ನಿಡಗುಂದಿ: ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಗ್ರಾಮೀಣ ಕ್ರೀಡಾಕೂಟ ಸಹಕಾರಿ ಆಗಿದೆ ಎಂದು ಪಿಡಿಓ ಮಹಾಂತೇಶ ಹೊಸಗೌಡರ ಹೇಳಿದರು.
ತಾಲ್ಲೂಕಿನ ಬಳಬಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲ್ಲೂಕು ಪಂಚಾಯ್ತಿ ನಿಡಗುಂದಿ ಹಾಗೂ ಗ್ರಾಮ ಪಂಚಾಯ್ತಿ ಬಳಬಟ್ಟಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ದೇಶಿಯ ಕ್ರೀಡೆಗಳಿಗೆ ಉತ್ತೇಜನ ನೀಡಲು ಗ್ರಾಮ ಪಂಚಾಯ್ತಿ ಮಟ್ಟದಿಂದ ರಾಜ್ಯಮಟ್ಟದವರೆಗೂ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ದೇಸಿ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಕೊಕ್ಕೊ ಮತ್ತು ಎತ್ತಿನಬಂಡಿ ಸ್ಪರ್ಧೆಗೆ ಆಧ್ಯತೆ ನೀಡಲಾಗಿದೆ ಎಂದು ಹೇಳಿದರು.
ಗ್ರಾಮದ ಮುಖಂಡರಾದ ನಿಂಗಪ್ಪ ಕಲಾದಗಿ ಮಾತನಾಡಿ, ಸ್ಪರ್ಧೆಗಳಲ್ಲಿ ಸೋಲು-ಗೆಲವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಕ್ರೀಡಾ ಮನೋಭಾವದಿಂದ ಭಾಗವಹಿಸುವ ಮೂಲಕ ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸುವಂತೆ ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ್ರಾ ಕಲಾದಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಸವರಾಜ್ ಬೋಳಿ, ಮಾನಪ್ಪ ಹುಗ್ಗಿ, ಡಿಇಒ ಸಂಗಮೇಶ ಹಿರೇಮಠ, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.