ಉತ್ತರ ಕರ್ನಾಟಕ ಭಾಗದ ನದಿಗಳು ಉಕ್ಕಿ ಹರಿಯುತ್ತಿದ್ದು ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಬುಧವಾರ ಬೆಳಗಾವಿ ತಾಲೂಕಿನ 15 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ.

ಹಳೆ ಗಾಯ ಇನ್ನೂ ಮಾಸಿಲ್ಲ. ಈಗ ಮತ್ತೆ ನಾಡಿನ ಜನರಿಗೆ ಜಲಾಘಾತ ಒಕ್ಕರಿಸಿದೆ. ಜಲಸ್ಫೋಟಕ್ಕೆ ಉತ್ತರ ಕರ್ನಾಟಕದ ಹಲವು ಗ್ರಾಮಗಳ ಸಾವಿರಾರೂ ಎಕರೆ ಬೆಳೆ ಜೊತೆಗೆ ಅವರ ಬದುಕು ಮತ್ತೆ ನೀರು ಪಾಲಾಗಿದೆ. ರಕ್ಕಸ ಪ್ರವಾಹಕ್ಕೆ ಎಲ್ಲವೂ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಜನರ ಕಥೆ ಕೇಳಿದಾಗ ಕರಳು ಕಿತ್ತು ಬರುತ್ತೆ. ಮನೆಯ ಬಾಗಿಲಿಗೆ ಮತ್ತೆ ನದಿಗಳು ಭೇಟಿ ನೀಡಿವೆ. ಬದುಕನ್ನೇ ನಲುಗಿಸಿಬಿಟ್ಟಿವೆ. ರಸ್ತೆ, ಹೊಲ ಗದ್ದೆ, ಮನೆ ಮಠಗಳು ನೀರು ಪಾಲಾಗುತ್ತಿವೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ನದಿಗಳು ಉಕ್ಕಿ ಹರಿಯುತ್ತಿದ್ದು ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಬುಧವಾರ ಬೆಳಗಾವಿ ತಾಲೂಕಿನ 15 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. ಗೋಕಾಕ್ ನಗರ ಹಾಗೂ ಹೊರವಲಯದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬೆಳಗಾವಿಯ ರಾಯಭಾಗ ತಾಲೂಕಿನ ಕುಡುಚಿಯ ಬಳಿಯ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ರಾಯಚೂರಿನ ಪೆದ್ದಕುರಂ ಸಮೀಪ ಕೃಷ್ಣಾ ನದಿಯಲ್ಲಿ ಸೋಮವಾರ ಸಂಜೆ ತೆಪ್ಪ ಮುಳುಗಿ ನಾಲ್ವರು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ. ಧಾರವಾಡದ ಹತ್ತಿರವಿರುವ ಗಂಗಾಂಬಿಕೆ ಮಂಟಪ ಮುಳುಗಡೆಯಾಗಿದೆ. ಬಸವಸಾಗರ ಜಲಾಶಯದಿಂದ ನೀರು ಬಿಟ್ಟಿರುವ ಕಾರಣ ಯಾದಗಿರಿ ರಾಯಚೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೊಳ್ಳೂರು ಸೇತುವೆ ಮುಳುಗಡೆಯಾಗಿದೆ.

ಗದಗ್ ನ ಕೊಣ್ಣೂರ ಗ್ರಾಮದ ಹೊಳೆಅಗಸಿ ಭಾಗದಲ್ಲೂ 50 ಕ್ಕೂ ಅಧಿಕ ಮನೆಗಳಿಗೆ ಪ್ರವಾಹ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ ಮಾಡಿದೆ. ಅಲ್ಲಿನ ಜನರು ನೀರಲ್ಲೇ ಜಾಗರಣೆ ಮಾಡುವಂತಾಗಿದೆ. ಈ ವರ್ಷ ಜಿಲ್ಲಾಡಳಿತ ಕಾಳಜಿ ಕೇಂದ್ರದ ವ್ಯವಸ್ಥೆ ಕಲ್ಪಿಸಿಲ್ಲ ಅಂತ ಸಂತ್ರಸ್ತರು ಕಣ್ಣೀರಿಟ್ಟರು. ಪ್ರತಿವರ್ಷ ಪ್ರವಾಹ ಬಂದ್ರೆ ಈ ನಮ್ಮ ಜನ್ರ ಪರಿಸ್ಥಿತಿ ಇದೆಯಾಗಿದೆ.

ಹೇಗಾದ್ರೂ ಮಾಡಿ ನಮ್ಮನ್ನ ಶಾಶ್ವತವಾಗಿ ಸ್ಥಳಾಂತರ ಮಾಡಿ, ಹೊಸ ಬದುಕಟ್ಟಿಕೊಡಿ ಅಂತ ತೋಡಿಕೊಂಡು ಕಣ್ಣೀರಿಡುತ್ತಿದ್ದಾರೆ. ಕೊಣ್ಣೂರು ಗ್ರಾಮದ ಬಳಿಯ ಹುಬ್ಬಳ್ಳಿ, ವಿಜಯಪುರ, ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218 ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಹುಬ್ಬಳ್ಳಿಯಿಂದ ಸೊಲ್ಲಾಪೂರಕ್ಕೆ ಸಂಪರ್ಕಿಸುವ ಈ ಹೆದ್ದಾರಿ ಈಗ ಬಂದ್ ಆಗಿದ್ದು, ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಮಾರ್ಗ ಬದಲಿಸಿ ರೋಣ, ಬಾಗಲಕೋಟೆ ಮೂಲಕ ವಾಹನಗಳನ್ನು ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಕಳೆದ ವರ್ಷದ ಪ್ರವಾಹದಲ್ಲೂ ಈ ಕೊಣ್ಣೂರು ಸೇತುವೆ ಜಖಂ ಆಗಿತ್ತು. ಹೊಸ ಸೇತುವೆ ನಿರ್ಮಿಸಿದ್ದರೆ ಹಾನಿಯನ್ನು ತಪ್ಪಿಸಬಹುದಿತ್ತು. ಇನ್ನು ಬೂದಿಹಾಳ, ಲಖಮಾಪುರ, ಕುರವಿನಕೊಪ್ಪ, ಹೊಳೆಮಣ್ಣೂರ ಕೂಡ ನಡುಗಡ್ಡಯಾಗಿದೆ. ಪ್ರವಾಹದಿಂದ ಚಿಕ್ಕು, ಪೇರಲ, ಕಬ್ಬು, ತೆಂಗು, ಹೆಸರು, ಜೋಳ, ಮೆಕ್ಕೆ ಜೋಳ ಬೆಳೆ ನೀರಲ್ಲಿ ನಾಶವಾಗಿದೆ.

ಬಸಮ್ಮ ಮಾಲಿಪಾಟೀಲ್ ಎಂಬ ಬೆಳಗಾವಿ ಜಿಲ್ಲೆಯ ಮಹಿಳೆಯೋರ್ವರು, “ಎಲೆಕ್ಷನ್ ಬಂದಾಗ ಓಟಿಗಾಗಿ ಓಡಿ ಬರ್ತಾರ. ಪ್ರವಾಹ ಬಂದಾಗ ಅದು ಕೊಡ್ತಿವಿ ಇದು ಕೊಡ್ತಿವಿ ಅಂತ ಹೇಳಿ ಸುಮ್ಮನಾಗುತಾರ. ನಮ್ಮ ಕಥೆ ಪೇಪರ್ ನ್ಯಾಗ ಬರಿತಾರ, ಟಿವ್ಯಾಗ ತೋರಿಸ್ತಾರ, ಆದರ ಸಹಾಯಕ್ಕೆ ಮಾತ್ರ ಯಾರೂ ಬರುದಿಲ್ಲ” ಎನ್ನುತ್ತಾರೆ.

ಬಾಗಲಕೋಟೆಯ ಸಂತ್ರಸ್ಥರ ಪ್ರಕಾರ, “ನಾವು ಜೀವ ಹೋದರೂ ಸರಿ ನಮ್ಮ ಮನೆ ಬಿಟ್ಟು ಕದಲುವುದಿಲ್ಲ. ಹೇಳುವವರು ಬಂದು ಹೇಳಿ ಹೋಗುತ್ತಾರೆ. ಮೊದಲೇ ಕರೊನಾ ಭಯ. ಪರಿಹಾರ ಕೇಂದ್ರಗಳಲ್ಲಿ ನಾವು ಇರಲು ಆಗುವುದಿಲ್ಲ. ಮನೆ ಕಟ್ಟಿಸಿಕೊಡುತ್ತೇವೆ ಎಂದು ವರ್ಷದಿಂದ ಹೇಳುತ್ತಲೇ ಇದ್ದಾರೆ. ಆದರೆ ನಾವಿನ್ನೂ ಶೆಡ್ ನಲ್ಲೇ ವಾಸವಿದ್ದೇವೆ”.

ಪ್ರತಿ ಬಾರಿ ಪ್ರವಾಹ ಸಾವಿರಾರು ಜನರ ಜೀವನವನ್ನೇ ಅಸ್ತವ್ಯಸ್ತ ಮಾಡುತ್ತಿದೆ. ಇದಕ್ಕೆ ಪರಿಹಾರವಿಲ್ಲವೇ! ಆಣೆಕಟ್ಟು ಗಳನ್ನು ಎತ್ತರ ಮಾಡಬಹುದು. ಜನರಿಗೆ ಬೇರೆ ಕಡೆಗೆ ಸೂರು ಕಲ್ಪಿಸಬಹುದು. ಅನೇಕ ದಾರಿಗಳುಂಟು. ಸರ್ಕಾರ ಈ ಬಗ್ಗೆ ಚಿಂತನೆ ಮಾಡಲಿ ಎಂಬುದು ನಮ್ಮ ಆಶಯ.

ಈ ಲೇಖನ ಮೊದಲು pratidhvani.com ನಲ್ಲಿ ಪ್ರಕಟವಾಗಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಪತ್ತೆಯಾದ ಕೊರೊನಾ ಪಾಸಿಟಿವ್ ಕೇಸ್ ಗಳ ವಿವರ

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಕರಿಯನ ಓಣಿ ನಿವಾಸಿ 24 ವರ್ಷದ ಮಹಿಳೆ (ಪಿ-28299) ಸೋಂಕು…

ಸೇವಾ ಸಿಂಧುಗಾಗಿ ಸರತಿಯಲ್ಲಿ ಚಪ್ಪಲಿ ಇಟ್ಟು ಕಾದು ಕುಳಿತ ಕಾರ್ಮಿಕರು

ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆಯಲ್ಲಿ ಜನರು ಸಾಲಿನಲ್ಲಿ ನಿಲ್ಲಲಾಗದೆ ತಮ್ಮ ಚಪ್ಪಲಿಗಳನ್ನು ಗುರುತಿಗಾಗಿ ಇಡುತ್ತಿರುವುದು ಹಾಗೂ ಭಾಷಾ ಸಮಸ್ಯೆ ಯಿಂದ ಸೇವಾ ಸಿಂಧು ಅರ್ಜಿ ಸಲ್ಲಿಸಲು ಕಾರ್ಮಿಕರು ಸುಸ್ತಾಗುತ್ತಿದ್ದಾರೆ.

ಕಷ್ಟಾ ಮಾಡೋದು ಭಾಳ್ ಕಷ್ಟ ಅಂತ ಕಷ್ಟದ ಅಂಗಡಿನಾ ಬಂದ್ ಮಾಡಿದ ತಿಪ್ಪಾ..!

ಅನೌನು ಎರಡ್ ತಿಂಗಳ್ ಹೊತ್ತಾತು ಗಡ್ಡದಾಗೂ ಸೀರ ಸೇರುವಂಗಾಗ್ಯಾವು, ಕೆರದ್ , ಕೆರದ್ ತಲಿ ಕೆಟ್ ಹೋಗೈತಿ. ಅದಕ್ ಇವತ್ತು ಕಷ್ಟದ ಅಂಗಡಿ ಚಾಲೂ ಅಂದಿದ್ದಕ್ಕ ನಾನು ದುಡಿಕಿಲೇ ಬಂದೇ ಅಷ್ಟರಾಗ್ ನೀನಾ ಅಂಗಡಿ ಕದಾ ಹಾಕ್ಕೊಂಡು ಹೊಂಟ್ಯಲ್ಲಾ ಅಂದ ಯಲ್ಲಾ.

ಬೆಳಗಾವಿಯ ಈ ಮನೆಯೇ ಒಂದು ‘ಕ್ಯಾಮೆರಾ!’ :ಫೋಟೊಗ್ರಫಿ ಪ್ರೀತಿ: ಮಕ್ಕಳ ಹೆಸರು ನಿಕಾನ್, ಕ್ಯಾನಾನ್, ಎಪ್ಸಾನ್

ಬೆಳಗಾವಿಯ ಈ ಮನೆ ರವಿ ಹೊಂಗಲ್ ಅವರ ಫೋಟೊಗ್ರಫಿ ಪ್ರೀತಿಗೆ ಸಾಕ್ಷಿಯಾಗಿದೆ. ಈ ಮನೆ ಫೋಟೊ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಕ್ಯಾಮೆರಾ ಬಗೆಗಿನ ತಮ್ಮ ಒಲವನ್ನು ಈ ರೀತಿ ಸೃಜನಾತ್ಮಕ