ಪ್ರಸ್ತುತದಲ್ಲಿ ಜೀವಿಸುತ್ತಿರುವ ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಅನುಭವಿಸುತ್ತಿರುವ ಅದೃಷ್ಟವಂತರು. ಆ ಕಾರಣದಿಂದಲೆ ಗೂಗಲ್ ಗೆ ಹೋಗಿ ‘ದೇಶಾಂಶ ಹುಡುಗಿ’ ಎಂದು ಟೈಪ್ ಮಾಡಿದರೆ ಸಾಕು, ಅನೇಕ ವೆಬ್ ಸೈಟ್ ಗಳು ಓಪನ್ ಆಗುತ್ತವೆ. ಕಣಜ ಡಾಟ್ ಇನ್, ನಾನುಗೌರಿ ಡಾಟ್ ಕಾಮ್, ಬುಕ್ ಬ್ರಹ್ಮ ಡಾಟ್ ಕಾಮ್, ಯಾವುದೇ ಇರಬಹುದು, ಎಲ್ಲದರಲ್ಲೂ ಈ ಹಿರಿಯ ಜೀವಿಯ ಸಾಹಿತ್ಯ, ಸಾಧನೆ ಅಪ್ ಲೋಡ್ ಆಗಿದೆ. ಬೆಳೆದು ನಿಂತ ಈ ಪೈರು ನೀಡಿದ ಫಸಲು ಅಪಾರ, ಅನನ್ಯ, ಅದ್ಭುತ.

ಬೀದರಿನ ಬೆರಳೆಣಿಕೆಯಷ್ಟು ಪ್ರಮುಖ ಬರಹಗಾರರ ಸಾಲಿನಲ್ಲಿ ಕಂಡು ಬರುವ ಅಪರೂಪದ ಹೆಸರೆಂದರೆ ದೇಶಾಂಶ ಹುಡಗಿ. ಇಂತಹ ಸೃಜನ ಹಾಗೂ ಸೃಜನೇತರ ಸಾಹಿತ್ಯ ರಚಿಸಿದ ಪ್ರತಿಭಾವಂತ ವ್ಯಕ್ತಿಯೊಂದಿಗೆ ನಾನು ಸಂಪರ್ಕ ಹೊಂದಿದ್ದು, ಸ್ನೇಹ, ಬಾಂಧವ್ಯ ಬೆಳೆದಿದ್ದು ಸುದೈವವೆಂದೇ ಹೇಳಬೇಕು.

ನನ್ನನ್ನು ಮಗಳೆಂದು ಭಾವಿಸುವ ಅನೇಕರಲ್ಲಿ ದೇಶಾಂಶ ಹುಡಗಿಯೂ ಒಬ್ಬರು. ಹತ್ತೊಂಬತ್ತು ನೂರಾ ಎಂಬತ್ತೆಂಟರ ಸಂದರ್ಭ. ದೇಶಾಂಶ ಹುಡಗಿಯವರ ಮಗಳು ಕನ್ಯಾಕುಮಾರಿ ಮತ್ತು ನಾನು ಸಹಪಾಠಿಗಳು. ಅಷ್ಟೇ ಅಲ್ಲ ನಾವಿಬ್ಬರೂ ಒಳ್ಳೆಯ ಸ್ನೇಹಿತರೂ ಹೌದು. ಇಂದಿಗೂ ಆ ಗೆಳೆತನ ಮುಂದುವರಿದಿರುವುದೇ ಸಾಕ್ಷಿ. ಕಾಲೇಜಿನ ಆ ದಿನಗಳಲ್ಲಿ ಇಬ್ಬರಿಗೂ ಸಾಹಿತ್ಯದಲ್ಲಿ ಆಸಕ್ತಿ. ನಮ್ಮ ಮಧ್ಯೆ ಆಗಾಗ ಚರ್ಚೆ ನಡೆದು, ಬರವಣಿಗೆಯಲ್ಲಿ ತೊಡಗುತ್ತಿದ್ದೆವು.

ದೇಶಾಂಶ ಹುಡಗಿಯವರ ಮನೆಗೆ ಕಾಲೇಜು ದಿನಗಳಲ್ಲಿ ಅನೇಕ ಬಾರಿ ಹೋಗುವ ಆವಕಾಶ. ಅವರು ತಮ್ಮ ಡೈರಿಯಲ್ಲಿ ಸಾಹಿತ್ಯ ರಚನೆ ಮಾಡಿ ದಾಖಲಿಸಿಟ್ಟಿದ್ದು ನಮ್ಮನ್ನು ಆಕರ್ಷಿಸುತ್ತಿತ್ತು. ಗೆಳತಿ ಕನ್ಯಾಳೊಂದಿಗೆ ಆ ಪುಟಗಳನ್ನು ತಿರುವಿ ಹಾಕುತ್ತ, ಅದರಲ್ಲಿರುವ ಬರಹಗಳನ್ನು ಕುತೂಹಲದಿಂದ ಓದುತ್ತಿದ್ದೆವು. ಹಳೆಯ ಡೈರಿ, ಇಂಕ್ ಪೆನ್ನಿನಿಂದ ಬರೆದ ಸ್ಪಷ್ಟ ಅಕ್ಷರಗಳು ಇನ್ನೂ ಕಣ್ಣ ಮುಂದೆ ಕಟ್ಟಿದಂತಿವೆ. ಬರಹ ಅವರಿಗೆ ರಕ್ತಗತವಾಗಿ ಹೋಗಿತ್ತು. ಆಗ ಅದರಲ್ಲಿ ಹೆಚ್ಚಾಗಿ ಕವನಗಳೇ ಇದ್ದ ನೆನಪು. ಇತ್ತೀಚಿಗೆ ನಾವು ಟೈಪಿಂಗ್ ರೂಢಿಸಿಕೊಂಡಿರುವುದರಿಂದ ಈಗ ಆ ನೆನಪು ಖುಶಿ ಕೊಡುತ್ತದೆ. ಒಬ್ಬ ಬರಹಗಾರನ ಹಸ್ತಪ್ರತಿ ನೋಡುವ ಸೌಭಾಗ್ಯ ಅದಾಗಿತ್ತೆಂದು ಇಂದು ಪುಳಕವಾಗುತ್ತದೆ.

ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹುಡಗಿಯಲ್ಲಿ, ಆರನೇ ನವೆಂಬರ್ ಹತ್ತೊಂಬತ್ತು ನೂರಾ ಮೂವತ್ತಾರರಂದು ‘ಶಾಂತಪ್ಪ ದೇವರಾಯ’ ಅವರು ಶರಣಪ್ಪ, ಭೀಮಾ ಬಾಯಿಯ ಮಗನಾಗಿ ಜನಿಸಿದರು. ರೈತ ಪರಿವಾರದಲ್ಲಿ ಹುಟ್ಟಿ ಬೆಳೆದ ಅವರಿಗೆ ಒಕ್ಕಲುತನದ ದೇಸಿ ಪರಿಸರ ದೊರೆಯಿತು. ಈ ಹಿನ್ನೆಲೆಯಲ್ಲೇ ವಿಕಾಸಗೊಂಡ ಪಕ್ಕಾ ಜವಾರಿ ಭಾಷೆಯ ಕನ್ನಡಾಭಿಮಾನಿ. ‘ದೇಶಾಂಶ ಹುಡಗಿ’ ಎನ್ನುವ ಕಾವ್ಯನಾಮದಿಂದಲೇ ಅವರು ಚಿರಪರಿಚಿತರು.

ಅವರ ಕನ್ನಡಾಭಿಮಾನಕ್ಕೊಂದು ನಿದರ್ಶನ ನೆನಪಾಗುತ್ತಿದೆ…

ಅವರನ್ನು ಭೇಟಿಯಾದಾಗಲೆಲ್ಲಾ ‘ಅಂಕಲ್’ ಎಂದು ಸಂಬೋಧಿಸಿ ಮಾತಾನಾಡುವ ರೂಢಿ ನನಗೆ. ಅವರಿಗದು ಸಹ್ಯವಾಗುತ್ತಿರಲಿಲ್ಲ. ಅದಕ್ಕವರ ಸಾತ್ವಿಕ ಸಿಟ್ಟು, ಅಭಿಮಾನದ ಪ್ರತಿಕಾರವಿರುತ್ತಿದುದು ಅವರೊಳಗಿನ ಕನ್ನಡ ಪ್ರಜ್ಞೆಗೆ ಸಾಕ್ಷಿ.

‘ಮಗಾ ಕಾವ್ಯಶ್ರೀ ನೀ ಹೇಳೋದೆಲ್ಲಾ ಖರೆ, ಆದುರಾ ಈ ಅಂಕಲ್ ಅಂಬದು ಛಲೋ ಅಲ್ಲ. ‘ಕಾಕಾ’, ‘ಬಾಬಾ’, ‘ಮಾಮ’ ಅಂತ ಬಾಯ್ತುಂಬ ಕರೆಯೋದು ಛಲೊ’ ಎಂದು ನೇರವಾಗಿ ಹೇಳುತ್ತಿದ್ದರು. ಇದನ್ನು ಗಮನಿಸಿದಾಗ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಅವರು ಬಲಿಯಾಗಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ದೇಶಾಂಶ ಹುಡಗಿಯವರ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡ ಪ್ರಜ್ಞೆಯನ್ನು ಗುರುತಿಸಿ ಬರೆಯಬಹುದು. ಗೊಟಗೋಡಿ ಶಿಗ್ಗಾವಿಯ ಜಾನಪದ ವಿಶ್ವವಿದ್ಯಾಲಯದ ನಿಘಂಟು ಸಂಪಾದನೆಯಲ್ಲಿ ಪ್ರಾದೇಶಿಕ ತಜ್ಞೆಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಆಗ ಅದರ ಪೂರ್ವ ಸಭೆ ಕರೆಯಲಾಗಿತ್ತು. ಅಲ್ಲಿ ನನಗೆ ಕೇಳಿದ ಮೊದಲ ಪ್ರಶ್ನೆ, ‘ಬೀದರಿನವರು ಬರೆದ ನಿಘಂಟು ಯಾವುದು?’ ಬೀದರ ಜಿಲ್ಲೆಯ ದೇಶಾಂಶ ಹುಡಗಿ ಮತ್ತು ಅವರು ರಚಿಸಿದ ‘ಬೀದರ ಕನ್ನಡ ಕೋಶ’ ನಿಘಂಟು ಕುರಿತು ಪ್ರಸ್ತಾಪಿಸುವಾಗ ಹೆಮ್ಮೆ ಎನಿಸಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ಅನೇಕ ಬೀದರಿನ ಹಿರಿಯರಿಗೆ ಬಹುಭಾಷೆಯನ್ನು ಕಲಿಯುವ ಸಂದರ್ಭ ತಾನಾಗಿಯೇ ಒದಗಿ ಬಂದಿದೆ. ಅಂದಿನ ನಿಜಾಮರ ಆಡಳಿತದ ಪ್ರಭಾವ, ಭೌಗೋಳಿಕವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ ಸುತ್ತುವರಿದಿರುವುದು, ಇಲ್ಲಿಯ ಕನ್ನಡದ ಮೇಲೆ ಗಾಢ ಪ್ರಭಾವ ಬೀರಿದೆ. ಹಾಗಾಗಿ ದೇಶಾಂಶ ಹುಡಗಿಯವರು ಹಿಂದಿ, ಮರಾಠಿ, ಉರ್ದು, ತೆಲುಗು, ಇಂಗ್ಲಿಷ್ ಭಾಷೆಯಿಂದ ಪ್ರಭಾವಿತರಾದರು. ಕನ್ನಡ ಭಾಷೆಯ ಮೇಲೆ ಆಗಿರುವ ಪ್ರಭಾವವನ್ನು ಗಮನಿಸಿ, ಗುರುತಿಸಿ ದಾಖಲಿಸುವ ಕೆಲಸಕ್ಕೆ ಮುಂದಾದರು. ಅದು ನಿಘಂಟು ರಚಿಸುವಂಥ ಅನನ್ಯ ಕಾರ್ಯ ಮಾಡಿಸಿತು.

ಈ ಕೃತಿಯ ರಚನೆಗೆ ಸುಮಾರು ಹದಿನಾಲ್ಕು ವರ್ಷಗಟ್ಟಲೆ ಶ್ರಮ ವಹಿಸಿ ದುಡಿದಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ಶಬ್ದ ಸಂಗ್ರಹ ಮಾಡಿ, ಅದಕ್ಕೆ ಸೂಕ್ತ ಅರ್ಥ ತಿಳಿಸಿದ್ದಾರೆ. ಒಂದು ಭಾಷೆಯಲ್ಲಿರುವ ಪ್ರಾದೇಶಿಕ ಗೊಂದಲ ದೂರ ಮಾಡಿದ್ದಾರೆ. ಎಲ್ಲಕ್ಕಿಂತ ಮಹತ್ವದ್ದೇನೆಂದರೆ ಬೀದರಿನ ಭಾಷೆ ಬಹಳ ಒರಟು ಎನ್ನುವ ಅಪವಾದವನ್ನು ಹೋಗಲಾಡಿಸಿದವರು ದೇಶಾಂಶ ಹುಡಗಿ. ಇದು ಈ ಭಾಷೆಯ ಸೊಗಡೆಂದು ನಿರೂಪಿಸಿದರು.

ಕನ್ನಡವನ್ನು ಪ್ರೀತಿಸುತ್ತ, ಅನ್ಯ ಭಾಷೆಯನ್ನು ಸ್ವೀಕರಿಸುತ್ತ, ಆಯಾ ಭಾಷೆಯ ಗೌರವವನ್ನು ಅದಕ್ಕೆ ನೀಡುತ್ತ, ಭಾಷಾ ಬಾಂಧವ್ಯ ಬೆಸೆಯುವ ವಿಶಾಲ ಭಾವ ದೇಶಾಂಶ ಹುಡಗಿಯವರಲ್ಲಿದೆ. ಭಾಷಾ ತಜ್ಞರಾಗಿ ನೀಡಿದ ಮಹತ್ವದ ಕೊಡುಗೆ ಎಂದರೆ ‘ಬೀದರ ಕನ್ನಡ ಕೋಶ’ ಎನ್ನುವುದರಲ್ಲಿ ಇನ್ನೊಂದು ಮಾತೇ ಇಲ್ಲ. ದೂರದರ್ಶನದಿಂದ ರಿಲೆ ಆದ ಅವರ ಮಾತುಕತೆಯಲ್ಲಿ ಆಡುಭಾಷೆಯ ಸೊಗಸನ್ನು ಬಹಳ ಚೆನ್ನಾಗಿ ಸೆರೆ ಹಿಡಿಯುತ್ತ, ಅಷ್ಟೇ ಅರ್ಥಪೂರ್ಣವಾಗಿ ವಿವರಿಸಿರುವುದನ್ನು ನಾಡಿನ ಜನತೆ ವೀಕ್ಷಿಸಿದೆ. ದೇಶಾಂಶ ಹುಡಗಿಯವರು ಶರಣರಂತೆ ಬಾಳಿದರು ಎಂದು ಹೇಳಲು ಅಭಿಮಾನವೆನಿಸುತ್ತದೆ. ಅವರು ಕೇವಲ ಕತೆ, ಕವನ, ಜೀವನ ಚರಿತ್ರೆ, ಶಬ್ದ ಕೋಶ, ಮಹಾ ಕಾವ್ಯ ಅಷ್ಟೇ ಬರೆಯಲಿಲ್ಲ. ತಮ್ಮ ಬದುಕನ್ನು ಮತ್ತು ತಮ್ಮೊಂದಿಗೆ ಬದುಕಿದವರನ್ನೂ ಅರಿತು, ಅವರ ಕುರಿತು ಬರೆದದ್ದು ಬಹಳ ವಿಶೇಷ.

ಇಂದಿನ ಕಾಲಮಾನದಲ್ಲಿ ಒಬ್ಬರ ಮೇಲೆ ಇನ್ನೊಬ್ಬರಿಗೆ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ಪಡುವಂಥದ್ದು ಹೊಸದೇನಲ್ಲ. ಆದರೆ ಮನುಷ್ಯ ಸಹಜವಾದ ಈ ಎಲ್ಲಾ ಗುಣಗಳಿಂದ ಹೊರ ಬರಬೇಕಾದರೆ ಅವನೊಳಗಿನ ಮನಸು ಪಕ್ವವಾಗಿರಬೇಕು. ಹಾಗೆ ಪಕ್ವಗೊಂಡ ಮನಸಿನ ಒಡೆಯ ದೇಶಾಂಶ ಹುಡಗಿ. ಅವರು ಸದಾ ತಮ್ಮ ಸಮಕಾಲೀನರನ್ನು ಗಮನಿಸುತ್ತ, ಅವರ ಬೆನ್ನು ತಟ್ಟುತ್ತ ತಾವೂ ಬೆಳೆದವರು. ಅದಕ್ಕೆ ಅವರು ಬರೆದ ‘ನಾ ಕಂಡ ನನ್ನವರು’ ಕೃತಿ ಇಂದಿಗೂ ಸಾರಿ ಸಾರಿ ಹೇಳುತ್ತದೆ. ಈ ಕೃತಿಯಲ್ಲಿ ತಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪರಿಚಯಿಸುತ್ತ, ಅವರಲ್ಲಿರುವ ವಿಶೇಷತೆಯನ್ನು ಹೇಳುತ್ತ, ಅವರವರ ವ್ಯಕ್ತಿತ್ವವನ್ನು ಕಟ್ಟಿ ಕೊಟ್ಟಿದ್ದಾರೆ. ಹನ್ನೆರಡನೇ ಶತಮಾನದ ಶರಣರಂತೆ ತಮ್ಮೊಂದಿಗಿದ್ದ ಹಿರಿಕಿರಿ ಎಲ್ಲರನ್ನೂ ಗೌರವ ಭಾವದಿಂದ ಕಂಡಿರುವುದು ಅವರೊಳಗಿನ ಪರಿಪೂರ್ಣತೆ.

ದೇಶಾಂಶ ಹುಡಗಿಯವರು ತಮ್ಮ ಜೀವನದ ಕಷ್ಟ ಸುಖಗಳ ಮಧ್ಯೆ ಬರಹವನ್ನು ನಿರಂತರ ಕಾಪಾಡಿಕೊಂಡು ಬಂದವರು. ವೈಯಕ್ತಿಕವಾಗಿ ಅನಾರೋಗ್ಯಕ್ಕೆ ಈಡಾದರೂ ತಮ್ಮ ಆತ್ಮ ವಿಶ್ವಾಸದ ಬಲದಿಂದ ಅದನ್ನು ಜೈಸಿ ಹೊರಬಂದ ಗಟ್ಟಿ ಜೀವ. ಬರಹದ ತುಡಿತವೂ ಅವರನ್ನು ಆಂತರಿಕವಾಗಿ ಕಾಪಾಡಿದೆ ಎಂದರೆ ಅತಿಶಯೋಕ್ತಿಯಲ್ಲ. ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಹೆಗ್ಗಳಿಕೆ. ಅನೇಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಪಡೆದ ಅನುಭವ ಅನನ್ಯ.

ಅವರನ್ನು ಹುಡುಕಿಕೊಂಡು ಬಂದ ಅನೇಕ ಪ್ರಶಸ್ತಿ, ಗೌರವಗಳು ಅವರ ಸರಳ, ಸಜ್ಜನಿಕೆಗೆ ಧಕ್ಕೆಯುಂಟು ಮಾಡಲಿಲ್ಲ. ‘ರಾಜ್ಯ ಸಾಹಿತ್ಯ ಅಕಾಡೆಮಿ’ ಪುರಸ್ಕಾರವೂ ಅವರದಾಗಿದ್ದು ಜಿಲ್ಲೆಯ ಹೆಮ್ಮೆಗೆ ಕಾರಣವಾಯಿತು. ‘ಕೆ.ಜಿ.ಕುಂದಣಗಾರ ಗಡಿ ಕನ್ನಡ ಸಾಹಿತ್ಯ ಪ್ರಶಸ್ತಿ’ ನೀಡಿದ ಮೂರು ಲಕ್ಷ ಗೌರವ ಧನ ಹೃದಯವಂತ ಬರಹಗಾರನಿಗೆ ನೆರಳಾದ ಸಾರ್ಥಕ ಭಾವ. ದೇಶಾಂಶ ಹುಡಗಿಯವರು ಭಾವನಾಜೀವಿಯಾದುದರಿಂದ ಅವರದು ಹೃದಯ ಸ್ಪರ್ಶಿ ಅಭಿವ್ಯಕ್ತಿ. ಈ ಮಾತು ಮನದಟ್ಟಾಗುವ ಸಂದರ್ಭವೊಂದಿದೆ…

ಎರಡು ಸಾವಿರದ ಎಂಟರಲ್ಲಿ, ಬೀದರ ಜನತೆಯು ‘ಯಶೋದಮ್ಮ ಸಿದ್ದಬಟ್ಟೆಯವರನ್ನು ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕ ಅಪಾರ ನಷ್ಟ ಅನುಭವಿಸುತ್ತಿದೆ’ ಎಂದು ಹೇಳುವಾಗ, ನಾನು ಅವ್ವನನ್ನು ಕಳೆದುಕೊಂಡು ಕಂಗಾಲಾಗಿದ್ದೆ. ಕ್ರಿಯಾಶೀಲ ಮಹಿಳೆ ನೆನ್ನೆ ಇದ್ದವರು ಇಂದು ಇಲ್ಲ ಎಂದಾಗ ಅಸಂಖ್ಯಾತರು ಹೌಹಾರಿ ಧಾವಿಸಿ ಮನೆಗೆ ಬಂದಿದ್ದರು. ಅವರಲ್ಲಿ ದೇಶಾಂಶ ಹುಡಗಿಯೂ ಒಬ್ಬರು. ಶಾಂತ, ನಿಷ್ಕ್ರಿಯ, ನಿರ್ಜೀವವಾಗಿ ಮಲಗಿದ್ದ ಅವ್ವನನ್ನು ನೋಡುವುದು ಅವರಿಗೆ ಬಹಳ ಕಷ್ಟವಾಯಿತು. ವ್ಯಥೆ, ಸಂಕಟ ಪಡುತ್ತ ಅವರಾಡಿದ ಮಾತುಗಳು ಇಂದಿಗೂ ಮನದಲ್ಲಿ ಮಾರ್ನುಡಿಯುತ್ತಿದೆ.

‘ಏನವ್ವಾ ತಂಗಿ ಯಶೋದಮ್ಮ ಹಿಂಗ್ ಹ್ಯಾಂಗ್ ಮಲಗಿದಿಯವ್ವ?
ನಾವಿನ್ನು ಬದುಕಿದ್ದಾಗ ನಮಗ್ ಹೇಳ್ಲಾರ್ದೆ ಹ್ಯಾಂಗ್ ಹೋದಿ?
ಇದ್ದಾಗಲೂ ನಗು ನಗುತಾ ಇದ್ದಿ…
ಹೋದಾಗಲೂ ಅದೇ ಹಸನ್ಮುಖಿ’

ಹಾಗೆ ಹೇಳುತ್ತ ಕಣ್ಣೀರಿಟ್ಟಾಗ ನಾನಷ್ಟೇ ಅಲ್ಲ, ಅಲ್ಲಿದ್ದವರೆಲ್ಲರೂ ಗೊಳೋ ಎಂದು ಅತ್ತುಬಿಟ್ಟರು. ಈ ತರಹದ ಸಂವೇದನೆ ಹೊಂದಿದ ವ್ಯಕ್ತಿಯನ್ನು ಏನೆಂದು ವಿವರಿಸಿಬೇಕು? ಅವರು ಬದುಕಿದ ರೀತಿಯನ್ನೇ ಓದ ಬೇಕಷ್ಟೆ. ಬರೆಯಲು ಅಸಾಧ್ಯ. ಬೀದರಿನಲ್ಲಿ ನೆಲೆಸಿರುವ ಹಿರಿಯ ಚೇತನ ದೇಶಾಂಶ ಹುಡಗಿಯವರು ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಜೀವನೋತ್ಸಾಹದಿಂದ ಬರಹದಲ್ಲಿ ತೊಡಗಿದ್ದರು. ಹಿಂದೆ ‘ಶ್ರೀ ಚನ್ನಬಸವ ಚರಿತ್ರೆ’ ಚೌಪದಿಯಲ್ಲಿ ರಚಿಸಿದ್ದರು. ಈಗ ಇನ್ನೂ ಮೂರು ಮಹಾಕಾವ್ಯಗಳು, ‘ದಿಗಂಬರ ಕರಿಬಸವ ಕಾವ್ಯ’, ‘ಬುದ್ಧ ಚರಿತೆ’, ‘ಹೇಮರೆಡ್ಡಿ ಮಲ್ಲಮ್ಮ’ ಲಲಿತ ರಗಳೆಯಲ್ಲಿ ರಚಿಸಿ, ಅಚ್ಚಿಗೆ ಕಳುಹಿಸಿದ್ದಾರೆ.

ಇಂದು ಅವರು ನಮ್ಮನ್ನಗಲಿದ್ದಾರೆ. ಇದೊಂದು ನಂಬಲಾಗದ ಸತ್ಯ. ವಾಸ್ತವ ಯಾವತ್ತೂ ಕಹಿ.

ಕೆಲವು ದಿನಗಳ ಹಿಂದೆ ಅವರೇ ಹೇಳಿದಂತೆ, ಅವರ ಕೈಯಲ್ಲಿ ‘ಹಾರಕೂಡ ಮುತ್ಯಾ ಕಾವ್ಯ’ ಕೃತಿ ರೂಪ ಪಡೆಯುತ್ತಿತ್ತು. ಇನ್ನೂ ‘ಗುರು ಗೀತೆ’ ಬಸವಣ್ಣನವರ ಮಹಾಕಾವ್ಯ, ‘ಸಿದ್ಧಲಿಂಗೇಶ್ವರ ಗೀತೆ’ ಗದಗದ ತೋಂಟದಾರ್ಯ ಶ್ರೀ ಗಳ ಕುರಿತು ಬರೆಯುವ ಯೋಜನೆ ಹಾಕಿಕೊಂಡಿದ್ದರು. ‘ಗುರು ಬಸವ ಅವನಿಚ್ಛ ಇದ್ರ್ ತಾನೇ ಬರುಸ್ಕೋತಾನ್ ಮಗಾ. ನನ್ ಕೈಯಾಗ ಯಾನದ?’ ಎನ್ನುವ ಅವರ ಮಾತು ಕಿವಿಯಲ್ಲಿ ಗುಯ್ಗುಡುತ್ತಿದೆ. ಅವುಗಳೆಲ್ಲಾ ಎಷ್ಟು ಪೂರ್ಣವಾಗಿದೆ ಎನ್ನುವುದನ್ನು ಕಾದು, ಕೇಳಿ ತಿಳಿದುಕೊಳ್ಳಬೇಕು.

‘ಹಿಂದಿರುಗಿ ನೋಡಿದಾಗ’ ಅವರ ಆತ್ಮ ಕಥನದ ಬರಹವೂ ಸಾಗಿತ್ತು. ಅದರ ಮೊದಲ ಓದು ಮಾಡುವಂತೆ ಆಗ್ರಹಿಸಿದ್ದರು. ಬೀದರಿನ ಈ ದೈತ್ಯ ಪ್ರತಿಭೆಯೊಂದಿಗೆ ಫೋನಾಯಿಸಿ ಮಾತನಾಡಿದಾಗ, ಅದೇ ದೇಸೀ ಸೊಗಡಿನ ಬೀದರ ಕನ್ನಡ ಕೇಳುವ ಖುಶಿ ಸಿಗುತ್ತಿತ್ತು. ಎಂಬತ್ನಾಲ್ಕರ ಹರೆಯದಲ್ಲೂ ಅದೇ ಉತ್ಸಾಹದಿಂದ ‘ಮಗಾ ಮಗಾ’ ಎನ್ನುತ್ತ ನಕ್ಕು, ನಗಿಸಿ ಅರ್ಧ ತಾಸುಗಟ್ಟಲೆ ಮಾತನಾಡುತ್ತಿದ್ದರು.

ಲೇಖನ:ಸಿಕಾ, ಕಲಬುರಗಿ

ದೇಶಾಂಶ ಹುಡಗಿಯವರು ಬಾಲ್ಯದಿಂದಲೂ ನಿರ್ಭಯ, ನಿರ್ಭಿಡೆಯಿಂದ ಬದುಕಿದ ಶರಣ ಜೀವಿ. ಈಗ ಸಾವನ್ನೂ ಅದೇ ಮನಸ್ಥಿತಿಯಿಂದ ಸ್ವೀಕರಿಸಿ ವಿದಾಯ ಹೇಳಿದ್ದಾರೆ. ಬದುಕಿನುದ್ದಕ್ಕೂ ಕಾಪಿಟ್ಟುಕೊಂಡ ಉತ್ಸಾಹ ಅರ್ಥಪೂರ್ಣ ಸಾಹಿತ್ಯ ರಚನೆಗೆ ನಾಂದಿಯಾಗಿದೆ. ಇಂದು ಅವರು ಮೌನವಾಗಿರುವಾಗ ಆ ಕೃತಿಗಳೇ ದನಿಯಾಗಿವೆ. ಸಮಸ್ತ ಕನ್ನಡದ ಮನಸುಗಳ ಪ್ರೀತಿಯ, ಅಭಿಮಾನದ ಶ್ರದ್ಧಾಂಜಲಿ.

Leave a Reply

Your email address will not be published. Required fields are marked *

You May Also Like

ಜಾನಪದ ಸಾಹಿತ್ಯ ವಿಶ್ವದಲ್ಲೇ ಶ್ರೇಷ್ಠ ಸಾಹಿತ್ಯ -ಡಾ.ಎಸ್ ಬಾಲಾಜಿ

ಗದಗ: ವಿಶ್ವವಿದ್ಯಾಲಯಗಳು ಜಾನಪದಕ್ಕೆ ಸಂಬಂಧಿಸಿದ ಕ್ಷೇತ್ರಕಾರ್ಯ ಹಾಗೂ ದಾಖಲೀಕರಣದ ಕಾರ್ಯಗಳನ್ನು ನಿಲ್ಲಿಸಿರುವುದು ವಿಷಾದನೀಯ ಎಂದು ರಾಜ್ಯಾಧ್ಯಕ್ಷ…

ಜೂ.1ರ ನಂತರದ ಮತ್ತೆ ಕಠಿಣ ಲಾಕ್ ಡೌನ್ ಬಗ್ಗೆ ಜಿಲ್ಲಾಧಿಕಾರಿಗಳು ಹೇಳಿದ್ದೇನು?

ಗದಗ: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೋವಿಡ್-19 ಎರಡನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದಿಂದ ಜಾರಿ ಮಾಡಿದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಟಾನ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಸಂಕನೂರ್ ಅಂದಪ್ಪ ಅವರ ಸಮಾಜ ಸೇವೆ ಇತರರಿಗೂ ಆದರ್ಶ

ನಿಸ್ವಾರ್ಥ ಸಮಾಜ ಸೇವಕರ ಪೈಕಿ ಗಜೇಂದ್ರಗಡದ ಹೆಮ್ಮೆಯ ಸರಳ ಸಜ್ಜನಿಕೆಯ ಯುವಕ ಅಂದಪ್ಪ ಕಳಕಪ್ಪ ಸಂಕನೂರ ಕೂಡ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು. ಶಿಕ್ಷಣ ಪ್ರೇಮಿ ಅಂದಪ್ಪ ಅವರು, ಶ್ರೇಷ್ಠ ವರ್ತಕ ದಿ. ಬಂಗಾರಬಸಪ್ಪ ಸಂಕನೂರ ಅವರ ಮೊಮ್ಮಗನಾಗಿದ್ದು, ಸಂಕನೂರ ಅಂದಪ್ಪ ಎಂದೇ ಚಿರಪರಿಚಿತರು.

ಸುಕ್ಕಾ ಹೊಡದ್ ಒಂಚೂರು ಉಪ್ಪಿನಕಾಯಿ ಒಳಗೋದ ಕೂಡ್ಲೆ ಏನಾತಂತೀರಿ…!

ಹೊಗ್ಗೋ ನಿನ್ನ ತಲಿ ದಿಮ್ ಹಿಡದಂಗಾಗಿ ಹ್ಯಂಗ್ಯಂಗರ ಮಾತಾಡಾಕತ್ತಿನಿ ಅನಸಾಕತ್ತೈತಿ ನಂಗ. ಅಯ್ಯೋ ನಂಗು ಹಂಗಾ ಅನಾಸಾಕತ್ತೈತಿ. ತಲಿ ದಿಮ್ಮಿನ ವಿಷಯ ಹೋಗ್ಲಿ ಹ್ಯಾಂಗಿತ್ತು ಮೊದಲ ದಿನದ ಅನುಭವ….!