ಉತ್ತರಪ್ರಭ ಸುದ್ದಿ
ನಿಡಗುಂದಿ: ಪಟ್ಟಣದ ಹೊರವಲಯ ಮಣಗೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ, ಪೋಷಣಾ ಅಭಿಯಾನ ಜರುಗಿತು.ಪಟ್ಟಣ ಪಂಚಾಯ್ತಿ ಸದಸ್ಯ ಬಸವರಾಜ ವಂದಾಲ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳೆಲ್ಲರೂ ದೈಹಿಕವಾಗಿ ಸದೃಢರಾದಾಗ ಮಾತ್ರ ಬೌದ್ಧಿಕರಾಗಿ ಸದೃಢರಾಗಲು ಸಾಧ್ಯ, ತರಕಾರಿ, ಸೊಪ್ಪು, ವಿಟಮಿನ್ ಯುಕ್ತ ಆಹಾರ, ತಾಜಾ ಪದಾರ್ಥಗಳನ್ನು ಸ್ವಚ್ಛಗೊಳಿಸಿ ಸೇವಿಸಬೇಕು, ಪಾಲಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.


ನಿಡಗುಂದಿ ವಲಯದ ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ ಮಾತನಾಡಿ, ಅಪೌಷ್ಟಿಕತೆ ದೂರವಾಗಿಸಲು, ಪೌಷ್ಟಿಕತೆಯ ಮಹತ್ವ ಸಾರಲು ಈ ಅಭಿಯಾನ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಪಾಲಕರು, ಮಕ್ಕಳು ಪೌಷ್ಟಿಕ ಆಹಾರದ ಮಹತ್ವ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ಪೋಷಣೆಯ ನಾನಾ ಪದಾರ್ಥಗಳನ್ನು ಚಿತ್ರಗಳ ಮೂಲಕ ಚಿತ್ರಿಸಿ ಪ್ರದರ್ಶಿಸಿದರು. ಪೋಷಣೆಯ ಕೊರತೆಯಿಂದ ಬರುವ ರೋಗಗಳ ಕುರಿತು ಕಿರು ನಾಟಕ, ವಿವಿಧ ವಿಟಮಿನ್ ಗಳ ಛದ್ಮವೇಷಧಾರಿಗಳು ಗಮನಸೆಳೆದರು.
ಮುಖ್ಯ ಶಿಕ್ಷಕ ಆರ್.ಜಿ. ಬುಲಾತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ವಿಜೇತ ಶಿಕ್ಷಕ ಎಸ್.ಎಂ. ಕಮತಗಿ, ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಿಆರ್ ಪಿ ಭಾಷಾಸಾಬ್ ಮನಗೂಳಿ, ಬಿ.ಬಿ. ಉಣ್ಣಿಭಾವಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ರವೀಂದ್ರ ಮಾಶೆಟ್ಟಿ, ಗಿರೀಶ ಹೂಗಾರ, ಮುತ್ತು ಯಳಮೇಲಿ ಮಾತನಾಡಿದರು. ಸಂಗಮೇಶ ಮಡಿಕೇಶ್ವರ, ಸಿ.ಆರ್. ಬಿರಾದಾರ, ಮಂಜುಳಾ ಜೂಡಿ, ರಾಧಾ ಆರ್. ಬಿ.ಎಚ್. ಗುಡ್ಡದ, ರೇಣುಕಾ ಆರ್.ಟಿ ಇದ್ದರು.