ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಹೊಟೆಲ್ ಮಾಲೀಕರೊಬ್ಬರು ಖಾರಾ-ಡಾಣಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಗದಗ: ಸಂಡೇ ಲಾಕ್ ಡೌನ್ ಎಲ್ಲ ಎಲ್ಲವೂ ಬಂದ್ . ಹೊಟೆಲ್, ಬೇಕರಿ, ಖಾನಾವಳಿ ಎಲ್ಲ ಬಂದ್ ಇರುವುದರಿಂದ ೀ ತಿಂಡಿ-ಊಟದ ಅಂಗಡಿಗಳ ಸುತ್ತಲು ಚೆಲ್ಲಿದ ಮುಸುರೆ, ಚೂರುಪಾರು ಬ್ರೆಡ್, ಬನ್ ತುಣುಕುಗಳನ್ನು ಆಶ್ರಯಿಸಿ ಬದುಕುವ ನಾಯಿ, ಕಾಗೆಗಳಂತಹ ಪ್ರಾಣಿ-ಪಕ್ಷಿಗಳಿಗೆ ಅಗುಳು ತುತ್ತು ಸಿಗದಂತಹ ಸಂದರ್ಭ. ಹಳ್ಳಿ ಕಡೆ ಹೋದ ಕಾಗೆಗಳಿಗೇನೋ ಭರಪೂರ ಕಾಳು-ಕಡಿ ಸಿಕ್ಕಾವು. ಆದರೆ ಈ ಸಿಟಿ ಕಾಗೆಗಳ ಪಾಡು ಹೇಳತೀರದು.
ಗದಗ ನಗರದ ಗಾಂಧಿವೃತ್ತದ ಮುಚ್ಚಿರುವ ಹೊಟೆಲ್ಗಳ ಸುತ್ತ ಭಾನುವಾರ ಮುಂಜಾನೆ ಹಸಿವಿನಿಂದ ಕಂಗಾಲಾಗಿದ್ದ ನೂರಾರು ಕಾಗೆಗಳು ಕಾವ್ ಕಾವ್ ಎಂದು ಆಕ್ರಂದಿಸುತ್ತಿದ್ದವು. ದಿನವೂ ತನ್ನ ಹೊಟೆಲಿನ ಅಳಿದುಳಿದ ಆಹಾರ ತಂದು ಬದುಕುವ ಕಾಗೆಗಳು ಹೀಗೆ ಹಸಿವಿನಿಂದ ಗೋಳಾಡುವುದನ್ನು ನೋಡಿ ಮರುಗಿದ ಮಹಾಲಕ್ಷ್ಮಿ ಹೊಟೆಲಿನ ಮಾಲೀಕರು ಅವಕ್ಕೆ ಆಹಾರ ನೀಡಿ ಮಾನವೀಯತೆ ಮೆರೆದರು.
ಇವತ್ತು ಮಹಾಲಕ್ಷ್ಮಿ ಹೊಟೆಲ್ಲೂ ಬಂದ್ ಇತ್ತು. ಹೀಗಾಗಿ ಅಲ್ಲೂ ತಿಂಡಿ ಇರಲಿಲ್ಲ. ಾದರೆ ಕೊಡುವ ಮನಸ್ಸ್ಉ ಮಾಡಿದ ಮೇಲೆ ನೂರು ದಾರಿ. ಅಂಗಡಿಯಲ್ಲಿದ್ದ ಖಾರಾ-ಡಾಣಿ-ಪುಗ್ಗಿಯನ್ನು ತಂದು ಕಾಗೆಗಳ ಹಿಂಡಿಗೆ ನೀಡುವ ಮೂಲಕ ಹೊಟೆಲ್ ಮಾಲೀಕರು ತಾವೂ ಸಮಾಧಾನ ಪಟ್ಟರು, ಕಾಗೆಗಳ ಹಸಿವನ್ನೂ ನೀಗಿಸಿದರು.
ನಮ್ಮ ಅಪದ್ಧ ಶಾಸ್ತ್ರಗಳು, ಟಿವಿ ಜ್ಯೋತಿಷಿಗಳು ಕಾಗೆ ಅಪಶಕುನ ಎಂಬ ಮೂಢನಂಬಿಕೆಯನ್ನು ಬಿತ್ತಿದ ಪರಿಣಾಮ ಕಾಗೆ ಎಂದರೆ ಜನರು ತಾತ್ಸಾರ ಪಡುತ್ತಾರೆ. ಅವು ಸ್ಪರ್ಶಿಸಿದರೆ ಮನೆಯಲ್ಲಿ ಸಾವು ಖಚಿತ ಎಂದೆಲ್ಲ ತಲೆಬುಡವಿಲ್ಲದ ಸಂಗತಿಯನ್ನು ಜನರ ತಲೆಗೆ ತುಂಬಿದ್ದಾರೆ. ಇದನ್ನು ನಂಬಿದ ಕೆಲವರು ಕಾಗೆ ಸ್ಪರ್ಶವಾದಾಗ ಹೆದರಿ ಎಡವಟ್ಟು ಮಾಡಿಕೊಂಡಿದ್ದಾರೆ.
ಹೀಗೆ ತಾತ್ಸಾರಕ್ಕೊಳಪಟ್ಟ, ಅಪಶಕುನದ ಆರೋಪಕ್ಕೆ ಗುರಿಯಾದ ಕಾಗೆಗಳನ್ನು ಇತರೆಲ್ಲ ಪಕ್ಷಿಗಳಂತೆ ಪರಿಗಣಿಸಿ ಆಹಾರ ನೀಡಿದ ಹೊಟೆಲ್ ಮಾಲೀಕರ ನಡೆಗೆ ಒಂದು ಸಲಾಂ.