ಆತ್ಮಿಯರೇ,
ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ದಾವಣಗೆರೆಯ ಟಿ.ಆರ್.ಹೇಮಂತ್ ಕುಮಾರ್ ಅವರು. ನ್ಯಾಯಾಂಗ ಇಲಾಖೆಯ ಉದ್ಯೋಗಿಯಾಗಿರುವ ಹೇಮಂತಕುಮಾರ್ ಅವರು ನೆಲ, ಜಲ ಸಂರಕ್ಷಿಸುವ ಮೂಲಕ ಇರುವ ಒಂದೇ ಜನ್ಮವನ್ನು ಸಾರ್ಥಕಗೊಳಿಸುವ ಕುರಿತು ಜೊತೆಗೆ ಸಾರ್ಥಕ ಬದುಕನ್ನು ಹುಡುಕುವ ಸಂದೇಶ ನೀಡಿದ್ದಾರೆ. ನೆಪವಾದ ಕೊರೋನಾ ದಿಂದ ನಾವು ತಿಳಿಯಬೇಕಾದದ್ದನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
ಸಾರ್ಥಕ ಜನ್ಮ
ಇರುವುದೊಂದೇ ಜನ್ಮ ಸಾರ್ಥಕವಾಗಲಿ
ಸ್ವಾರ್ಥತೆಯ ಕರ್ಮ ದೂರವಾಗಲಿ
ನೆಲ, ಜಲ, ಗಾಳಿಯಷ್ಟೇ ಅಲ್ಲ ಬದುಕು
ಅದರಾಚೆಯೂ ಇದೆ ಸ್ವಲ್ಪ ಹುಡುಕು !
ಕೊರೊನೆಯದು ಜಾಡ್ಯವಲ್ಲ, ನೆಪವಷ್ಟೇ!
ನೇಪಥ್ಯ ದಾರಿಗೆ ಎಚ್ಚರಿಕೆಯ ಪರಾಕಾಷ್ಠೆ
ಶಿಕ್ಷಿಸುತ್ತಿಲ್ಲ ಏಕದು ಪ್ರಾಣಿ ಪಕ್ಷಿಗಳನು?
ಕಕ್ಷೆಗಳ ಮೀರದ ನಿರುಪದ್ರವಿಗಳನು
ನೀನೇ ತೋಡಿದ ಖೆಡ್ಡಾ ಮುಚ್ಚಿದೆ ನಿನ್ನನೇ;
ಸೆಡ್ಡು ಹೊಡೆದು ಬೀಗುತಿದೆ ಸುಖಾಸುಮ್ಮನೆ
ಪದೇ ಪದೇ ಕೈಯಿ, ಬಾಯಿ ತೊಳೆದರಾಯಿತೆ?
ಮನಸು ಆಗಲಿ ಸ್ವಚ್ಚ, ಪಾಲಿಸುತ ಭಾವೈಕ್ಯತೆ
ಭಕ್ಷಿಸುತಿರೆ ನೀ ಎಲ್ಲವ ರಕ್ಷಕನ ರೂಪದಿ
ಆವರಿಸಿದೆ ಕರ್ಮ ಫಲ ಕೊರೋನ ತೆರದಿ
ದುಷ್ಟ ಬುದ್ಧಿ ಬಿಡದೇ ನೀ ಮನೆಯಲ್ಲೇ ಇದ್ದರೂ
ಕಷ್ಟವಂತೂ ಅಳಿಯದು; ನಷ್ಟವೆಂದೂ ತಪ್ಪದು;
ತಪ್ಪಲ್ಲ ಈ ದೈಹಿಕ, ಸಾಮಾಜಿಕ ಅಂತರ
ಸೊಪ್ಪು ಹಾಕದಿರೆ ಹಿರಿಯರ ಆದರ್ಶಗಳಿಗೆ
ಉಪ್ಪು ತಿಂದರೂ ನೀರು ಸಿಗದು ನಂತರ
ತೆಪ್ಪಗಾಗಿಸುವುದು ನಿನ್ನ , ಕೊರೊನೆಯ ಬೆಂತರ
ಜಾಗರೂಕನಾಗು; ಆಗು ಹೋಗುಗಳ ನೆನೆಯುತ
ಸಾಗಿಸು ಬದುಕ; ದಾನ ಧರ್ಮಗಳ ಮಾಡುತ
ಭೋಗ ಲಾಲಸೆಗಳಿಗೆ ಮನಕೊಡುವ ಬದಲು
ನಾಗರೀಕನಾಗು ನೀ ಎಲ್ಲಕ್ಕಿಂತ ಮೊದಲು
ಟಿ.ಆರ್.ಹೇಮಂತ್ ಕುಮಾರ್, ದಾವಣಗೆರೆ
1 comment
ಸುಂದರವಾಗಿ ಮೂಡಿ ಬರುತ್ತಿದೆ ನಿಮ್ಮ ಪತ್ರಿಕೆ.
ಕೊರೊನಾ ಗೀತೆ ಸುಂದರವಾಗಿದೆ.