ಆಲಮಟ್ಟಿ : ಗುರು ಶಿಷ್ಯರ ಸಂಬಂಧ ಬಹಳಷ್ಟು ಪವಿತ್ರಮಯ. ಆದರೆ ಇತ್ತಿತ್ತಲಾಗಿ ಆ ಭಾವ ಕಣ್ಮರೆಯಾಗುತ್ತಿದೆ. ಹಿಂದಿಗೂ,ಇಂದಿಗೂ ಗುರು ಶಿಷ್ಯರ ಬಾಂಧವ್ಯದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದೆ, ಸಾಮರಸ್ಯ, ಗೌರವಾರ್ಥದ ಭಾವ ದೂರ ಸರಿಯುತ್ತಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಖೇದ ವ್ಯಕ್ತಪಡಿಸಿದರು.
ಇಲ್ಲಿನ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆ,ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ಇಂದಿನ ಮಕ್ಕಳು ಗುರು ಹಿರಿಯರ ಮಾರ್ಗದರ್ಶನದಲ್ಲಿ ಪ್ರಸನ್ನತೆ ಹೊಂದಿ ಉನ್ನತಮಟ್ಟದ ಗುರಿ ತಲುಪಬೇಕು.ಬದುಕಿನ ಮೌಲ್ಯ ಕರುಣಿಸುವ ಗುರುಗಳಿಗೆ ವಿದ್ಯಾರ್ಥಿಗಳು ಗೌರವ ಭಾವದಿಂದ ಕಾಣುವ ದೃಷ್ಟಿಕೋನ ಹೊಂದಬೇಕು. ನೈತಿಕತೆಯಿಂದ ಶೈಕ್ಷಣಿಕ ಪ್ರಗತಿಲ್ಲಿ ಸಾಧನೆ ತೋರಬೇಕು. ಓದು,ಬರಹದ ಹವ್ಯಾಸ ಪ್ರತಿಯೊಬ್ಬರೂ ಬೆಳೆಸಿಕೊಂಡು ವಿದ್ಯಾರ್ಥಿ ಜೀವನ ಸಾರ್ಥಕ ಪಡಿಸಿಕೊಳ್ಳಲು ಮುಂದಾಗಬೇಕು. ಪುಸ್ತಕವನ್ನು ಪ್ರಸ್ತುತ ನಿಮ್ಮ ಜೀವನ ಸಂಗಾತಿಯನ್ನಾಗಿಸಿಕೊಂಡರೆ ಖಂಡಿತ ಮಸ್ತಕ ವೃದ್ಧಿ ಯಾಗುತ್ತದೆ ಎಂದರು.
ದೇಶದ ಸುಭದ್ರ ಆಡಳಿತದ ಪಾಲುದಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ತೋರಿದ ಭಾವ ನಿಜಕ್ಕೂ ಆದರ್ಶನೀಯ,ಅನುಕರಣೀಯ. ಅವರು ಗೈದ ಶಿಕ್ಷಕ ವೃತ್ತಿ ಹಾಗು ದೇಶ ಸೇವೆ ಅನನ್ಯ. ರಾಧಾಕೃಷ್ಣನ್ ರ ತತ್ವಾದರ್ಶ ಗುಣಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದರು.
ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಮಾತನಾಡಿ, ಗುರು ವಿಲ್ಲದೇ ಗುರಿ ತಲುಪಲು ಅಸಾಧ್ಯ. ಮಕ್ಕಳ ಸಾಧನೆ ಹಿಂದೆ ಗುರುಗಳ ಅವಿರತ ಶ್ರಮ ಹುದಗಿದೆ.ಅದಕ್ಕೆ ಬೆಲೆ ಕಟ್ಟಲಾಗದು ಎಂದರು.

ಸ್ವಾರ್ಥ ಮನಸ್ಥಿತಿ ಇಲ್ಲದೆ ವಿದ್ಯಾಧಾನ ಮಾಡುವ ಗುರುಗಳು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹೇಳಬಲ್ಲರು. ಓದುವ ಪ್ರವೃತ್ತಿಯಿಂದ ಬದುಕಿನಲ್ಲಿ ಏನಾದರೂ ಸಾಧಿಸಬಹುದು ಎಂಬ ಅರಿವು ಮಕ್ಕಳಲ್ಲಿ ಮೂಡಿಬರಬೇಕು ಎಂದರು.
ಆಂಗ್ಲ ಶಿಕ್ಷಕ ರಾಜಕುಮಾರ ರಾಠೋಡ ಮಾತನಾಡಿ, ಮಕ್ಕಳಲ್ಲಿರುವ ಚೇತನಾ ಶಕ್ತಿ ಜಾಗೃತಗೊಳಿಸಿ ಪ್ರೇರಿಪಿಸಬೇಕಾಗಿರುವುದು ಇಂದು ಅತ್ಯಗತ್ಯ. ಆಧುನಿಕತೆಯ ದಿನದಲ್ಲಿ ಕಾಟಾಚಾರದ ಅಧ್ಯಯನ ಸಲ್ಲದು. ಮಕ್ಕಳು ಸ್ವಪ್ರೇರಣೆಯಿಂದ ಭದ್ರ ಭವಿಷ್ಯ ಕಂಡುಕೊಳ್ಳಲು ಮುಂದಾಗಬೇಕು.ಆ ನಿಟ್ಟಿನಲ್ಲಿ ಧೃಡ ಸಂಕಲ್ಪ ಗೈಯಬೇಕು. ಕ್ರಿಯಾಶೀಲತೆ,ವೈಚಾರಿಕ ಗುಣಗಳಿಂದ ಇವೆಲ್ಲವೂ ಸಾಧ್ಯ ಎಂದರು.
ಸಸಿಗೆ ನೀರುಣಿಸಿ ಕೇಕ್ ಕತ್ತರಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಶಿಕ್ಷಕರ ದಿನೋತ್ಸವ ನಿಮಿತ್ಯ ಮಕ್ಕಳಿಗೆ ಭಾಷಣ ಸ್ಪಧೆ೯ ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಾದ ಕಮಲಾ ಮಾಚಕನೂರ ಪ್ರಥಮ, ಸೌಮ್ಯ ನಲವಡೆ ದ್ವೀತಿಯ, ಸಂಗೀತಾ ಸಾರವಾಡ ತೃತೀಯ ಸ್ಥಾನ ಪಡೆದರು.ಸ್ಪಧೆ೯ಯಲ್ಲಿ ಭಾಗವಹಿಸಿದ ಮಕ್ಕಳಿಗೆಲ್ಲ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಜಿ.ಆರ್.ಜಾಧವ,ಶಾಂತೂ ತಡಸಿ,ಗುರುಮಾತೆಯರಾದ ಅನಿತಾ ರಾಠೋಡ, ಪಲ್ಲವಿ ಸಜ್ಜನ, ಕವಿತಾ ಮಠದ, ಅಡುಗೆ ಮಾತೆಯರಾದ ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ, ಗೋಪಾಲ ಬಸಪ್ಪ ವಡ್ಡರ ಇತರರಿದ್ದರು. ಮಕ್ಕಳು ಗುರು ಕಾಣಿಕೆ ನೀಡಿ ಖುಷಿ ಪಟ್ಟರು. ಆರಂಭದಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಶಾಲಾ ಪ್ರಧಾನಿ ಸೌಜನ್ಯ ಬ್ಯಾಹಟ್ಟಿ ಸ್ವಾಗತಿಸಿದರು. ಅಕ್ಷತಾ ಅಂಗಡಿ ನಿರೂಪಿಸಿದರು.ವಿಜಯಲಕ್ಷ್ಮಿ ಪಾಟೀಲ ವಂದಿಸಿದರು. ಮಕ್ಕಳೇ ಎಲ್ಲ ಕಾರ್ಯಕ್ರಮ ನಡೆಯಿಸಿಕೊಟ್ಟಿದ್ದು ವಿಶೇಷವಾಗಿತ್ತು.