪನಿಯ ಸೇವೆಯಲ್ಲಿದ್ದ ಕಾರಣ ಸಹಜವಾಗಿಯೇ ಅಹಮದ್ ಖಾನ್ ಅವರಿಗೆ ಉತ್ತಮ ಶಿಕ್ಷಣ ದೊರಕಿತು. ಇವರು ಲಖನೌನಲ್ಲಿ ವ್ಯಾಸಂಗ ಮುಗಿಸಿ ತಮ್ಮ 30 ನೆಯ ವಯಸ್ಸಿನಲ್ಲಿ ಮೊಗಲರ ಕೊನೆಯ ದೊರೆ ಎರಡನೆಯ ಬಹದ್ದೂರ್ ಷಾನ ಆಸ್ಥಾನದಲ್ಲಿ ಹುದ್ದೆಗೆ ಸೇರಿದರು. ಆ ಕಾಲದಲ್ಲಿ ಮೊಗಲ್ ಸಾಮ್ರಾಟ್ ಕೇವಲ ತೋರಿಕೆಗಷ್ಟೇ ಅಧಿಕಾರ ಹೊಂದಿದ್ದರು. ಬ್ರಿಟಿಷರ ಆಣತಿಯ ಮೇಲೆ ಆಡಳಿತ ನಡೆಸುತ್ತಿದ್ದ ಕಾರಣ ಆ ಕೆಲಸ ತ್ಯಜಿಸಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಶಿರಸ್ತೇದಾರ್ ಆಗಿ ನೇಮಕಗೊಂಡರು. 1846-55 ರ ವರೆಗೆ ಕಲ್ಕತ್ತಾದಲ್ಲಿ ಸೇವೆ ಸಲ್ಲಿಸಿ ಅನಂತರ ದೆಹಲಿಗೆ ವರ್ಗಗೊಂಡರು.

1855 ರಲ್ಲಿ ಬಿಜನೂರ್ ನಲ್ಲಿ ನ್ಯಾಯಾಧೀಶರಾಗಿ ಸೇವೆಗೆ ಸೇರಿದರು. ಈ ವೇಳೆಯಲ್ಲಿ ದೆಹಲಿಯಲ್ಲಿ ಉಂಟಾದ ಸಿಪಾಯಿ ಧಂಗೆ ಅಥವಾ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮವನ್ನು ಕಣ್ಣಾರೆ ಕಂಡು ಮುಸ್ಲಿಂ ಸಮುದಾಯದ ಮೇಲೆ ಬ್ರಿಟಿಷ್ ಅಧಿಕಾರಿಗಳು ನಡೆಸಿದ ಕ್ರೂರ ದೌರ್ಜನ್ಯಕ್ಕಾಗಿ ಮರುಗಿದರು. ಆಡಳಿತದಲ್ಲಿ ಭಾಗವಹಿಸಲು ಆಧುನಿಕ ಉನ್ನತ ಶಿಕ್ಷಣದ ಅವಶ್ಯಕತೆಯ ಮನಗಂಡು ಅದಕ್ಕಾಗಿ ಶ್ರಮಿಸಲು ಕಂಕಣ ತೊಟ್ಟರು. ಈ ವೇಳೆಯಲ್ಲಿ ದೆಹಲಿಯ ಪುರಾತತ್ವ ಚರಿತ್ರೆ ಎಂಬ ತಮ್ಮ ಪ್ರಥಮ ಗ್ರಂಥವನ್ನು ರಚಿಸಿ ದೆಹಲಿಯ ವಾಸ್ತುಶಿಲ್ಪದ ಬಗ್ಗೆ ಪರಿಪೂರ್ಣ ಮಾಹಿತಿ ನೀಡಿದರು. ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಅಬುಲ್ ಫಜಲ್ ರಚಿಸಿರುವ ಐನ್-ಇ-ಅಕ್ಬರಿ ಕೃತಿಯನ್ನು ಸಂಪಾದಿಸಿ ಅದಕ್ಕೆ ಜಹಾಂಗೀರ್ ಹಾಗೂ ಜಿಯಾ ಉದ್-ದಿನ್-ಬರಾಸ್‌ರ ಆತ್ಮಕತೆಯನ್ನು ಸೇರಿಸಿ ಪ್ರಕಟಿಸಿದರು. 1861ರಲ್ಲಿ ಎಂ. ಗಾರ್ಸಿನ್ ಡಿ ತಾಸಿಯವರು ರಚಿಸಿದ ಫ್ರೆಂಚ್ ಭಾಷೆಯ ದೆಹಲಿ ಪುರಾತತ್ವ ಬಗೆಗಿನ ಗ್ರಂಥವನ್ನು ಭಾಷಾಂತರಿಸಿ ಪ್ರಕಟಿಸಿದರು. 1864ರಲ್ಲಿ ಇವರಿಗೆ ಲಂಡನ್‌ನ ರಾಯಲ್ ಏಷಿಯಾಟಿಕ್ ಸೊಸೈಟಿಯ ಗೌರವ ಸದಸ್ಯತ್ವ ದೊರೆಯಿತು. 10 ವರ್ಷ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಅನಂತರ 1869 ರಲ್ಲಿ ತಮ್ಮ ಮಗನೊಡನೆ ಕೇಂಬ್ರಿಜ್‌ಗೆ ತೆರಳಿದರು.

ಲಂಡನ್ ನಲ್ಲಿನ ಸಹವಾಸ, ಚರ್ಚೆ, ಅಧ್ಯಯನಗಳ ಫಲವಾಗಿ ಉನ್ನತ ಚಿಂತನೆಗಳು ಇವರಿಗೆ ಮನವರಿಕೆಯಾದವು. ಭಾರತದ ಶಾಸಕಾಂಗ ಸಭೆಯಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯ ಅನಿವಾರ್ಯತೆಯ ಬಗ್ಗೆ ಬ್ರಿಟೀಷ್ ಸಂಸತ್ತಿನಲ್ಲಿ ವಿಚಾರ ಮಂಡಿಸಿ ಯಶಸ್ವಿಯಾದರು. 1866ರಲ್ಲಿ ಪ್ರಾರಂಭವಾದ ಅಲಿಘರ್ ಇನ್ಸಿ÷್ಟಟ್ಯೂಟ್ ಗೆಜೆಟ್ ಭಾರತೀಯರಿಗೆ ಉನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡುವಂತಾಯಿತು. 1866ರ ಫೆಬ್ರವರಿ 14 ರಂದು ವಿಜ್ಙಾನ ಸಂಸ್ಥೆಯನ್ನು ಅಲಿಘರ್ ನಲ್ಲಿ ಸ್ಥಾಪಿಸಿದರು. 1870ರಲ್ಲಿ ಮಹಮ್ಮದೀಯರ ಸಾಮಾಜಿಕ ವ್ಯವಸ್ಥೆ ಕುರಿತು ಒಂದು ಲೇಖನ ಪ್ರಕಟಿಸಿದರು. ಆಗ ಇಸ್ಲಾಂ ಸಂಪ್ರದಾಯಸ್ಥರ ವಿರೋಧವನ್ನು ಎದುರಿಸಿ ತಮ್ಮದೇ ಆದ ವೈಜ್ಙಾನಿಕ ಹಿನ್ನಲೆಯಲ್ಲಿ ಕುರಾನ್ ಧರ್ಮಗ್ರಂಥವನ್ನು ಕುರಿತು ವಿಮರ್ಶೆಯನ್ನು ಪ್ರಕಟಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ 1858ರಲ್ಲಿ ಮುರಾದ್‌ಬಾದ್, 1863 ಗಾಜೀಪುರದಲ್ಲಿ ಶಿಕ್ಷಣ ಸಂಸ್ಥೆ ತೆರೆದದ್ದು ಇವರ ಪ್ರಮುಖ ಸಾಧನೆ. 1776ರಲ್ಲಿ ಬನಾರಸ್‌ನಲ್ಲಿ ಉರ್ದು ಅಥವಾ ಪರ್ಷಿಯನ್ ಭಾಷೆ ಮಾಧ್ಯಮದ ಉನ್ನತ ಶಿಕ್ಷಣ ಕೇಂದ್ರವನ್ನು ತೆರೆಯಲು ಬ್ರಿಟಿಷ್ ಸರ್ಕಾರವನ್ನು ಆಗ್ರಹಿಸಿದಾಗ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಸಂಘರ್ಷ ಕಂಡುಬAದಿತು. ಸಂಸ್ಕೃತ ಹಾಗೂ ಉರ್ದು ಸಮಸ್ಯೆ ಕೋಮುವಾದಕ್ಕೆ ಕಾರಣವಾಗಬಾರದೆಂದು ಅರಿತು ಅಲಿಘರ್‌ಗೆ ಹಿಂದಿರುಗಿದರು.

ಕಲ್ಕತ್ತಾ ವಿಶ್ವವಿದ್ಯಾಲಯದಂತೆಯೆ(1858) ಅಲಿಘರ್‌ನಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾಗಿ ಭಾರತದಾದ್ಯಂತ ಸಂಚರಿಸಿ ದೇಣಿಗೆ ಸಂಗ್ರಹಿಸಿದರು. 1873ರಲ್ಲಿ ಅಖಿಲ ಭಾರತ ಮುಸ್ಲಿಂ ಸಮ್ಮೇಳನ ಆಯೋಜಿಸಿದರು. 1877 ಜನವರಿ 8 ರಂದು ಭಾರತದ ಮೊದಲ ವೈಸ್‌ರಾಯ್ ಲಾರ್ಡ್ ಲಿಟ್ಟನ್ ನಿಂದ ಮಹಮಡನ್ ಆಂಗ್ಲೋ ಓರಿಯಂಟಲ್ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದರು. ಎಲ್ಲ ಸಮುದಾಯದವರಿಗೂ ಉನ್ನತ ಶಿಕ್ಷಣಕ್ಕೆ ಈ ಸಂಸ್ಥೆ ತನ್ನ ಬಾಗಿಲು ತೆರೆಯಿತು. ಇದೇ ಮುಂದೆ ಪ್ರಸಿದ್ಧ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವೆಂದು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಪಡೆಯಿತು. ಇವರು ತಮ್ಮ ಜೀವನದ ಅಂತಿಮ ವರ್ಷಗಳಲ್ಲಿ ಬಹುತೇಕ ಮುಸ್ಲಿಂ ಸಮುದಾಯದ ಪರವಾದ ನಿಲುವು ಹೊಂದಿದ್ದುದು ಕಂಡುಬರುತ್ತದೆ. ಅಲಿಘರ್ ನಲ್ಲಿ ಇಸ್ಲಾಂ ಸಂಸ್ಕೃತಿಯನ್ನು ಪ್ರಚಾರ ಪಡಿಸಲು ಸ್ಥಾಪಿಸಿದ್ದ ವಿಜ್ಙಾನ ಸಂಘ ಇವರ ನಿಧನಾನಂತರ ಲಖನೌಗೆ ವರ್ಗಾಯಿಸಲ್ಪಟ್ಟು (1903) ಮುಸ್ಲಿಂ ಲೀಗ್ ಎಂದು ಮರುನಾಮಕರಣಗೊಂಡಿತು. ಬ್ರಿಟೀಷ್ ಸರ್ಕಾರ 1883 ರಲ್ಲಿ ಇವರಿಗೆ ಸರ್ ಎಂಬ ಪದವಿ ನೀಡಿತು..!

 -ಕೆ.ಶಿವು.ಲಕ್ಕಣ್ಣವರ

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಗೆ ಕೊರೋನಾ ಗ್ರಹಣ : ಈ 23 ದಿನದಲ್ಲಿ 262 ಹೊಸ ಪಾಸಿಟಿವ್, 115 ಸಕ್ರಿಯ, 8 ಸಾವು

ಕಂಕಣ ಗ್ರಹಣಕ್ಕೂ ಮೊದಲು ಒಟ್ಟು ಸೋಂಕಿನ ಪ್ರಕರಣ 60 ಇದ್ದದ್ದು 23 ದಿನದಲ್ಲಿ 5 ಪಟ್ಟು ಹೆಚ್ಚಿದೆ, ಸಾವಿನ ಪ್ರಮಾಣದಲ್ಲೂ 5 ಪಟ್ಟು ಹೆಚ್ಚಳವಾಗಿದೆ.

ಯಪ್ಪಾ..!, ಗಂಡ ತನ್ನ ಜೊತಿ ಜಗಳಾ ಆಡಂಗಿಲ್ಲಾ ಅಂತ ಡಿವೋರ್ಸ್ ಕೇಳ್ಯಾಳಂತ!

ಗಂಡ-ಹೆಂಡರ ಜಗಳ ಗಂಧ ತೀಡಿದಂಗ ಅಂತಾರ. ಅಷ್ಟ ಯಾಕ, ಗಂಡ-ಹೆಂಡರ ಜಗಳ ಉಂಡು ಮಲಗೋ ತನಕ ಅಂತಾನೂ ಅಂತಾರ. ಆದ್ರ ಗಂಡ ತನ್ನ ಜೊತಿಗೆ ಜಗಳಾನ ಆಡವಲ್ಲಾ, ತನಗ ಭಾಳ್ ಪ್ರೀತಿ ಮಾಡ್ತಾನಾ ಅಂತ ಹೆಣ್ಮಗಳ ಒಬ್ಬಾಕಿ ಕೋರ್ಟ್ ಕಟ್ಟಿ ಹತ್ತಿದ ಕತಿ ಇದು..

ಅಮೃತ್ಯೋತ್ಸವ ಆಲಮಟ್ಟಿ ಕಲರೋತ್ಸವ..!

ಆಲಮಟ್ಟಿ : ರಾಷ್ಟ್ರ ಪ್ರೇಮಭಕ್ತಿ ಕಲರಮಯವಾಗಿ ಕಗ್ಗತ್ತಿನಲ್ಲಿ ರಾರಾಜಿಸುತ್ತಿದೆ. ಜಲಪರಿಸರ, ಪ್ರವಾಸಿ ತಾಣ ಖ್ಯಾತಿಯ ಆಲಮಟ್ಟಿ…

ಸಂಡೇ ಲಾಕ್ ಡೌನ್ ಸಂಕಟ: ಕಂಗಾಲಾದ ಕಾಗೆಗಳಿಗೆ ಖಾರಾ-ಡಾಣಿ ಊಟ

ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಹೊಟೆಲ್ ಮಾಲೀಕರೊಬ್ಬರು ಖಾರಾ-ಡಾಣಿ ನೀಡಿ ಮಾನವೀಯತೆ ಮೆರೆದಿದ್ದಾರೆ.