ಉತ್ತರ ಕರ್ನಾಟಕ ಭಾಗದ ನದಿಗಳು ಉಕ್ಕಿ ಹರಿಯುತ್ತಿದ್ದು ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಬುಧವಾರ ಬೆಳಗಾವಿ ತಾಲೂಕಿನ 15 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ.

ಹಳೆ ಗಾಯ ಇನ್ನೂ ಮಾಸಿಲ್ಲ. ಈಗ ಮತ್ತೆ ನಾಡಿನ ಜನರಿಗೆ ಜಲಾಘಾತ ಒಕ್ಕರಿಸಿದೆ. ಜಲಸ್ಫೋಟಕ್ಕೆ ಉತ್ತರ ಕರ್ನಾಟಕದ ಹಲವು ಗ್ರಾಮಗಳ ಸಾವಿರಾರೂ ಎಕರೆ ಬೆಳೆ ಜೊತೆಗೆ ಅವರ ಬದುಕು ಮತ್ತೆ ನೀರು ಪಾಲಾಗಿದೆ. ರಕ್ಕಸ ಪ್ರವಾಹಕ್ಕೆ ಎಲ್ಲವೂ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಜನರ ಕಥೆ ಕೇಳಿದಾಗ ಕರಳು ಕಿತ್ತು ಬರುತ್ತೆ. ಮನೆಯ ಬಾಗಿಲಿಗೆ ಮತ್ತೆ ನದಿಗಳು ಭೇಟಿ ನೀಡಿವೆ. ಬದುಕನ್ನೇ ನಲುಗಿಸಿಬಿಟ್ಟಿವೆ. ರಸ್ತೆ, ಹೊಲ ಗದ್ದೆ, ಮನೆ ಮಠಗಳು ನೀರು ಪಾಲಾಗುತ್ತಿವೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ನದಿಗಳು ಉಕ್ಕಿ ಹರಿಯುತ್ತಿದ್ದು ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಬುಧವಾರ ಬೆಳಗಾವಿ ತಾಲೂಕಿನ 15 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. ಗೋಕಾಕ್ ನಗರ ಹಾಗೂ ಹೊರವಲಯದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬೆಳಗಾವಿಯ ರಾಯಭಾಗ ತಾಲೂಕಿನ ಕುಡುಚಿಯ ಬಳಿಯ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ರಾಯಚೂರಿನ ಪೆದ್ದಕುರಂ ಸಮೀಪ ಕೃಷ್ಣಾ ನದಿಯಲ್ಲಿ ಸೋಮವಾರ ಸಂಜೆ ತೆಪ್ಪ ಮುಳುಗಿ ನಾಲ್ವರು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ. ಧಾರವಾಡದ ಹತ್ತಿರವಿರುವ ಗಂಗಾಂಬಿಕೆ ಮಂಟಪ ಮುಳುಗಡೆಯಾಗಿದೆ. ಬಸವಸಾಗರ ಜಲಾಶಯದಿಂದ ನೀರು ಬಿಟ್ಟಿರುವ ಕಾರಣ ಯಾದಗಿರಿ ರಾಯಚೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೊಳ್ಳೂರು ಸೇತುವೆ ಮುಳುಗಡೆಯಾಗಿದೆ.

ಗದಗ್ ನ ಕೊಣ್ಣೂರ ಗ್ರಾಮದ ಹೊಳೆಅಗಸಿ ಭಾಗದಲ್ಲೂ 50 ಕ್ಕೂ ಅಧಿಕ ಮನೆಗಳಿಗೆ ಪ್ರವಾಹ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ ಮಾಡಿದೆ. ಅಲ್ಲಿನ ಜನರು ನೀರಲ್ಲೇ ಜಾಗರಣೆ ಮಾಡುವಂತಾಗಿದೆ. ಈ ವರ್ಷ ಜಿಲ್ಲಾಡಳಿತ ಕಾಳಜಿ ಕೇಂದ್ರದ ವ್ಯವಸ್ಥೆ ಕಲ್ಪಿಸಿಲ್ಲ ಅಂತ ಸಂತ್ರಸ್ತರು ಕಣ್ಣೀರಿಟ್ಟರು. ಪ್ರತಿವರ್ಷ ಪ್ರವಾಹ ಬಂದ್ರೆ ಈ ನಮ್ಮ ಜನ್ರ ಪರಿಸ್ಥಿತಿ ಇದೆಯಾಗಿದೆ.

ಹೇಗಾದ್ರೂ ಮಾಡಿ ನಮ್ಮನ್ನ ಶಾಶ್ವತವಾಗಿ ಸ್ಥಳಾಂತರ ಮಾಡಿ, ಹೊಸ ಬದುಕಟ್ಟಿಕೊಡಿ ಅಂತ ತೋಡಿಕೊಂಡು ಕಣ್ಣೀರಿಡುತ್ತಿದ್ದಾರೆ. ಕೊಣ್ಣೂರು ಗ್ರಾಮದ ಬಳಿಯ ಹುಬ್ಬಳ್ಳಿ, ವಿಜಯಪುರ, ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218 ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಹುಬ್ಬಳ್ಳಿಯಿಂದ ಸೊಲ್ಲಾಪೂರಕ್ಕೆ ಸಂಪರ್ಕಿಸುವ ಈ ಹೆದ್ದಾರಿ ಈಗ ಬಂದ್ ಆಗಿದ್ದು, ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಮಾರ್ಗ ಬದಲಿಸಿ ರೋಣ, ಬಾಗಲಕೋಟೆ ಮೂಲಕ ವಾಹನಗಳನ್ನು ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಕಳೆದ ವರ್ಷದ ಪ್ರವಾಹದಲ್ಲೂ ಈ ಕೊಣ್ಣೂರು ಸೇತುವೆ ಜಖಂ ಆಗಿತ್ತು. ಹೊಸ ಸೇತುವೆ ನಿರ್ಮಿಸಿದ್ದರೆ ಹಾನಿಯನ್ನು ತಪ್ಪಿಸಬಹುದಿತ್ತು. ಇನ್ನು ಬೂದಿಹಾಳ, ಲಖಮಾಪುರ, ಕುರವಿನಕೊಪ್ಪ, ಹೊಳೆಮಣ್ಣೂರ ಕೂಡ ನಡುಗಡ್ಡಯಾಗಿದೆ. ಪ್ರವಾಹದಿಂದ ಚಿಕ್ಕು, ಪೇರಲ, ಕಬ್ಬು, ತೆಂಗು, ಹೆಸರು, ಜೋಳ, ಮೆಕ್ಕೆ ಜೋಳ ಬೆಳೆ ನೀರಲ್ಲಿ ನಾಶವಾಗಿದೆ.

ಬಸಮ್ಮ ಮಾಲಿಪಾಟೀಲ್ ಎಂಬ ಬೆಳಗಾವಿ ಜಿಲ್ಲೆಯ ಮಹಿಳೆಯೋರ್ವರು, “ಎಲೆಕ್ಷನ್ ಬಂದಾಗ ಓಟಿಗಾಗಿ ಓಡಿ ಬರ್ತಾರ. ಪ್ರವಾಹ ಬಂದಾಗ ಅದು ಕೊಡ್ತಿವಿ ಇದು ಕೊಡ್ತಿವಿ ಅಂತ ಹೇಳಿ ಸುಮ್ಮನಾಗುತಾರ. ನಮ್ಮ ಕಥೆ ಪೇಪರ್ ನ್ಯಾಗ ಬರಿತಾರ, ಟಿವ್ಯಾಗ ತೋರಿಸ್ತಾರ, ಆದರ ಸಹಾಯಕ್ಕೆ ಮಾತ್ರ ಯಾರೂ ಬರುದಿಲ್ಲ” ಎನ್ನುತ್ತಾರೆ.

ಬಾಗಲಕೋಟೆಯ ಸಂತ್ರಸ್ಥರ ಪ್ರಕಾರ, “ನಾವು ಜೀವ ಹೋದರೂ ಸರಿ ನಮ್ಮ ಮನೆ ಬಿಟ್ಟು ಕದಲುವುದಿಲ್ಲ. ಹೇಳುವವರು ಬಂದು ಹೇಳಿ ಹೋಗುತ್ತಾರೆ. ಮೊದಲೇ ಕರೊನಾ ಭಯ. ಪರಿಹಾರ ಕೇಂದ್ರಗಳಲ್ಲಿ ನಾವು ಇರಲು ಆಗುವುದಿಲ್ಲ. ಮನೆ ಕಟ್ಟಿಸಿಕೊಡುತ್ತೇವೆ ಎಂದು ವರ್ಷದಿಂದ ಹೇಳುತ್ತಲೇ ಇದ್ದಾರೆ. ಆದರೆ ನಾವಿನ್ನೂ ಶೆಡ್ ನಲ್ಲೇ ವಾಸವಿದ್ದೇವೆ”.

ಪ್ರತಿ ಬಾರಿ ಪ್ರವಾಹ ಸಾವಿರಾರು ಜನರ ಜೀವನವನ್ನೇ ಅಸ್ತವ್ಯಸ್ತ ಮಾಡುತ್ತಿದೆ. ಇದಕ್ಕೆ ಪರಿಹಾರವಿಲ್ಲವೇ! ಆಣೆಕಟ್ಟು ಗಳನ್ನು ಎತ್ತರ ಮಾಡಬಹುದು. ಜನರಿಗೆ ಬೇರೆ ಕಡೆಗೆ ಸೂರು ಕಲ್ಪಿಸಬಹುದು. ಅನೇಕ ದಾರಿಗಳುಂಟು. ಸರ್ಕಾರ ಈ ಬಗ್ಗೆ ಚಿಂತನೆ ಮಾಡಲಿ ಎಂಬುದು ನಮ್ಮ ಆಶಯ.

ಈ ಲೇಖನ ಮೊದಲು pratidhvani.com ನಲ್ಲಿ ಪ್ರಕಟವಾಗಿದೆ.

Leave a Reply

Your email address will not be published.

You May Also Like

ಅನಾರೋಗ್ಯ ಹಿನ್ನೆಲೆ ಬಾಲಿವುಡ್ ನಟ ರಿಷಿ ಕಪೂರ್ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.ಈ ಕುರಿತು ರಿಷಿ ಅವರ ಸಹೋದರ ರಣಧೀರ್ ಕಪೂರ್ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳೇನು..?

ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳೇನು..? ಪರೀಕ್ಷೆ ನಡೆಯುವ 1 ಗಂಟೆ 30 ನಿಮಿಷ ಮೊದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು.

ಗದಗನಲ್ಲಿ ಮತ್ತೆ ನಾಲ್ಕು ಕೊರೋನಾ ಪಾಸಿಟಿವ್

ಕೊರೋನಾ ಸೋಂಕು ಮುಕ್ತವಾಗಿದ್ದ ಗದಗ ಜಿಲ್ಲೆಯಲ್ಲಿ ಕಳೆದೆರಡು ದಿನಗಳ ಹಿಂದಷ್ಟೆ ಮೂರು ಕೊರೋನಾ ಪಾಸಿಟ್ ಕೇಸ್ ಪತ್ತೆಯಾಗಿದ್ದವು. ಇದರ ಬೆನ್ನಲ್ಲೆ ಇದೀಗ ಇಂದು ಮತ್ತೆ ನಾಲ್ಕು ಪಾಸಿಟಿವ್ ಕೇಸ್ ದೃಢಪಟ್ಟಿವೆ.