ನಿಡಗುಂದಿ: ಪಟ್ಟಣದ ಹೊರವಲಯದ ಕಮದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಯಿಪಲ್ಯೆ ಹಾಗೂ ಧಾನ್ಯಗಳಲ್ಲಿ ಪೋಷಣೆಯ ಜಾಗೃತಿ ಮೂಡಿಸುವ ಕಲಾಕೃತಿಗಳ ಪ್ರದರ್ಶನ ಶುಕ್ರವಾರ ಜರುಗಿತು.
ಪೋಷಣಾ ಅಭಿಯಾನ ಜಾಗೃತಿ ಅಂಗವಾಗಿ ವಿದ್ಯಾರ್ಥಿಗಳ ಪಾಲಕರಿಗೆ. ಗ್ರಾಮಸ್ಥರಿಗೆ ಪೋಷಣೆಗಳ ಮಹತ್ವ ಸಾರುವ ಹಾಗೂ ಸುಲಭವಾಗಿ ಯಾವ ಆಹಾರದಲ್ಲಿ ಯಾವ ಜೀವಸತ್ವ, ಅದರಿಂದಾಗುವ ಪ್ರಯೋಜನವನ್ನು ವಿವರಿಸುವ ಉದ್ದೇಶದಿಂದ ವಿಜ್ಞಾನ ಶಿಕ್ಷಕ ಮುರಗೇಂದ್ರ ಯಳಮೇಲಿ ಮಾರ್ಗದರ್ಶನದಲ್ಲಿ ವಿವಿಧ ವಿದ್ಯಾರ್ಥಿಗಳು ರಚಿಸಿ ಇಡೀ ದಿನ ಪ್ರದರ್ಶಿದರು.

ಗ್ರಾಮದ ಜನರು ಬಂದು ತರಕಾರಿಗಳಲ್ಲಿ ಅರಳಿದ ವಿವಿಧ ರಚನೆಗಳನ್ನು ವೀಕ್ಷಿಸುವುದರ ಜತೆ ಪೋಷಣೆಯ ಮಹತ್ವವನ್ನು ತಿಳಿದರು.

ಎಲ್ಲಾ ರೀತಿಯ ತರಕಾರಿ, ಸಿರಿಧಾನ್ಯಗಳು, ನಟ್ಸ್, ಗೋಡಂಬಿ, ಒಣದ್ರಾಕ್ಷಿ, ಹಣ್ಣುಗಳು, ಹಾಲು, ಮೊಸರು, ತುಪ್ಪ, ಬೆಣ್ಣೆ, ವಿವಿಧ ರೀತಿಯ ಪುಷ್ಪಗಳು ಸೇರಿ ನಾನಾ ಸಾಮಗ್ರಿಗಳನ್ನು ಬಳಸಿ ಪೋಷಣಾ ಕಲಾಕೃತಿಗಳನ್ನು ಮಾಡಲಾಗಿತ್ತು.
ಮಣಗೂರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಆರ್.ಜಿ. ಬುಲಾತಿ ಮಾತನಾಡಿ, ಹಳ್ಳಿಗಳಲ್ಲಿ ಕಾಯಿಪಲ್ಯೆಗಳ ಬಳಕೆ ಕಡಿಮೆ, ಕಾಳು ಕಡಿಗಳ ಬಳಕೆ ಹೆಚ್ಚು, ಹೀಗಾಗಿ ವಾರದ ಸಂತೆಯನ್ನು ಹಳ್ಳಿಗಳಲ್ಲಿ ಏರ್ಪಡಿಸುವುದರಿಂದ ಕಾಯಿಪಲ್ಯೆಗಳ ಲಭ್ಯತೆ ಹೆಚ್ಚಾಗುತ್ತದೆ ಎಂದರು.

ಮುಖ್ಯ ಶಿಕ್ಷಕ ಬಿ.ಬಿ. ಉಣ್ಣಿಭಾವಿ, ಸಿಆರ್ ಪಿ ಭಾಷಾಸಾಬ್ ಮನಗೂಳಿ, ಆರ್.ಜಿ. ಬುಲಾತಿ, ಎಂ.ಎಸ್. ಯಳಮೇಲಿ, ಬಿ.ಆರ್. ಪಾಟೀಲ, ಡಿ.ಕೆ. ಪಾಟೀಲ, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ಸುನಂದಾ ಬಡಿಗೇರ, ಎಲ್.ಪಿ. ಬಿದ್ನಾಳ, ಭುವನೇಶ್ವರಿ ಮಠ ಇದ್ದರು.
ವಿವಿಧ ಜೀವಸತ್ವಗಳು ಹಾಗೂ ಸ್ವಚ್ಛತೆಯ ಮಹತ್ವ ಸಾರುವ ಐದು ಕಿರು ನಾಟಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಸಿದ್ದು ವಿಶೇಷವಾಗಿತ್ತು.