ಗಜೇಂದ್ರಗಡ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಸಾರಿಗೆ ನೌಕರರ ಅನಿರ್ಧಿಷ್ಠಾವಧಿ ಮುಷ್ಕರ ಮೂರನೇ ದಿನಕ್ಕೆ ಮುಂದುವರೆದಿದೆ. ಹೀಗಾಗಿ ಗಜೇಂದ್ರಗಡ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಚಾರ ಇಲ್ಲದೇ, ಬಿಕೋ ಎನ್ನುತ್ತಿತ್ತು.
ಬಹಳಷ್ಟು ವರ್ಷಗಳಿಂದ ಕೇಳುತ್ತಾ ಬಂದಿರುವ ನ್ಯಾಯಯುತ ಬೇಡಿಕೆ ಇಡೇರಿಸುವಲ್ಲಿ ಸರ್ಕಾರ ಮೊಂಡುತನ ಪ್ರದರ್ಶನ ಮಾಡುತ್ತಿದೆ. ಇತ್ತ ಸಾರಿಗೆ ನೌಕರರು ಸಹ ಪಟ್ಟು ಸಡಿಲಿಸದೇ, ಮುಷ್ಕರ ಮುಂದುವರೆಸುತ್ತಿದ್ದಾರೆ. ಅತ್ತ ಸರ್ಕಾರ ಸಹ ಯಾವ ನಿಲುವುಗಳನ್ನು ತಾಳದೇ, ಮೌನಕ್ಕೆ ಶರಣಾಗಿದೆ. ಹೀಗಾಗಿ ಸಾರಿಗೆ ನೌಕರರು ಮೂರನೇ ದಿನವೂ ಮುಷ್ಕರ ಮುಂದುವರೆಸಿದ ಹಿನ್ನಲೆಯಲ್ಲಿ ಗಜೇಂದ್ರಗಡದಲ್ಲಿ ಸಾರಿಗೆ ಸಂಚಾರ ಬಂದ್ ಮಾಡಲಾಗಿತ್ತು.
ಬಸ್ ನಿಲ್ದಾಣದಲ್ಲಿ ಯಾವೊಂದು ವಾಹನಗಳು ಇಲ್ಲದ ಪರಿಣಾಮ ನಿಲ್ದಾಣ ಬಿಕೋ ಎನ್ನುತ್ತಿರುವ ದೃಶ್ಯ ಕಂಡು ಬಂದಿತು. ಸಾರಿಗೆ ನೌಕರರು ಕೈಗೊಂಡಿರುವ ಮುಷ್ಕರದಿಂದಾಗಿ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಪ್ರಯಾಣಿಕರು ಖಾಸಗಿ ವಾಹನಗಳಿಗೆ ಮೊರೆ ಹೋಗಿದ್ದಾರೆ. ಆದರೆ ಖಾಸಗಿ ವಾಹನದವರು ದುಪ್ಪಟ್ಟು ಹಣ ಪಡೆದುಕೊಳ್ಳುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಎರಡು ದಿನಗಳಿಂದ ಗಜೇಂದ್ರಗಡದಲ್ಲಿ ಸಾರಿಗೆ ಸಂಚಾರ ಬಂದ್ ಆಗಿದೆ. ಬೇರೆ ಪ್ರದೇಶಗಳಿಗೆ ತೆರಳಬೇಕಾದ ಪ್ರಯಾಣಿಕರು, ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ಪ್ರಯಾಣ ಮಾಡುತ್ತಿದ್ದಾರೆ. ಖಾಸಗಿ ವಾಹನಗಳಿಗೆ ಇದೀಗ ಶುಕ್ರದೆಸೆ ಬಂದತಾಗಿದೆ. ಆದರೆ ಮನಬಂದಂತೆ ಹಣ ಪಡೆಯುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಗಜೇಂದ್ರಗಡದ ಕುಷ್ಟಗಿ ರಸ್ತೆ, ಗದಗ ರಸ್ತೆ ಮತ್ತು ರೋಣ ರಸ್ತೆ ಬಳಿಯಲ್ಲಿ ನಿಂತಿರುವ ಖಾಸಗಿ ವಾಹನಗಳ ದುಪ್ಪಟ್ಟು ಹಣ ವಸೂಲಾತಿಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮುಂದಾಗಬೇಕು ಎನ್ನುವುದು ಪ್ರಯಾಣಿಕರ ಒತ್ತಾಸೆಯಾಗಿದೆ.