ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಧಿಕೃತವಾಗಿ ಪಾಸಿಟಿವ್ ಕೇಸ್ ವಿವರ ಬಿಡುಗಡೆ ಮಾಡುವ ಮುನ್ನವೇ ಒಂದು ಪಾಸಿಟಿವ್ ಲಿಸ್ಟ್ ವೈರಲ್ ಆಗುತ್ತಿದೆ. ಅಪಾಯಕಾರಿ ವಿಷಯ ಎಂದರೆ, ಇದರಲ್ಲಿ ಸೋಂಕಿತರ ಹೆಸರು, ವಿಳಾಸ, ಮೊಬೈಲ್ ನಂಬರ್ ವಿವರ ಇರುತ್ತವೆ!

ಗದಗ: ಈಗಾಗಲೇ ಜಿಲ್ಲೆಯಲ್ಲಿ ಹಲವು ದಿನಗಳಿಂದ ಜಿಲ್ಲಾಡಳಿತ ಕೊರೊನಾ ಸೋಂಕಿತರ ಪಟ್ಟಿ ಬಿಡುಗಡೆ ಮಾಡುವ ಮೊದಲೇ ಸೋಂಕಿತರ ಪಟ್ಟಿಯೊಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ. ಇನ್ನು ಸೋಂಕಿತರ ಹೆಸರು, ಊರು ಜೊತೆಗೆ ಮೊಬೈಲ್ ಸಂಖ್ಯೆ ಸಮೇತವಾಗಿ ಲೀಸ್ಟ್ ಹರಿದಾಡುತ್ತಿರುವುದು ಅಪಾಯಕಾರಿಯೇ ಸರಿ.

ಇನ್ನು ಈ ಬಗ್ಗೆ ಈಗಾಗಲೇ ಜಿಮ್ಸ್ ಗಮನಕ್ಕೂ ತರಲಾಗಿತ್ತು. ಈ ವಿಚಾರವಾಗಿ ಉತ್ತರಪ್ರಭ ಎರಡು ಬಾರಿ ವಿಶೇಷ ವರದಿ ಪ್ರಕಟಿಸಿತ್ತು. ಆದರೆ ಈ ಬಾರಿ ಲೀಕ್ ಆಗುತ್ತಿರುವ ಪಾಸಿಟಿವ್ ಲೀಸ್ಟ್ ನಲ್ಲಿರುವ ಹೆಸರುಗಳು ಅಸಲಿಗೆ ಸೋಂಕಿತರೇ? ಎನ್ನುವ ಅನುಮಾನದಿಂದ ಜುಲೈ 15 ಮತ್ತು 16 ಎರಡು ದಿನಗಳ ಲೀಸ್ಟ್ ಗಮನಿಸಿದಾಗ ಅದರಲ್ಲಿರುವ ಬಹುತೇಕರಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ.  

ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಒಂದು ಸೈಬರ್ ಘಟಕ ಅಂತಾ ಇರುತ್ತದೆ. ಈ ವಿಚಾರ ಸೈಬರ್ ಘಟಕದ ಗಮನಕ್ಕೆ ಬಂದಿಲ್ಲವೇ? ಎನ್ನುವ ಅನುಮಾನ ಕಾಡುತ್ತಿದೆ.  ಇನ್ನು ಈ ವಿಚಾರವಾಗಿ ಜಿಲ್ಲಾಡಳಿತವೂ ನಿರ್ಲಕ್ಷ್ಯ ಧೋರಣೆ ತಾಳಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.  

ಇಲ್ಲಿ ಗಂಭೀರ ಪ್ರಶ್ನೆಗಳಿವೆ:

  • ಮೊದಲಿಗೆ ಜಿಲ್ಲಾಡಳಿತ, ಅಂದರೆ ಜಿಲ್ಲಾಧಿಕಾರಿ ಬಿಡುಗಡೆ ಮಾಡುವ ಮಾಹಿತಿಯಷ್ಟೇ ಅಧಿಕೃತ. ಹಾಗೆಯೇ ರಾಜ್ಯ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಕೂಡ ಅಧಿಕೃತ. ಆದರೆ ಇವೆರಡಕ್ಕೂ ಮೊದಲೇ ವಿವರ ಲೀಕ್ ಹೇಗೆ ಆಗುತ್ತಿದೆ? ಏಕೆ ಆಗುತ್ತಿದೆ?
  • ಲೀಕ್ ಆದ ಮಾಹಿತಿ ಅವತ್ತೇ ಅಥವಾ ಮರುದಿನದ ಹೆಲ್ತ್ ಬುಲೆಟಿನ್ ನಲ್ಲಿ ಡಿಟ್ಟೋ ಅಥವಾ ಭಾಗಶ: ಬಂದಿರುತ್ತದೆ. ಅಂದರೆ ಲೀಕ್ ಆಗುತ್ತಿರುವ ಮಾಹಿತಿ ಬಹುತೇಕ ಫೇಕ್ ಅಲ್ಲ ಎಂದಾಯಿತು.
  • ಇನ್ನು ಸೋಂಕಿತರ ಹೆಸರು ಮತ್ತು ಇತರ ವಿವರ ನೀಡುವುದು ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆ.
  • ಇದು ತಿಂಗಳಿನಿಂದ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆಯ ಸೈಬರ್ ಘಟಕದ ಗಮನಕ್ಕೆ ಬಂದಿಲ್ಲವೆ? ಅಥವಾ ಜಿಲ್ಲಾಡಳಿತಕ್ಕೂ ಇದು ಅಪಾಯಕಾರಿ ಎಂದು ಅನಿಸಿಲ್ಲವೇ?

ಹೆಸರು ಮತ್ತು ಸಾಮಾಜಿಕ ಕಳಂಕ

ಸರ್ಕಾರಿ ಇಲಾಖೆಗಳ ಬೇಜವಾಬ್ದಾರಿತನದಿಂದ ಜನರಲ್ಲಿ ಕೋವಿಡ್ ರೋಗಿ ಎಂದರೆ ಒಂದು ಬಗೆಯ ತಿರಸ್ಕಾರವಿದೆ. ಸೋಂಕಿತರಿಗೆ ಸಾಮಾಜಿಕ ಕಳಂಕವನ್ನು ಅಂಟಿಸಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಸೋಂಕಿತರ ಸಂಪೂರ್ಣ ವಿವರ ಲೀಕ್ ಆದರೆ ಹೇಗೆ? ಆಕಸ್ಮಾತ್ ಆ ಮಾಹಿತಿ ನಿಜವಾಗಿದ್ದರೂ ಸೋಂಕಿತನ ಮನೆಯವರು ಆ ಓಣಿಯ ಜನರಿಂದಲೇ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಮಾಹಿತಿ ಸುಳ್ಳಾಗಿದ್ದರೆ ಆ ವ್ಯಕ್ತಿ ಮುಂದೆ ತನ್ನ ಸುತ್ತಲಿನವರೊಡನೆ ಒಡನಾಡುವುದೂ ಕಷ್ಟಕರ.

ಪೊಲೀಸ್ ಕಡೆ ಡಿಸಿ ಕೈ

ಮೊನ್ನೆ ಜುಲೈ 15ರಂದು ಗಜೇಂದ್ರಗಡ ಮತ್ತು ಸುತ್ತಲಿನ ಹಳ್ಳಿಗಳಲ್ಲಿ 14 ‘ಸೋಂಕಿತರ’ ವಿವರ ವೈರಲ್ ಆಗಿತ್ತು. ಆದರೆ ಅದು ಹೆಲ್ತ್ ಬುಲೆಟಿನ್ ಮತ್ತು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಕುರಿತಾಗಿ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಅವರಿಗೆ ‘ಉತ್ತರಪ್ರಭ’’ ಗಮನಕ್ಕೆ ತಂದಿತು. ಹೀಗೆ ಲೀಕ್ ಆದ ಮಾಹಿತಿ ಮರುದಿನದ ಪ್ರಕಟಣೆಯಲ್ಲಿ ಬರುತ್ತಿದೆ ಎಂಬುದನ್ನು ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಯವರು, ಜಿಲ್ಲಾಡಳಿತ ಬಿಡುಗಡೆ ಮಾಡುವ ಮಾಹಿತಿಯೇ ಅಧಿಕೃತ. ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ಮಾಹಿತಿ ಲೀಕ್ ಆದರೆ, ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಸೂಚಿಸಿದರು. ಪ್ರಶ್ನೆ ಎಂದರೆ, ಈ ವಿಷಯವನ್ನು ಕ್ರಾಸ್ ಚೆಕ್ ಮಾಡಿ ಅವರೇ ಪೊಲೀಸ್ ಇಲಾಖೆಗೆ ಸೂಚಿಸಬಹುದಿತ್ತಲ್ಲ? ಎನ್ನುವ ಪ್ರಶ್ನೆ ಎದುರಾಗಿದೆ.

ಜುಲೈ 15ರಂದು ವೈರಲ್ ಆದ ಮಾಹಿತಿ ಹೆಚ್ಚು ಕಡಿಮೆ ಮರುದಿನದ ಹೆಲ್ತ್ ಬುಲೆಟಿನ್ ಮತ್ತು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಸತ್ಯವಾಗಿತ್ತು. ಜುಲೈ 16ರಂದೂ ಒಂದು ಪಟ್ಟಿ ಲೀಕ್ ಆಗಿತ್ತು. ಅದರ ವಿವರ ಜುಲೈ 17ರ ಅಧಿಕೃತ ಪಟ್ಟಿಯಲ್ಲಿ ಕಾಣಿಸಿಕೊಂಡವು.

ಏನಾಗುತ್ತಿದೆ ಇಲ್ಲಿ? ಈ ಪಟ್ಟಿಯನ್ನು ಅಂತಿಮಗೊಳಿಸುವ ಜಿಮ್ಸ್ ವಿಭಾಗದಿಂದಲೇ ಇದು ಸೋರಿಕೆ ಆಗುತ್ತಿರುವಂತಿದೆ. ಸೋಂಕಿತರ ವಿವರ ಇರುವ ಕಂಪ್ಯೂಟರ್ ಪರದೆಯ ಫೋಟೊ ತೆಗೆದು ಅದನ್ನು ವೈರಲ್ ಮಾಡಲಾಗುತ್ತಿದೆ.

ಹಿಂದೆ ಉಸ್ತುವಾರಿ ಸಚಿವ ಸಿ.ಸಿ.ಅಭಿಮಾನಿಗಳು ಎಂಬ ಫೇಸ್ ಬುಕ್ ಪೇಜ್ ಕೂಡ ನರಗುಂದ ತಾಲೂಕಿನ ವ್ಯಕ್ತಿಯೊಬ್ಬರನ್ನು ಸೋಂಕಿತ ಎಂದು ಮಾಹಿತಿ ಹಾಕಿತ್ತು. ಆಗಲೂ ಸೈಬರ್ ಪೊಲೀಸ್ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಂಡಿರಲಿಲ್ಲ. ಈಗ ವ್ಯವಸ್ಥಿತವಾಗಿಯೇ ಪಟ್ಟಿ ಲೀಕ್ ಆಗುತ್ತಿದೆ. ಸೋಂಕಿತರ ಹೆಸರು, ವಿವರ ನೀಡುವ ಮೂಲಕ ಕೋವಿಡ್ ಮರ್ಗಸೂಚಿಯ ಉಲ್ಲಂಘನೆ ಆಗುತ್ತಿದೆ.

Leave a Reply

Your email address will not be published.

You May Also Like

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕರವೇ ಮನವಿ

ಸ್ಥಳೀಯ ಪಪಂ ವ್ಯಾಪ್ತಿಯಲ್ಲಿ ಕೇವಲ 2 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಪಂಚಾಯ್ತಿಯ ಜನಸಂಖ್ಯೆಗನುಗುಣವಾಗಿ 4-5 ಶುದ್ದ ಕುಡಿಯುವ ನೀರಿನ ಘಟಕಗಳು ಅವಶ್ಯಕತೆ ಇದೆ. ಅವುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರವೇ ವತಿಯಿಂದ ಶುಕ್ರವಾರ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹೆಸರು, ಶೇಂಗಾ, ಹತ್ತಿ, ಗೋವಿನ ಜೋಳ ಬಿತ್ತನೆಗೆ ರೈತ ಅಣಿ ಉತ್ತಮ ಮಳೆ, ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆ ಚುರುಕು ಚಂದ್ರು ಬಿ

ಮುಳಗುಂದ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಉತ್ತಮ ಮಳೆಯಾಗಿದ್ದು, ಕೋವಿಡ್ ಲಾಕ್ ಡೌನ್ ಮಧ್ಯೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಹಂಗಾಮಿನ ಪ್ರಮುಖವಾಗಿ ಹೆಸರು, ಶೇಂಗಾ, ಹತ್ತಿ, ಗೋವಿನ ಜೋಳ ಬಿತ್ತನೆಗೆ ರೈತರು ಭೂಮಿ ಹದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ವಧರ್ಮ, ಜಾತಿಯ ಬೆಂಬಲ

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಹಕ್ಕೊತ್ತಾಯಕ್ಕಾಗಿ ಪಟ್ಟಣದಲ್ಲಿ ಬುಧವಾರ ನಡೆದ ಬೃಹತ್ ಹೋರಾಟದ ಮೆರವಣಿಗೆಯಲ್ಲಿ ತಾಲ್ಲೂಕಿನ ಮುಸ್ಲಿಂ, ಜೈನ, ಕ್ರಿಶ್ಚಿಯನ್, ವೀರಶೈವ ಲಿಂಗಾಯತ, ಕುರುಬ, ನಾಯಕ ಸೇರಿ ಎಲ್ಲಾ ಧರ್ಮ, ಜಾತಿಯ ಮುಖಂಡರು ಭಾಗವಹಿಸಿ ದೇವಾಂಗ ಸಮಾಜಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಗದಗ ಜಿಲ್ಲೆಯಲ್ಲಿ ವಿವಿದೆಡೆ 66400 ರೂ, ಮೌಲ್ಯದ ಅಕ್ರಮ ಮದ್ಯ ವಶ: ಆರೋಪಿಗಳ ಬಂಧನ

ಗದಗ: ಕೋವಿಡ್ 19 ಮಾರ್ಗಸೂಚಿಗಳನ್ನು ಹಾಗೂ ಕಾನೂನು ಉಲ್ಲಂಘನೆ ಮಾಡಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ 15 ಜನ ಆರೋಪಿತರಿಗಳನ್ನು ಬಂಧಿಸಿ , ಅವರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿ, ಬಂಧಿತರಿಂದ 66400 ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ