ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ಜಿಲ್ಲೆ ಮತ್ತು ನಗರಗಳಲ್ಲಿ ದಿಢೀರ್ ಲಾಕ್ ಡೌನ್ ಹೇರಿದ್ದರಿಂದ ಕೈಗಾರಿಕಾ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಬೆಂಗಳೂರು: ಜುಲೈ 13ರ ರಾತ್ರಿ 8 ಗಂಟೆಗೆ ಕರ್ನಾಟಕ ಸರ್ಕಾರ, ಒಂದು ವಾರ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಎಂದು ಘೋಷಣೆ ಮಾಡಿತು.
ಟೊಯೋಟಾ-ಕಿರ್ಲೊಸ್ಕರ್ ಸೇರಿದಂತೆ ಹಲವಾರು ಆಟೊಮೊಬೈಲ್ ಕಂಪನಿಗಳು ಮತ್ತು ಸಾವಿರಾರು ಸಣ್ಣ ಕೈಗಾರಿಕೆಗಳು ತಮ್ಮ ನೌಕರರಿಗೆ ವಾರ ಕಾಲ ರಜೆ ಘೋಷಿಸಿದವು. ಆದರೆ ಜುಲೈ 14ರ ಸಂಜೆ ಸ್ಪಷ್ಟೀಕರಣ ನೀಡಿದ ಸರ್ಕಾರ, ಉತ್ಪಾದನಾ ಕ್ಷೇತ್ರಕ್ಕೆ ಈ ಲಾಕ್ ಡೌನ್ ಅನ್ವಯಿಸುವುದಿಲ್ಲ ಎಂದಿತು. ಆದರೆ ಅಷ್ಟೊತ್ತಿಗಾಗಲೇ ಕಂಪನಿಗಳ ನೌಕರರು ಅವರ ಊರು ತಲುಪಿಯಾಗಿತ್ತು.
ಬೆಂಗಳೂರಷ್ಟೇ ಅಲ್ಲ, ವಿವಿಧ ಜಿಲ್ಲೆಗಳಲ್ಲೂ ಇಂತಹ ಗಡಿಬಿಡಿಯ ಲಾಕ್ ಡೌನ್ ಕಾರಣದಿಂದ ಹಲವಾರು ಸಣ್ಣ ಉದ್ಯಮಗಳು ಬಂದ್ ಆಗಿ ನಷ್ಟದಲ್ಲಿವೆ. ನೌಕರರಿಗೆ ಕೆಲಸ ಇಲ್ಲ ಎಂದರೆ ಸಂಬಳವೂ ಸಿಗುವುದಿಲ್ಲ.
ಮಹಾರಾಷ್ಟ್ರ ಸರ್ಕಾರ ಉತ್ಪಾದನಾ ಕ್ಷೇತ್ರದ ಹಬ್ ಎಂದೇ ಕರೆಯಲ್ಪಡುವ ಪುಣೆಯನ್ನು ಲಾಕ್ ಡೌನ್ ಮಾಡಿದೆ. ಬಿಹಾರ್ ಸರ್ಕಾರ ಗ್ರಾಮಗಳನ್ನು ಹೊರತುಪಡಿಸಿ ಇಡೀ ಬಿಹಾರ್ ರಾಜ್ಯದಲ್ಲಿ ಜುಲೈ 31 ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಒರಿಸ್ಸಾ ಮತ್ತು ಅಸ್ಸಾಂಗಳಲ್ಲಿ ಭಾಗಶ: ಲಾಕ್ ಡೌನ್ ಜಾರಿಯಲ್ಲಿದೆ. ಅವಸರಕ್ಕೆ ಬಿದ್ದು ಹೇರುವ ಲಾಕ್ ಡೌನ್ ಕಾರಣಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಷ್ಟದಲ್ಲಿವೆ. ನೌಕರರು ಸಂಬಳ ರಹಿತ ರಜೆ ಮೇಲೆ ಮನೆಯಲ್ಲಿದ್ದು ಸಂಕಷ್ಟದಲ್ಲಿದ್ದಾರೆ.