ಗದಗ ಜಿಲ್ಲೆಯಲ್ಲಿ ಅಚಾತುರ್ಯ: ಮೊದಲೇ ಲೀಕ್ ಆಗ್ತಿವೆ ಕೊರೊನಾ ಪಾಸಿಟಿವ್ ಲಿಸ್ಟ್ !

gadag corona list

ಗದಗ ಜಿಲ್ಲೆಯಲ್ಲಿ ಅಚಾತುರ್ಯ: ಮೊದಲೇ ಲೀಕ್ ಆಗ್ತಿವೆ ಕೊರೊನಾ ಪಾಸಿಟಿವ್ ಲೀಸ್ಟ್!

ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಧಿಕೃತವಾಗಿ ಪಾಸಿಟಿವ್ ಕೇಸ್ ವಿವರ ಬಿಡುಗಡೆ ಮಾಡುವ ಮುನ್ನವೇ ಒಂದು ಪಾಸಿಟಿವ್ ಲಿಸ್ಟ್ ವೈರಲ್ ಆಗುತ್ತಿದೆ. ಅಪಾಯಕಾರಿ ವಿಷಯ ಎಂದರೆ, ಇದರಲ್ಲಿ ಸೋಂಕಿತರ ಹೆಸರು, ವಿಳಾಸ, ಮೊಬೈಲ್ ನಂಬರ್ ವಿವರ ಇರುತ್ತವೆ!

ಗದಗ: ಈಗಾಗಲೇ ಜಿಲ್ಲೆಯಲ್ಲಿ ಹಲವು ದಿನಗಳಿಂದ ಜಿಲ್ಲಾಡಳಿತ ಕೊರೊನಾ ಸೋಂಕಿತರ ಪಟ್ಟಿ ಬಿಡುಗಡೆ ಮಾಡುವ ಮೊದಲೇ ಸೋಂಕಿತರ ಪಟ್ಟಿಯೊಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ. ಇನ್ನು ಸೋಂಕಿತರ ಹೆಸರು, ಊರು ಜೊತೆಗೆ ಮೊಬೈಲ್ ಸಂಖ್ಯೆ ಸಮೇತವಾಗಿ ಲೀಸ್ಟ್ ಹರಿದಾಡುತ್ತಿರುವುದು ಅಪಾಯಕಾರಿಯೇ ಸರಿ.

ಇನ್ನು ಈ ಬಗ್ಗೆ ಈಗಾಗಲೇ ಜಿಮ್ಸ್ ಗಮನಕ್ಕೂ ತರಲಾಗಿತ್ತು. ಈ ವಿಚಾರವಾಗಿ ಉತ್ತರಪ್ರಭ ಎರಡು ಬಾರಿ ವಿಶೇಷ ವರದಿ ಪ್ರಕಟಿಸಿತ್ತು. ಆದರೆ ಈ ಬಾರಿ ಲೀಕ್ ಆಗುತ್ತಿರುವ ಪಾಸಿಟಿವ್ ಲೀಸ್ಟ್ ನಲ್ಲಿರುವ ಹೆಸರುಗಳು ಅಸಲಿಗೆ ಸೋಂಕಿತರೇ? ಎನ್ನುವ ಅನುಮಾನದಿಂದ ಜುಲೈ 15 ಮತ್ತು 16 ಎರಡು ದಿನಗಳ ಲೀಸ್ಟ್ ಗಮನಿಸಿದಾಗ ಅದರಲ್ಲಿರುವ ಬಹುತೇಕರಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ.  

ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಒಂದು ಸೈಬರ್ ಘಟಕ ಅಂತಾ ಇರುತ್ತದೆ. ಈ ವಿಚಾರ ಸೈಬರ್ ಘಟಕದ ಗಮನಕ್ಕೆ ಬಂದಿಲ್ಲವೇ? ಎನ್ನುವ ಅನುಮಾನ ಕಾಡುತ್ತಿದೆ.  ಇನ್ನು ಈ ವಿಚಾರವಾಗಿ ಜಿಲ್ಲಾಡಳಿತವೂ ನಿರ್ಲಕ್ಷ್ಯ ಧೋರಣೆ ತಾಳಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.  

ಇಲ್ಲಿ ಗಂಭೀರ ಪ್ರಶ್ನೆಗಳಿವೆ:

ಹೆಸರು ಮತ್ತು ಸಾಮಾಜಿಕ ಕಳಂಕ

ಸರ್ಕಾರಿ ಇಲಾಖೆಗಳ ಬೇಜವಾಬ್ದಾರಿತನದಿಂದ ಜನರಲ್ಲಿ ಕೋವಿಡ್ ರೋಗಿ ಎಂದರೆ ಒಂದು ಬಗೆಯ ತಿರಸ್ಕಾರವಿದೆ. ಸೋಂಕಿತರಿಗೆ ಸಾಮಾಜಿಕ ಕಳಂಕವನ್ನು ಅಂಟಿಸಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಸೋಂಕಿತರ ಸಂಪೂರ್ಣ ವಿವರ ಲೀಕ್ ಆದರೆ ಹೇಗೆ? ಆಕಸ್ಮಾತ್ ಆ ಮಾಹಿತಿ ನಿಜವಾಗಿದ್ದರೂ ಸೋಂಕಿತನ ಮನೆಯವರು ಆ ಓಣಿಯ ಜನರಿಂದಲೇ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಮಾಹಿತಿ ಸುಳ್ಳಾಗಿದ್ದರೆ ಆ ವ್ಯಕ್ತಿ ಮುಂದೆ ತನ್ನ ಸುತ್ತಲಿನವರೊಡನೆ ಒಡನಾಡುವುದೂ ಕಷ್ಟಕರ.

ಪೊಲೀಸ್ ಕಡೆ ಡಿಸಿ ಕೈ

ಮೊನ್ನೆ ಜುಲೈ 15ರಂದು ಗಜೇಂದ್ರಗಡ ಮತ್ತು ಸುತ್ತಲಿನ ಹಳ್ಳಿಗಳಲ್ಲಿ 14 ‘ಸೋಂಕಿತರ’ ವಿವರ ವೈರಲ್ ಆಗಿತ್ತು. ಆದರೆ ಅದು ಹೆಲ್ತ್ ಬುಲೆಟಿನ್ ಮತ್ತು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಕುರಿತಾಗಿ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಅವರಿಗೆ ‘ಉತ್ತರಪ್ರಭ’’ ಗಮನಕ್ಕೆ ತಂದಿತು. ಹೀಗೆ ಲೀಕ್ ಆದ ಮಾಹಿತಿ ಮರುದಿನದ ಪ್ರಕಟಣೆಯಲ್ಲಿ ಬರುತ್ತಿದೆ ಎಂಬುದನ್ನು ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಯವರು, ಜಿಲ್ಲಾಡಳಿತ ಬಿಡುಗಡೆ ಮಾಡುವ ಮಾಹಿತಿಯೇ ಅಧಿಕೃತ. ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ಮಾಹಿತಿ ಲೀಕ್ ಆದರೆ, ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಸೂಚಿಸಿದರು. ಪ್ರಶ್ನೆ ಎಂದರೆ, ಈ ವಿಷಯವನ್ನು ಕ್ರಾಸ್ ಚೆಕ್ ಮಾಡಿ ಅವರೇ ಪೊಲೀಸ್ ಇಲಾಖೆಗೆ ಸೂಚಿಸಬಹುದಿತ್ತಲ್ಲ? ಎನ್ನುವ ಪ್ರಶ್ನೆ ಎದುರಾಗಿದೆ.

ಜುಲೈ 15ರಂದು ವೈರಲ್ ಆದ ಮಾಹಿತಿ ಹೆಚ್ಚು ಕಡಿಮೆ ಮರುದಿನದ ಹೆಲ್ತ್ ಬುಲೆಟಿನ್ ಮತ್ತು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಸತ್ಯವಾಗಿತ್ತು. ಜುಲೈ 16ರಂದೂ ಒಂದು ಪಟ್ಟಿ ಲೀಕ್ ಆಗಿತ್ತು. ಅದರ ವಿವರ ಜುಲೈ 17ರ ಅಧಿಕೃತ ಪಟ್ಟಿಯಲ್ಲಿ ಕಾಣಿಸಿಕೊಂಡವು.

ಏನಾಗುತ್ತಿದೆ ಇಲ್ಲಿ? ಈ ಪಟ್ಟಿಯನ್ನು ಅಂತಿಮಗೊಳಿಸುವ ಜಿಮ್ಸ್ ವಿಭಾಗದಿಂದಲೇ ಇದು ಸೋರಿಕೆ ಆಗುತ್ತಿರುವಂತಿದೆ. ಸೋಂಕಿತರ ವಿವರ ಇರುವ ಕಂಪ್ಯೂಟರ್ ಪರದೆಯ ಫೋಟೊ ತೆಗೆದು ಅದನ್ನು ವೈರಲ್ ಮಾಡಲಾಗುತ್ತಿದೆ.

ಹಿಂದೆ ಉಸ್ತುವಾರಿ ಸಚಿವ ಸಿ.ಸಿ.ಅಭಿಮಾನಿಗಳು ಎಂಬ ಫೇಸ್ ಬುಕ್ ಪೇಜ್ ಕೂಡ ನರಗುಂದ ತಾಲೂಕಿನ ವ್ಯಕ್ತಿಯೊಬ್ಬರನ್ನು ಸೋಂಕಿತ ಎಂದು ಮಾಹಿತಿ ಹಾಕಿತ್ತು. ಆಗಲೂ ಸೈಬರ್ ಪೊಲೀಸ್ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಂಡಿರಲಿಲ್ಲ. ಈಗ ವ್ಯವಸ್ಥಿತವಾಗಿಯೇ ಪಟ್ಟಿ ಲೀಕ್ ಆಗುತ್ತಿದೆ. ಸೋಂಕಿತರ ಹೆಸರು, ವಿವರ ನೀಡುವ ಮೂಲಕ ಕೋವಿಡ್ ಮರ್ಗಸೂಚಿಯ ಉಲ್ಲಂಘನೆ ಆಗುತ್ತಿದೆ.

Exit mobile version