ನಿಂಗಪ್ಪ ಹಮ್ಮಿಗಿ
ಶಿರಹಟ್ಟಿ: ಆಡಳಿತ ಯಂತ್ರ ಕಾನೂನಿನ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು. ಹಾಗಂತ ನಂಬಿಕೆ ಜನಸಾಮಾನ್ಯರಲ್ಲೂ ಇದೆ. ಆದರೆ ಶಿರಹಟ್ಟಿ ಆಡಳಿತ ಯಂತ್ರದ ಮೊಂಡುತನ ನೋಡಿದರೆ ಎಂಥವರಿಗೆ ಬೇಸರ ತರಿಸುತ್ತದೆ. ಶಿರಹಟ್ಟಿ ಇದು ತಾಲೂಕು ಕೇಂದ್ರವೋ ಅಥವಾ ಜಿಲ್ಲಾ ಕೇಂದ್ರವೋ ಎನ್ನುವ ಅನುಮಾನ ಮೂಡುವುದಂತೂ ಸತ್ಯ.

ಇದಕ್ಕೆ ಕಾರಣ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾಧಿಕಾರಿಯೇ ಬಾಸ್. ಆದರೆ ಶಿರಹಟ್ಟಿ ತಹಶೀಲ್ದಾರರಿಗೆ ಮಾತ್ರ ಬಾಸ್ ಯಾರು ಎನ್ನುವುದು ಕೂಡ ಗೊತ್ತಿದ್ದಂತೆ ಕಾಣುತ್ತಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಈಗಾಗಲೇ ಶಿರಹಟ್ಟಿ ಪಟ್ಟಣದಲ್ಲಿರುವ ಕಟ್ಟಿಗೆ ಅಡ್ಡೆಗಳ ಬಗ್ಗೆ ಕ್ರಮಕ್ಕೆ ಕಳೆದ ಅಕ್ಟೋಬರ್ ತಿಂಗಳಲ್ಲಿಯೇ ಅಂದಿನ ಡಿಸಿ ಆದೇಶಿಸಿದ್ದರು. ಆದರೆ ತಹಶೀಲ್ದಾರ ಮಾತ್ರ ಈ ಬಗ್ಗೆ ಕ್ಯಾರೇ ಎಂದಿಲ್ಲ. ಇಲ್ಲಿನ ಕಟ್ಟಿಗೆ ಅಡ್ಡೆಗಳ ಬಗೆಗೆ ಉತ್ತರಪ್ರಭ ಸರಣಿ ವರದಿ ಪ್ರಕಟಿಸಿತು. ನಿಜಕ್ಕೂ ಈ ಬಗ್ಗೆ ಜನಸಾಮಾನ್ಯರಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಇದು ಉತ್ತರಪ್ರಭದ ಜನಪರ ಧೋರಣೆ ಹಾಗು ಕಾಳಜಿ ಕೂಡ ಆಗಿದೆ. ಆದರೆ ಈ ಬಗೆಗಿನ ಕಾಳಜಿ ಆಡಳಿತ ಯಂತ್ರಕ್ಕೂ ಇರಬೇಕಲ್ಲವೇ? ಆಡಳಿತ ಯಂತ್ರ ನಿಷ್ಕಾಳಜಿ ತೋರಿದರೆ ಹೇಗೆ? ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ? ಈ ಎಲ್ಲ ಪ್ರಶ್ನೆಗಳು ಶಿರಹಟ್ಟಿ ತಹಶೀಲ್ದಾರ ಹಾಗು ಆಡಳಿತ ಯಂತ್ರದ ಬಗೆಗೆ ಜನರಾಡುತ್ತಿರುವ ಮಾತುಗಳು.

ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಟ್ಟಿಗೆ ಅಡ್ಡೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಉತ್ತರಪ್ರಭ ಬಿತ್ತರಿಸುತ್ತಲೆ ಇತ್ತು. ಆದರೆ ಈ ಕುರಿತು ಕ್ರಮ ಕೈಗೊಳ್ಳದ ಅಧಿಕಾರಿಗಳು ಇವರನ್ ಬಿಟ್ ಅವರು ಯಾರು? ಎಂಬಂತೆ ಒಬ್ಬರ ಮೇಲೊಬ್ಬರು ಹಾಕುತ್ತಲೇ ಇದ್ದಾರೆ. ಇದರಿಂದ ಗಂಡ ಹೆಂಡತಿ ಮದ್ಯೆ ಕೂಸು ಬಡವಾಯ್ತು ಅನ್ನೊ ಹಾಗೆ ಆಗಿದೆ. ಆದರೆ ಅಧಿಕಾರಿಗಳಿಗೆ ಮಾತ್ರ ಕೊರೊನಾ ನೆಪ ಆಯ್ತು, ಚುನಾವಣೆಯ ನೆಪವೂ ಆಯ್ತು. ಈಗ ಮುಂದೆ ಯಾವ ನೆಪವಿದೆಯೋ ಕಾಣೆ. ಈ ವಿಚಾರವಾಗಿ ಅಧಿಕಾರಿಗಳು ಯಾವುದೆ ಕ್ರಮಕ್ಕೆ ಮುಂದಾಗದೆ ಇರುವುದು ಹತ್ತು ಹಲವು ಸಂಶಯಕ್ಕೆ ಕಾರಣವಾಗಿದೆ.


2019 ರಲ್ಲಿಯೇ ಜಿಲ್ಲಾಧಿಕಾರಿಗಳು ನೀಡಿದ ಆದೇಶ

ಕ್ರಮಕ್ಕೆ ಕೊರೊನಾ ನೆಪ
2020 ಅಕ್ಟೋಬರ್ ತಿಂಗಳಲ್ಲಿಯೇ ಈ ಬಗ್ಗೆ ಅಂದಿನ ಜಿಲ್ಲಾಧಿಕಾರಿಗಳು ಪರವಾನಿಗೆ ಇಲ್ಲದ ಕಟ್ಟಿಗೆ ಅಡ್ಡೆಗಳನ್ನು ಬಂದ್ ಮಾಡುವ ಬಗ್ಗೆ ಆದೇಶಿಸಿದ್ದರು. ಆದರೆ ತಹಶೀಲ್ದಾರರ ಮೊಂಡುತನ ಪರವಾನಿಗೆ ಇಲ್ಲದಿದ್ದರೂ ಅಡ್ಡದಾರಿಯಿಂದ ಅಡ್ಡೆಗಳ ಮೂಲಕ ಕಮಾಯಿ ಮಾಡಿಕೊಳ್ಳುತ್ತಿರುವವರ ರಕ್ಷಣೆಗೆ ನಿಂತಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಈ ಹಿಂದೆಯೇ ಈ ಬಗ್ಗೆ ಉತ್ತರಪ್ರಭ ಸರಣಿ ವರದಿ ಪ್ರಕಟಿಸಿದ ಬೆನ್ನಲ್ಲೆ ಕೊಂಚ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಅಕ್ರಮವಾಗಿ ನಡೆಯುತ್ತಿರುವ ಕಟ್ಟಿಗೆ ಅಡ್ಡೆಗಳಿಗೆ ಭೇಟಿ ನೀಡಿ ಪರವಾನಿಗೆ ಪಡೆದ ಎಲ್ಲ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದ್ದರು. ಆದರೆ ಕೊರೊನಾ ನೆಪಹೇಳಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವುದನ್ನು ಮುಂದೆ ಹಾಕುತ್ತಲೆ ಬರುತ್ತಿದ್ದಾರೆ. ಪಾಪ ಅವರಿಗೆ ಕೆಲಸದ ಒತ್ತಡವಿರಬಹುದು. ಆದರೆ ಇಲ್ಲಿ ಸರ್ಕಾರದ ಬೊಕ್ಕಸಕ್ಕೆ ಪಂಗನಾಮ ಬೀಳುತ್ತಿರುವುದರತ್ತಲೂ ಕೊಂಚ ಚಿಂತಿಸಬೇಕಲ್ಲವೇ? ಒಂದು ಅರ್ಥದಲ್ಲಿ ಹಗಲು ದರೋಡೆ ನಡೆದಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶ ಮಾಡಿದಾಗಲೂ ಇಲ್ಲಿನ ಕಟ್ಟಿಗೆ ಅಡ್ಡೆಗಳ ಮೇಲೆ ಅಧಿಕಾರಿಗಳು ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅಡ್ಡೆಗಳ ಮಾಲಿಕರು ಎಷ್ಟು ಪ್ರಭಾವಿಗಳಾಗಿರಬಹುದು? ಎಂಬ ಸಂಶಯ ಒಂದೆಡೆ ಮೂಡಿದೆ. ಇನ್ನು ಮತ್ತೊಂದೆಡೆ ಅಧಿಕಾರಿಗಳು ಮೌನವಹಿಸಿದ್ದು ಕೂಡ ಅನುಮಾನಕ್ಕೀಡು ಮಾಡಿದೆ ಎಂಬುದು ಸಾರ್ವಜನಿಕರ ಮಾತು.

ತಹಶೀಲ್ದಾರ ಅಂಗಳಕ್ಕೆ ಚಂಡು ಎಸೆದ ಮುಖ್ಯಾಧಿಕಾರಿ
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೆ ಅಕ್ರಮವಾಗಿ ನಡೆಯುತ್ತಿರುವ ಕಟ್ಟಿಗೆ ಅಡ್ಡೆಗಳ ಮಾಹಿತಿಯನ್ನು ಪಡೆದ ಉತ್ತರಪ್ರಭ ಪಟ್ಟಣದ ಮಧ್ಯದಲ್ಲಿಯೇ ಕಟ್ಟಿಗೆ ಅಡ್ಡೆಗಳು ರಾಜಾರೋಷವಾಗಿ‌ ನಡೆಯುತ್ತಿದ್ದರೂ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿತ್ತು. ಇದಕ್ಕೆ ಉತ್ತರ ನೀಡಿದ ಮುಖ್ಯಾಧಿಕಾರಿ ಈ ಕುರಿತು ತಾಲೂಕಾ ದಂಡಾಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳವಂತೆ ಹೇಳಲಾಗಿದೆ. ಅಲ್ಲದೆ ಅಕ್ರಮವಾಗಿ ನಡೆಯುತ್ತಿರುವ ಕಟ್ಟಿಗೆ ಅಡ್ಡೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಲಿಖಿತರೂಪದಲ್ಲಿ ನೋಟಿಸ್‌ ನೀಡಲಾಗಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಲಿಗೆ ಸೂಚಿಸುವೆ ಮರಗಳನ್ನು ಕಡಿದು ಸಾಗಿಸಬೇಕಾದರೆ ಅರಣ್ಯ ಇಲಾಖೆ ಅನುಮತಿ ಕಡ್ಡಾಯವಾಗಿದೆ. ಈ ಬಗ್ಗೆ ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಕ್ರಮಕ್ಕೆ ಸೂಚಿಸುತ್ತೇನೆ. ಸೂರ್ಯಸೇನ, ಡಿಎಫ್ಓ

ತಹಶೀಲ್ದಾರ ಹೇಳಿದ್ರು ಅಂತ ವಿದ್ಯುತ್ ಸಂಪರ್ಕ ಕೊಟ್ರಂತೆ!
ಈ ಕುರಿತ ವಿಷಯವನ್ನು ಹಿಂಬಾಲಿಸಿದ ಉತ್ತರಪ್ರಭ ಹೆಸ್ಕಾಂ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದಾಗ, ಪಟ್ಟಣ ಪಂಚಾಯತಿಯಿಂದ ಬಂದ ಮಾಹಿತಿ ಪ್ರಕಾರ ಕಟ್ಟಿಗೆ ಅಡ್ಡೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೆ ಮೇಲಾಧಿಕಾರಿಗಳು ಹಾಗೂ ತಹಶೀಲ್ದಾರ ಮೌಖಿಕ ಆದೇಶದ ಮೇರೆಗೆ ಪುನಃ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು ಎಂಬ ಉತ್ತರ ದೊರೆಯಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವೆ

ಶಿರಹಟ್ಟಿಯ ಆಡಳಿತ ಯಂತ್ರದ ವರ್ತನೆ ನೋಡಿದರೆ ನಿಜಕ್ಕೂ ಬೇಸರ ತರಿಸುತ್ತಿದೆ. ಇಷ್ಟೊಂದು ನಿಷ್ಕಾಳಜಿ ತೋರುವ ಮೂಲಕ ಉಳ್ಳವರ ಪರ ಕಾರ್ಯ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇನ್ನು ಮುಖ್ಯವಾಗಿ ಈ ವಿಚಾರದಲ್ಲಿ ಎಲ್ಲ ಪಕ್ಷದ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ. ಮಾಜಿ-ಮತ್ತು ಹಾಲಿಗಳ ಮೀಲಾಫಿಯಾಗಿದ್ದಾರೆ. ಈ ವಿಚಾರ ಕೇವಲ ಶಿರಹಟ್ಟಿಗೆ ಸೀಮಿತವಿಲ್ಲ ಜಿಲ್ಲೆಯ ಬಹುತೇಕ ಕಡೆ ಇದೆ ರೀತಿ ಇದ್ದು, ಮುಂದೆ ತಮ್ಮ ಬುಡಕ್ಕೂ ಬರಬಹುದು ಎಂಬ ಕಾರಣಕ್ಕೆ ಪಕ್ಷಬೇಧ ಮರೆತು ಆದಷ್ಟು ಈ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಈ ಬಗ್ಗೆ ನಾನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುತ್ತಿದ್ದೇನೆ. ಪಿ.ಟಿ.ನಿಂಗಪ್ಪ, ಸಾಮಾಜಿಕ ಕಾರ್ಯಕರ್ತರು ‌‌‌‌‌

ದೂರವಾಣಿಗೂ ದೂರಾದ ಅರಣ್ಯಾಧಿಕಾರಿಗಳು
ಹಾಡು ಹಗಲು ಮರ ಕಡಿದು ಕಟ್ಟಿಗೆ ಅಡ್ಡೆಗಳಿಗೆ ಸಾಗಿಸುತ್ತಿರುವುದರ ಬಗ್ಗೆ ಮಾಹಿತಿ ಕೇಳಲು ಹೊರಟ ಉತ್ತರಪ್ರಭಕ್ಕೆ ತಾಲೂಕು ಅರಣ್ಯಾಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ. ನಿತ್ಯ ಕಚೇರಿ ಬಳಿಯ ಮುಖ್ಯ ರಸ್ತೆಗೆ ಹೊಂದಿಕೊಂಡ ಲೋಡ್ ಗಟ್ಟಲೇ ಕಟ್ಟಿಗೆಗಳನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುತ್ತಿದ್ದರೂ ಇದನ್ನು ನೋಡಿಯೂ ನೋಡದ ರೀತಿಯಲ್ಲಿ ಅಧಿಕಾರಿಗಳು ಸುಮ್ಮನಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಕಟ್ಟಿಗೆ ಸಾಗಾಟಕ್ಕೆ ಇವರಿಗೆ ಅನುಮತಿ ನೀಡಿದವರು ಯಾರು? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಈ ಎಲ್ಲಾ ಇಲಾಖಾ ಅಧಿಕಾರಿಗಳ ನಡುವೆ ಕಟ್ಟಿಗೆ ಅಡ್ಡೆಗಳ ದೂಳಿನಲ್ಲಿ ಜೀವನ ಸಾಗಿಸುತ್ತಿರುವ ಸಾರ್ವಜನಿಕರ ದುಸ್ಥಿತಿ ದೇವರಿಗೆ ಪ್ರೀತಿ ಎಂಬಂತೆ ಕಾಣುತ್ತಿದೆ. ಈ ಬಗ್ಗೆ ನಿರ್ಧಾಕ್ಷ್ಯಿಣ್ಯ ಕ್ರಮ ಕೈಗೊಂಡಾಗ ಮಾತ್ರ ತಹಶೀಲ್ದಾರ ಕಾರ್ಯವೈಖರಿ ಬಗ್ಗೆ ಸ್ಥಳೀಯರಲ್ಲಿ ನಂಬಿಕೆ ಬರಲು ಸಾಧ್ಯ.


Leave a Reply

Your email address will not be published. Required fields are marked *

You May Also Like

ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊಡುವ ಡ್ಯಾನ್ಸ್ ಮಾಡಿದ ಹರ್ಷಿಕಾ-ಭುವನ್

ಬೆಂಗಳೂರು: ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದರೆ ಮಾಡಿದ ಸಹಾಯಕ್ಕೆ ಹೆಚ್ಚು ಮಹತ್ವ ಬರುತ್ತದೆ. ಜನರ ಸಂಕಷ್ಟ ಅರಿತ ಸ್ಯಾಂಡಲ್ ವುಡ್ ಸ್ಟಾರ್ ಗಳು ಅವರ ಕೈಲಾದಷ್ಟು ಸೇವೆಗೆ ಮುಂದಾಗಿದ್ದಾರೆ.

ಗಜೇಂದ್ರಗಡ ಮಾರುಕಟ್ಟೆಯಲ್ಲಿ ಜಮಜಂಗುಳಿ: ಕೋವಿಡ್ ಗೆ ಕ್ಯಾರೆ ಇಲ್ಲ..!

ಕೋವಿಡ್ 2ನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಕೋಟೆ ನಾಡಿನಲ್ಲಿ ಯಾವುದೇ ಮುಂಜಾಗ್ರತಾ ತೆಗೆದುಕೊಳ್ಳದೇ ಸಾರ್ವಜನಿಕರು ಗುಂಪು ಗುಂಪಾಗಿ ಮೈಮರೆತು ಓಡಾಡುತ್ತಿರುವ ದೃಶ್ಯ ಮಂಗಳವಾರ ಕಂಡು ಬಂದಿತು.

ನಗರ ಸಭೆ ಚುನಾವಣೆ: ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೆಟಿ

ಗದಗ ಬೇಟಗೇರಿ:ನಗರ ಸಭೆ ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮತ ಎಣಿಕೆ ಕಾರ್ಯವನ್ನು…