ಮಿಡಲ್ ಸ್ಕೂಲ್ ಕಲಿಯುವಾಗ ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆರೆ ಬಳುಕಿನಲ್ಲಿ’ ಭಾವಗೀತೆಯನ್ನು ಕನ್ನಡ ರಾಜ್ಯೋತ್ಸವಕ್ಕೆ ಹಾಡಲು ಕಂಠಪಾಟ ಮಾಡಿಕೊಳ್ಳುವಾಗ ಕವಿ ನಿಸಾರ್ ನಮ್ಮ ಮಲೆನಾಡಿನವರೋ ಸಾಗರದವರೋ ಇರಬೇಕು ಅನ್ನಿಸಿತ್ತು. ಇಲ್ಲವಾದರೆ ಜೋಗ ತುಂಗ ಸಹ್ಯಾದ್ರಿ ಇವೆಲ್ಲಾ ಪದ್ಯದೊಳಗೆ ನುಸುಳಿದ್ದು ಹೇಗೆ? ಈ ಹಾಡು ಬರ್ದಿದ್ದಾರಲ್ಲ ನಿಸಾರ್ ಅಹ್ಮದ್ ಅವರು ನಮ್ಮೂರಿನವರು ಗೊತ್ತಾ? ಅಂತ ಸ್ನೇಹಿತರ ಬಳಿ ಜಂಬದಿಂದ ಸುಳ್ಳು ಹೇಳಿ ಕತ್ತು ಕೊಂಕಿಸಿದ್ದೆ. ನಾನು ಹೇಳಿದ್ದ ಆ ನಮ್ಮೂರು ಯಾವುದು ಅಂತ ನಮ್ಮೂರಿನವರೇ ಆದ ಆ ದಡ್ಡ ಶಿಖಾಮಣಿಗಳು ಕೇಳಿರಲೂ ಇಲ್ಲ.

ಆ ನಂತರ ಹೈಸ್ಕೂಲ್ ಕಲಿಯುವಾಗ ‘ಕುರಿಗಳು ಸಾರ್ ನಾವ್ ಕುರಿಗಳು’ ವಿಡಂಭನಾತ್ಮಕ ಗೀತೆಯನ್ನು ಬಾಯಿಪಾಠ ಮಾಡಿಕೊಳ್ಳುವಾಗ ನಿಸಾರ್ ಬಹುಶಃ ಬೇಂದ್ರಯವರ ಶಿಷ್ಯರೇ ಇರಬೇಕು. ಬೇಂದ್ರೆ ಬರೆದ ‘ಕುರುಡು ಕಾಂಚಾಣ ಕುಣಿಯುತ್ತಲಿತ್ತೋ’ ಪದ್ಯಕ್ಕೆ ಪ್ರತಿಯಾಗಿ ಕುರಿಗಳು ಸಾರ್ ಪದ್ಯ ಬರೆದು ಗುರುಕಾಣಿಕೆ ಕೊಟ್ಟಿದ್ದಾರೇನೋ ಅಂದುಕೊಂಡಿದ್ದೆ.

ನಿಸಾರ್ ಅಹ್ಮದ್ ಎನ್ನುವ ನಮ್ಮ ಪ್ರೀತಿಯ ಕವಿಯನ್ನು ಕಣ್ಣಾರೆ ಕಂಡಿದ್ದು ನರಸಿಂಹ ರಾಜ ಕಾಲೋನಿಯ ದ್ವಾರಕಾ ಹೋಟೆಲ್ ಮುಂದೆ. ಅವರ ಮುಖದಲ್ಲಿದ್ದ ಗಾಂಭೀರ್ಯ ಕಂಡು ಸಿಟ್ಟಿನ ಮನುಷ್ಯ ಇರಬೇಕು ಅಂದುಕೊಂಡಿದ್ದೆ. ಮಾತಾಡಿಸುವ ಗೋಜಿಗೆ ಹೋಗಿರಲಿಲ್ಲ. ಆಮೇಲೆ ಚಾನೆಲ್ ಒಂದರಲ್ಲಿ ಬೆಂಗಳೂರು ಬ್ಯೂರೋ ಮುಖ್ಯಸ್ಥನಾಗಿದ್ದ ಸಂದರ್ಭದಲ್ಲಿ ಕನ್ನಡದ ವಿಚಾರಕ್ಕೆ ಸಂಬಂಧಪಟ್ಟಂತೆ ಬೈಟ್ ಪಡೆದುಕೊಳ್ಳಲು ರಿಪೋರ್ಟರ್ ಕಳಿಸಬೇಕಿತ್ತು. ಸರ್ ನೀವೊಂದು ಸಲ ಮಾತಾಡಿ ಅಂದಿದ್ದ ನಮ್ಮ ಬ್ಯೂರೋ ರಿಪೋರ್ಟರ್. ಅಲ್ಲಿಯವರೆಗೆ ಅವರ ಫೋನ್ ನಂಬರ್ ಸಹ ನನ್ನಲ್ಲಿರಲಿಲ್ಲ. ಜೋಗಿ ಸರ್ ರಿಂದ ನಿಸಾರ್ ಮೊಬೈಲ್ ನಂಬರ್ ಪಡೆದು ಹಿಂಜರಿಕೆಯಿಂದಲೇ ಕಾಲ್ ಮಾಡಿದ್ದೆ. ಅದ್ಭುತ ಲಹರಿಯಲ್ಲಿದ್ದ ನಿಸಾರ್ ಸರ್ ಅವತ್ತು ನನ್ನೊಳಗಿದ್ದ ಎಲ್ಲಾ ಪೂರ್ವಾಗ್ರಹಗಳನ್ನು ನಿವಾರಿಸಿಬಿಟ್ಟರು. (ಅವತ್ತು ಅವರು ಬೈಟ್ ಕೊಡಲಿಲ್ಲ ಅದು ಬೇರೆ ವಿಷಯ) ಆ ನಂತರ ಐದಾರು ಸಲ ಅವರನ್ನು ಭೇಟಿ ಮಾಡಿದೆ. ಪ್ರತೀ ಸಲ ಮಾತಾಡಿದಾಗಲೂ ಆತ್ಮೀಯತೆಯಿಂದಲೇ ಮಾತಾಡಿಸಿದ್ದರು.

ವ್ಯಾಸ ರಾವ್ ತೀರಿಕೊಂಡಾಗ ಅವರ ಬಗ್ಗೆ ಬರೆದಿದ್ದ ಸಣ್ಣ ಅಂಕಣವೊಂದನ್ನು ನಿಸಾರ್ ಅಹ್ಮದ್ ಅವರಿಗೆ ಕಳಿಸಿದ್ದೆ. ಓದಿದವರೆ ಕಾಲ್ ಮಾಡಿ ಅಭಿಪ್ರಾಯ ತಿಳಿಸಿದರು. ಕನ್ನಡ ಪತ್ರಿಕೋದ್ಯಮದಲ್ಲಿ ಸಾಹಿತ್ಯ ಓದಿಕೊಳ್ಳುವ ಹವ್ಯಾಸ ಇರುವವರೇ ಕಡಿಮೆಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ನಿಸಾರ್ ಯಾವತ್ತಿಗೂ ನಮ್ಮ ಪ್ರೀತಿಯ ಕವಿಯಾಗಿಯೇ ಉಳಿದಿದ್ದರು. ಕರ್ನಾಟಕದ ಎಷ್ಟೋ ಜನರಿಗೆ ಅವರ ಮುಖ ಪರಿಚಯ ಕಡಿಮೆ ಆದರೆ ಅವರು ಬರೆದ ನಿತ್ಯೋತ್ಸವ ಗೀತೆ ಕಂಠಪಾಠ. ಧರ್ಮಗಳನ್ನು ಮೀರಿದ ಕವಿ ಅವರು. ಇನ್ನೊಂದರ್ಥದಲ್ಲಿ ಕವಿಯಾದವನಿಗೆ ಧರ್ಮಗಳಿಲ್ಲ ಎಂದು ನಿರೂಪಿಸಿ ಬದುಕಿದ ಕವಿ. ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಗೀತೆಯೆ ಅದಕ್ಕೊಂದು ಸೂಕ್ತ ಉದಾಹರಣೆ. ನನ್ನ ಗಾಢ ಪ್ರೀತಿಯಲ್ಲಿ ಆಗಾಗ ಸಣ್ಣ ಮುನಿಸು ಬಂದಾಗಲೆಲ್ಲಾ ನಾನು ಅವಳಿಗೆ ‘ಮತ್ತದೇ ಬೇಸರ ಅದೆ ಸಂಜೆ ಅದೆ ಏಕಾಂತ’ ಪದ್ಯ ಕಳಿಸಿದ್ದೇನೆ. ‘ರಂಗೋಲಿ ಮತ್ತು ಮಗ’ ಎನ್ನುವ ಒಂದು ಸಣ್ಣ ಪದ್ಯವಿದೆ ಅವರದ್ದು ಅದು ನನ್ನಿಷ್ಟದ ಪದ್ಯ. ‘ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ’, ‘ಬೇಸರಾಗಿದೆ ಮಾತು ಭಾರವಾಗಿದೆ ಮೌನ’ ‘ನಿಮ್ಮೊಡನಿದ್ದ ನಿಮ್ಮಂತಾಗದೇ’, ‘ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ’, ‘ಎಂಥೆಂಥ ಜೀವಗಳು ಬಾಳಿ ಬೆಳಗಿದವಿಲ್ಲಿ’, ‘ನನ್ನ ನಲಿವಿನ ಬಳ್ಳಿ ಮೈದುಂಬಿ ನಲಿವಾಗ’ ಇಂತಹವೇ ಬಹಳಷ್ಟು ನಿಸಾರ್ ರ ಚೆಂದದ ಪದ್ಯಗಳು ನಮ್ಮ ಉದ್ವೇಗದ ಮನಸನ್ನು ಪ್ರಶಾಂತಗೊಳಿಸುತ್ತವೆ.

ತುಂಬು ಜೀವನ ನಡೆಸಿದ ನಿಸಾರ್ ಮುಖ್ಯವಾಹಿನಿಗಳಿಂದ ಸದಾ ಅಂತರ ಕಾಪಾಡಿಕೊಂಡರು. ಪ್ರಚಾರಗಳಿಂದ ದೂರವೇ ಉಳಿದರು. ಸುಮತೀಂದ್ರ ನಾಡಿಗರ ಬುಕ್ ಶಾಪ್ ಗೆ ಸದಾ ಭೇಟಿ ಕೊಡುತ್ತಿದ್ದರು ಎಂದು ಕೇಳಿ ಬಲ್ಲೆ. ನನ್ನ ಆರಾಧ್ಯ ಕವಿ ಅಡಿಗರ ಸಾಹಿತ್ಯ ವಲಯದ ಖಾಯಂ ಸದಸ್ಯರೂ ಅವರಾಗಿದ್ದರು ಒಂದು ಕೇಳಿದ್ದೇನೆ. ಅವರ ಮನಸು ಸಂಜೆ ಐದರ ಮಳೆಯಲ್ಲಿ ಸದಾ ಗಾಂಧಿ ಬಜಾರಿನಲ್ಲೇ ಸುಳಿಯುತ್ತಿತ್ತೇನೋ. ನಿಸಾರ್ ಇನ್ನಿಲ್ಲ ಎನ್ನುವುದನ್ನು ನಂಬುವುದು ಅರಗಿಸಿಕೊಳ್ಳುವುದು ಕೊಂಚ ಕಷ್ಟ. ಅವರು ಇನ್ನೂ ಇದ್ದಾರೆ ವಾಟ್ಸಾಪಿನಲ್ಲಿ ಬರೆದು ಕಳಿಸಿದ್ದನ್ನು ನೋಡುತ್ತಾರೆ. ಇಷ್ಟವಾದರೆ ಕಾಲ್ ಮಾಡಿ ಅಭಿಪ್ರಾಯ ಹೇಳುತ್ತಾರೆ ಎಂದೇ ನಂಬುತ್ತೇನೆ.

ಅಲ್ವಿದಾ ನಿಸಾರ್ ಅಹ್ಮದ್ ಚಾಚಾ. ನಿಮ್ಮ ಪದ್ಯಗಳ ಸಂತೆಯಲ್ಲಿ ನಾವು ನಿತ್ಯ ಕಳೆದುಹೋಗುತ್ತೇವೆ. ನರಸಿಂಹರಾಜ ಕಾಲೋನಿಯ ದ್ವಾರಕಾ ಹೋಟೆಲ್ ಮುಂದೆ ನೀವು ಅಂದು ನಿಂತಿದ್ದ ಜಾಗದಲ್ಲೇ ನಿಂತಿರುತ್ತೀರಿ ಎಂದು ಭಾವಿಸುತ್ತೇನೆ. ಹೋಗಿ ಬನ್ನಿ. ನಿಮ್ಮ ಸಾಹಿತ್ಯ ಸೇವೆಗೆ ನಾವು ಆಭಾರಿಗಳು. ಸರ್ವಶಕ್ತ ಪ್ರಕೃತಿ ಸ್ವರೂಪಿಣಿ ಜಗನ್ಮಾತೆ ನಿಮ್ಮ ಪವಿತ್ರಾತ್ಮಕ್ಕೆ ಚಿರಶಾಂತಿ ಕರುಣಿಸಲಿ. ಓಂ ಶಾಂತಿ.

ವಿಶ್ವಾಸ್ ಭಾರದ್ವಾಜ್(ವಿಭಾ), ಬೆಂಗಳೂರು


*

Leave a Reply

Your email address will not be published. Required fields are marked *

You May Also Like

ಬುಲೆಟ್ ಕೊಟ್ರ ತಾಳಿ ಕಟ್ತಿನಿ ಅಂತ ಪಟ್ಟು ಹಿಡಿದ ವರನಿಗೆ ಏನಾತು ನೋಡ್ರಿ.

ಉತ್ತರಪ್ರದೇಶ್: ಪ್ರತಿಯೊಬ್ಬ ಹೆಣ್ ಮಕ್ಕಳು ಮನ್ಯಾಗ್ ತಂದಿ-ತಾಯಿ ಸಾಲಾಸೂಲಾ ಮಾಡಿ ಮದ್ವಿ ಮಾಡಿ, ಅಳಿಯಾ ಕೇಳೋವಷ್ಟು ವರದಕ್ಷಿಣೆ ಕೊಟ್ಟು ಮಗಳನ್ ಗಂನ್ ಮನಿಗೆ ಕಳಿಸಬೇಕು ಅನ್ನೋವಷ್ಟರಲ್ಲಿ ಹೈರಾಣಾಗಿ ಹೋಗುತ್ತ. ಷ್ ಅಪ್ಪಾ ಅಂತ ಮಗಳ್ ಮದ್ವಿ ಆದ್ರ ಸಾಕು ತಂದಿ-ತಾಯಿ ನಿಟ್ಟುಸಿರು ಬಿಡ್ತಾರಾ? ಆದರೆ ಇಲ್ಲೊಬ್ಬ ಹುಡುಗಿ ವರದಕ್ಷಣಿ ಅಂತ ನಂಗ್ ಬುಲೇಟ್ ಬೇಕಾಬೇಕು ಅಂತ ಪಟ್ಟು ಹಿಡಿದ ವರನಿಗೆ ತಕ್ಕ ಪಾಠಾ ಕಲಿಸ್ಯಾಳ.

ರೋಣದಲ್ಲಿ ಪ್ರಾಣಿಗಳ ಹಸಿವು ನೀಗಿಸಿ ಮಾನವೀಯತೆ ಮೆರೆದ ಎಎಸ್ಐ ಎಚ್.ಎಮ್.ಸರ್ವಿ

ನಗರದ ಬಸ್ ನಿಲ್ದಾಣದ ಹತ್ತಿರ ಬೀಡು ಬಿಟ್ಟಿರುವ ಕೋತಿಗಳಿಗೆ ಬಾಳೆ ಹಣ್ಣು ನೀಡುವ ಮೂಲಕ ಎಎಸ್ಐ ಒಬ್ಬರೂ ಮಾನವೀಯತೆ ಮೆರೆದ ಘಟನೆ ರೋಣದಲ್ಲಿ ನಡೆದಿದೆ.

ಬಿಜೆಪಿಯಿಂದ ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಖಾಸಗೀಕರಣದ ಹುನ್ನಾರ: ಎಸ್.ಆರ್.ಪಾಟೀಲ

ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸುತ್ತಿದ್ದು, ಇದೀಗ ಕರ್ನಾಟಕದ @BJP4Karnataka ಸರ್ಕರವೂ ಕೂಡ ಇದೇ ಹಾದಿ ತುಳಿಯುತ್ತಿದೆ. ಬಿಎಂಟಿಸಿ ಸಂಸ್ಥೆಯ ಖಾಸಗೀಕರಣಕ್ಕೆ @BSYBJP @LaxmanSavadi ಮುಂದಾಗಿರುವುದನ್ನು ನಾನು ಖಂಡಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ: ಶಾಸಕರು ಹೇಳಿದರೆ ಅಕ್ರಮ ಮರಳು ಗಣಿಗಾರಿಕೆಗೆ ಅನುಮತಿ ಕೊಡ್ತಾರಾ ಅಧಿಕಾರಿಗಳು?

ಮರಳು ನೀತಿ ಅನ್ವಯ ಮರಳು ಗಣಿಗಾರಿಕೆಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ನೀಡಲಾಗಿದೆ. ಆದರೆ ಮರಳು ಗುತ್ತಿಗೆ ಪಡೆದ ಗುತ್ತಿಗೆದಾರರು ಎಗ್ಗಿಲ್ಲದೇ ಸಕ್ರಮದ ಹೆಸರಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದಕ್ಕೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಅವರ ಪೋಷಣೆಯೂ ಇದೆ ಎನ್ನುವ ಮಾತುಗಳು ಕೇಳಲಾರಂಭಿಸಿವೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕೊಕ್ಕರಗುಂದಿ ಬೂದಿಹಾಳ ಗ್ರಾಮದಲ್ಲಿರುವ ಕಲ್ಪವೃಕ್ಷ ಮರಳು ಗುತ್ತಿಗೆ ಪಾಯಿಂಟ್ ಇದಕ್ಕೆ ತಾಜಾ ಉದಾಹರಣೆಯಾಗಿದೆ.