ಪ್ರತಿ ವರ್ಷವೂ ಕಾರ ಹುಣ್ಣಿಮೆ ಆಗಮಿಸಿತೆಂದರೆ ಅದು ಮುಂಗಾರಿನ ನಾಂದಿ ಎಂತಲೇ ಅರ್ಥ. ಈ ಕಾರ ಪದದ ಅರ್ಥ, ಸುರಿ,ಚೆಲ್ಲು,ಬಿಳು ಎಂಬುದಾಗಿದೆ .ಎಂದರೆ ಇನ್ನು ಮುಂದೆ ರೈತರು ಬೆಳೆಯುವ ಬೆಳೆಗೆ ಮಳೆ ಸರಿಯಾಗಿ ಬಿಳಿಲಿ ಎಂದು ಪೂಜಿಸುವ ಒಂದು ಹಬ್ಬವೂ ಸರಿಯೇ.ಹಾಗೇ ನಮ್ಮಲ್ಲಿ ಈ ಹಬ್ಬದ ಮುಂಗಡ ದಿನವನ್ನು ” ಹೊನ್ನುಗ್ಗಿ” ಎಂದು ಆಚರಿಸುವರು .ಅಂದಿನ ದಿನ ರೈತರ ಮನೆಯಲ್ಲಿನ ಕುಂಟಿ ,ಕುರಿಗೆ ,ಬಾರುಕೋಲು ,ಮೊದಲಾದ ರೈತಾಪಿ ಸಾಮಗ್ರಿಗಳನ್ನು ಕ್ಯಾವಿಯಿಂದ ಸಾರಿಸಿ ಅಲಂಕರಿಸಿ ಪೂಜಿಸುವ ವಾಡಿಕೆಯುಂಟು.
ಕಾರ ಹುಣ್ಣಿಮೆ ವಿಶೇಷ:…….ಕಾರ ಹುಣ್ಣಮೆಯಂದು ಎಲ್ಲರೂ ಎತ್ತುಗಳನ್ನು ಸ್ನಾನ ಮಾಡಿಸಿ ಅವುಗಳ ಕೊಂಬಿಗೆ ಗೆಜ್ಜೆ ,ಕೊಂಬನಸು,ರಿಬ್ಬನ್,ಮತ್ತು ಬಣ್ಣಗಳನ್ನು ಬಳಸಿ ಅಲಂಕರಿಸಿ, ಹಣಿಪಟ್ಟಿ ಜೂಲಾಗಳನ್ನು ಹಾಕಿ ಮದುಮಗನಂತೆ ಶೃಂಗರಿಸುತ್ತಾರೆ .ಹಾಗೇಆ ದಿನ ಸಂಜೆ ಊರ ಅಗಸಿಯಲ್ಲಿ ಊರವರೆಲ್ಲ ಸೇರಿರುತ್ತಾರೆ ಎರಡೂ ಕಡೆ ಅಗಸಿಗಳಲ್ಲಿ ಉದ್ದನೆಯ ಬೊಂಬುಗಳಿಗೆ ಬೆವಿನೆಲೆಗಳನ್ನು ಕಟ್ಟಿ ಆಚೆ ಈಚೆ ಹಿಡಿದು ನಿಂತಿರುತ್ತಾರೆ.ಶೃಂಗರಿಸಿದ ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಓಡಿಸುತ್ತಾರೆ.ಯಾವ ಎತ್ತು ತನ್ನ ಕೊಂಬಿನ ಸಹಾಯದಿಂದ ಆ ಬೆವಿನೆಲೆಗಳನ್ನು ಕಟ್ಟಿದ ಹಗ್ಗವನ್ನು ತಿವಿದು ಹರಿಯುತ್ತದೆಯೋ ಆ ಎತ್ತು ವಿಜಯಶಾಲಿ.ಆಗ ಯಾವ ಬಣ್ಣದ ಎತ್ತು (ಅಂದರೆ ಬಿಳಿ ಎತ್ತು,ಕರಿ ಎತ್ತು,ಕಂದು ಬಣ್ಣದ ಎತ್ತು )ಹಗ್ಗವನ್ನು ಹರಿಯುತ್ತದೆಯೋ ಅದರ ಆಧಾರದ ಮೇಲೆ ಆ ವರ್ಷದ ಬೆಳೆಗಳು ಮತ್ತೆ ಮಳೆಗಳನ್ನು ನಿರ್ಧರಿಸುತ್ತಾರೆ.ಹೀಗೆ ಕಾರ ಹುಣ್ಣಿಮೆ ಎಂಬುದು ರೈತರ ಹರುಷವನ್ನು ಇಮ್ಮಡಿಗೊಳಿಸುವ ಮುಂಗಾರಿನ ಮುನ್ನುಡಿಯ ಹಬ್ಬವೆಂದೇ ಹೇಳಬಹುದು.
ಈ ಹರುಷದ ನಾಂದಿಗೆ ಪೌರಾಣಿಕವಾದ ಒಂದು ಸಂಗತಿಯೂ ಇದೆ ಅದೆನೆಂದರೆ:— ಹಿಂದೆ ಸಮುದ್ರ ಮಂಥನದ ಸಮಯದಲ್ಲಿ ಸುರ ಅಸುರರು ಅಮೃತಕ್ಕಾಗಿ ಪರಿಶ್ರಮಿಸುವ ಸಂದರ್ಭದಲ್ಲಿ ಇತ್ತ ರಾಕ್ಷಸಿಯೊಬ್ಬಳೂ ಈಡೀ ವಿಶ್ವಕ್ಕೆ ಕಾಟ ಕೊಡುತ್ತಿದ್ದಳಂತೆ ಆಗ ಜಗದೀಶ್ವರನು ತನ್ನ ಮಗ ನಂದಿಗೆ ಅವಳನ್ನು ಸಂಹರಿಸುವಂತೆ ಆಜ್ಞೆಯನ್ನು ಮಾಡಿದನಂತೆ ಆಗ ನಂದಿಯು ತನ್ನ ಕೊಂಬಿನಿಂದ ಚುಚ್ಚಿ ಆ ರಕ್ಕಸಳನ್ನು ಸಂಹರಿಸಿ ಜನರಿಗೆ ನೆಮ್ಮದಿಯ ಔತನವನ್ನುನಬಡಿಸಿದನಂತೆ.ನಂದಿಯ ಆ ವಿಜಯದ ಸಂಕೇತವಾಗಿಯೂ ಕೂಡಾ ನಂದಿಗಳನ್ನು ಶೃಂಗರಿಸಿ ಪೂಜಿಸುವುದುಂಟು ಎಂಬುದು ಪೌರಾಣಿಕ ಹಿನ್ನೆಲೆ.

ಹೀಗೆ ಪ್ರತಿ ವರ್ಷವೂ ಕಾರ ಹುಣ್ಣಿಮೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಸೊಬಗಿನಿಂದ ಆಚರಿಸುವರು.ಇದು ಭೂ ತಾಯಿಗೆ ಪೂಜೆ ಸಲ್ಲಿಸುವ ಹಬ್ಬವೂ ಹೌದು.ಮುಂಗಾರಿನಲ್ಲಿ ಸುರಿದ ಮಳೆಯಿಂದ ಇಳೆಗೆ ತಂಪು ತಗುಲಿ ಬೆಳೆಗಳ ಬೆಳೆಗೆ ಬೀಜಗಳನ್ನು ಬಿತ್ತಲು ಹರುಷದಿ ಸಾಗುವ ಮುನ್ನ ಬೇಳೆಯ ಬೆಳೆಯಲು ಹೆಗಲು ಕೊಡುವ ಆ ಜೀವಗಳಿಗೆ(ಎತ್ತುಗಳಿಗೆ) ಪೂಜಿಸುವ ಸುಸಮಯವಿದು. ಈ ಕಾರ ಹುಣ್ಣಿಮೆ ಈಡೇ ಜಗತ್ತನ್ನೆ ಕೊರೋನಾ ಮುಕ್ತವನ್ನಾಗಿಸಿ ರೈತರು ಬೆಳೆದ ಬೆಳೆಗಳೆಲ್ಲಾ ಹಣ್ಣಾಗಿ ಹೊನ್ನಾಗಿ ರೈತರ ಬಾಳು ಬೆಳಗಲಿ.
1 comment
ಸುಪರ್