ಆಲಮಟ್ಟಿ: ಶೇ 40 ರಷ್ಟು ಮಧ್ಯಂತರ ಪರಿಹಾರಕ್ಕೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ನಿರ್ಣಯದಂತೆ, ಸಂಘದ ಇಲ್ಲಿಯ ಯೋಜನಾ ಶಾಖೆಯ ಸುಮಾರು 1100 ಕ್ಕೂ ಅಧಿಕ ನೌಕರರು ಮಾ.1 ರಿಂದ ಕಚೇರಿ ಕಾರ್ಯಕ್ಕೆ ಗೈರು ಹಾಜರಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದೇವೆ ಎಂದು ಯೋಜನಾ ಶಾಖೆಯ ಅಧ್ಯಕ್ಷ ಸದಾಶಿವ ದಳವಾಯಿ ಹೇಳಿದರು. ಆಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದಕ್ಕೆ ನೌಕರರ ಸಂಘದ ವಿವಿಧ ವೃಂದ ಶಾಖೆಯವರು ಬೆಂಬಲ ವ್ಯಕ್ತಪಡಿಸಿದ್ದು, ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಳ್ಳಲಿದ್ದಾರೆ. ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರತಿ ಐದು ವರ್ಷಕ್ಕೊಮ್ಮೆ ಹೊಸ ವೇತನ ಆಯೋಗ ರಚಿಸಿ ನೌಕರರ ವೇತನ ಹೆಚ್ಚಿಸುವುದು ಸಂಪ್ರದಾಯ. ನೌಕರರು ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ಮೂಲಭೂತ ಹಾಗೂ ನ್ಯಾಯಸಮ್ಮತ ಹಕ್ಕಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ನೌಕರರ ಕುಟುಂಬ ನಿರ್ವಹಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಸರ್ಕಾರ ವೇತನ ಆಯೋಗ ರಚಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಆಯೋಗದಿಂದ ಮಧ್ಯಂತರ ವರದಿ ತರಿಸಿ ಶೇ 40 ರಷ್ಟು ಮಧ್ಯಂತರ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ಈ ಶೇ 40 ರಷ್ಟು ಫಿಟ್ ಮೆಂಟ್ ಸೌಲಭ್ಯವನ್ನು ಜುಲೈ 2022 ರಿಂದ ಜಾರಿಗೆ ತರಬೇಕು ಎಂದರು.
ಪಂಜಾಬ್, ರಾಜಸ್ಥಾನ್, ಛತ್ತಿಸ್ ಘಡ್, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆ (ಎನ್ ಪಿಎಸ್) ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಾಗಿದೆ, ಅದೇ ರೀತಿ ಕರ್ನಾಟಕದಲ್ಲಿಯೂ ಓಪಿಎಸ್ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವೈ.ಎಂ. ಪಾತ್ರೋಟ, ಎಂ.ಎಸ್. ದಂಧರಗಿ, ಪ್ರಭಾಕರ, ಎಂ.ಆರ್. ಮಲ್ಲೇವಾಲಿ, ರಾಜ್ಯ ಪರಿಷತ್ ಸದಸ್ಯ ಎ.ಎಸ್. ವಕ್ರ, ಸಂಘಟನಾ ಕಾರ್ಯದರ್ಶಿ ಎ.ಎಂ. ಬಾಣಕಾರ, ಮಾರುತಿ ಪಾಟೀಲ, ಕೃಷ್ಣಾ ಭಾಗ್ಯ ಜಲ ನಿಗಮ ನೌಕರರ ಸಂಘದ ಅಧ್ಯಕ್ಷ ಸಾಬಣ್ಣ ಕೋಳೂರ, ಟೋಪಣ್ಣ ನಾಯಕ, ಉಪಾಧ್ಯಕ್ಷ ಆದಮ್ ಶಫಿ ಇತರರು ಇದ್ದರು.