ಆಲಮಟ್ಟಿ : 1 ರಿಂದ 10 ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿರುವ ಕ್ಷೀರ ಭಾಗ್ಯದ ಮಾದರಿಯಲ್ಲೇ ಎಲ್ಲ ಮಕ್ಕಳಿಗೂ ಮೊಟ್ಟೆ ಭಾಗ್ಯ ವಿಸ್ತರಿಸಬೇಕು ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರಕಾರಕ್ಕೆ ಆಗ್ರಹಿಸಿದೆ.

ಈ ಕುರಿತು ಆಲಮಟ್ಟಿಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ, ಈಗಾಗಲೇ ಸರಕಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ವಾರದ ಮೂರು ದಿನಗಳು ಮಾತ್ರ ಮೊಟ್ಟೆ ನೀಡುತ್ತಿದೆ. ಇದು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಬಹು ಉಪಯುಕ್ತ ಯೋಜನೆಯಾಗಿದೆ ಎಂದಿದ್ದಾರೆ.

ಇಂಥ ಮಹತ್ವಾಕಾಂಕ್ಷೆ ಉಪಯುಕ್ತ ಪೌಷ್ಟಿಕಾಹಾರ ಯೋಜನೆ ಕೆಲವೇ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸುವದು ಅಷ್ಟೊಂದು ಸಮಂಜಸವಲ್ಲ. ಇದನ್ನು ಕ್ಷೀರ ಭಾಗ್ಯದ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಯ 1 ರಿಂದ 10 ನೇ ತರಗತಿಯ ಮಕ್ಕಳಿಗೆ ವಾರದ 5 ದಿನಗಳು ನೀಡಬೇಕು. ಆ ದಿಸೆಯಲ್ಲಿ ಮೊಟ್ಟೆ ಯೋಜನೆ ವಿಸ್ತರಿಸಬೇಕು. ಎಲ್ಲ ಮಕ್ಕಳನ್ನು ಸಮಾನವಾಗಿ ಕಾಣುವವಂತಾಗಬೇಕು. ರಾಜ್ಯದ ಹತ್ತನೇ ತರಗತಿಯೊಳಗಿನ ಎಲ್ಲ ಮಕ್ಕಳಿಗೆ ಮೊಟ್ಟೆ ಯೋಜನೆ ದೊರಕಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಬರುವ ಬಜೆಟ್ ಅಧಿವೇಶನದಲ್ಲಿ ಸರ್ವ ಮಕ್ಕಳಿಗೆ ಮೊಟ್ಟೆ ಭಾಗ್ಯ ಲಭಿಸುವಂತೆ ಘೋಷಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಸರಕಾರಕ್ಕೆ ಆಗ್ರಹಿಸಿದ್ದಾರೆ.