ಬೆಳಗಾವಿಯ ಈ ಮನೆ ರವಿ ಹೊಂಗಲ್ ಅವರ ಫೋಟೊಗ್ರಫಿ ಪ್ರೀತಿಗೆ ಸಾಕ್ಷಿಯಾಗಿದೆ. ಈ ಮನೆ ಫೋಟೊ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಕ್ಯಾಮೆರಾ ಬಗೆಗಿನ ತಮ್ಮ ಒಲವನ್ನು ಈ ರೀತಿ ಸೃಜನಾತ್ಮಕ ಶೈಲಿಯಲ್ಲಿ ವ್ಯಕ್ತಪಡಿಸಿದ ಹೊಂಗಲ್ ಕ್ಯಾಮೆರಾ ಪ್ರೀತಿಯನ್ನು ಸಾವಿರಾರು ಜನ ಪ್ರಶಂಸಿದ್ದಾರೆ.
ಬೆಳಗಾವಿ: ಈ ಮನೆ ನೋಡಿ, ಥೇಟು ಕ್ಯಾಮೆರಾ ತರಹ ಇದೆ. ಮನೆ ಹೊರಭಾಗ ಡಿಟ್ಟೋ ಕ್ಯಾಮೆರಾ. ಕ್ಯಾಮೆರಾದ ಭಾಗಗಳನ್ನು ನೀವಿಲ್ಲಿ ನೋಡಬಹುದು. ಲೆನ್ಸ್, ಲೆನ್ಸ್ ಹುಡ್, ಫ್ಲ್ಯಾಶ್, ಫಿಲ್ಮ್ ರೋಲ್ ಇತ್ಯಾದಿ. ಮನೆಯ ಒಳಗೂ ಕ್ಯಾಮೆರಾ, ಫೋಟೊಗ್ರಫಿಗೆ ಸಂಬಂಧಿಸಿದ ಸಂಗತಿಗಳನ್ನು ನಿರ್ಮಿಸಲಾಗಿದೆ. ಈ ಮನೆಯ ಹೆಸರೇ ‘ಕ್ಲಿಕ್’.

ಬೆಳಗಾವಿಯ ಫೋಟೊಗ್ರಾಫರ್ ರವಿ ಹೊಂಗಲ್ ಅವರ ಫೋಟೊಗ್ರಫಿ ಪ್ರೀತಿಗೆ ಈ ಅನನ್ಯ ಮನೆ ಸಾಕ್ಷಿಯಾಗಿದೆ. ಈ ಮನೆ ಫೋಟೊ ಈಗ ವೈರಲ್ ಆಗಿದ್ದು ವಿಶ್ವದ ವಿವಿಧ ಕಡೆಯ ಜನರು ಮೆಚ್ಚಿಕೊಂಡಿದ್ದಾರೆ. ಒಂದು ವೃತ್ತಿ, ಹವ್ಯಾಸವನ್ನು ಗಾಢವಾಗಿ ಪ್ರೀತಿಸಿದಾಗ ಅದು ಬದುಕಿನ ಭಾಗವೇ ಆಗಿಬಿಡುತ್ತದೆ. ಕ್ಯಾಮೆರಾ ರವಿ ಹೊಂಗಲ್ ಕುಟುಂಬದ ಸದಸ್ಯನೇ ಆಗಿಬಿಟ್ಟಿದೆ.
ಅಂದಂತೆ ಹೊಂಗಲ್ ಅವರು ತಮ್ಮ ಮೂವರು ಮಕ್ಕಳಿಗೆ ಕ್ಯಾಮೆರಾ ಕಂಪನಿಗಳ ಹೆಸರನ್ನೇ ಇಟ್ಟಿದ್ದಾರೆ: ನಿಕಾನ್, ಕ್ಯಾನಾನ್, ಎಪ್ಸಾನ್.
‘ನನಗೆ ಫೋಟೊಗ್ರಫಿ ಎಂದರೆ ಹವ್ಯಾಸವಷ್ಟೇ ಅಲ್ಲ, ಅದು ಒಂದು ರೀತಿಯಲ್ಲಿ ನನ್ನ ಜೀವ, ಅಂತರಾಳ. ಫೋಟೊಗ್ರಫಿ, ಕ್ಯಾಮೆರಾ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲದರ ಜೊತೆಗೂ ನನಗೆ ಭಾವನಾತ್ಮಕ ಸಂಬಂಧವಿದೆ.’
-ರವಿ ಹೊಂಗಲ್

‘ಮನೆ ಕಟ್ಟಿಸಿದರೆ ಅದು ಫೋಟೊಗ್ರಫಿಗೆ ಸಲ್ಲಿಸುವ ಕೃತಜ್ಞತೆ ಆಗುವಂತಿರಬೇಕು ಅಂದುಕೊಂಡಿದ್ದೆ. ಮನೆ ಹೀಗಿರಬೇಕು ಎಂಬ ಕನಸಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಐಡಿಯಾ ಇರಲಿಲ್ಲ. ಬೆಳಗಾವಿಯ ‘ಕೀ ಕನ್ಸೆಪ್ಟ್ ಇಂಟಿರೀಯರ್ಸ್ ಕಂಪನಿಯವರು ನನ್ನ ಆಶಯಗಳನ್ನು ಮೂರ್ತರೂಪಕ್ಕೆ ಇಳಿಸುವಲ್ಲಿ ನೆರವಾಗಿದ್ದಾರೆ’ ಎನ್ನುತ್ತಾರೆ ಹೊಂಗಲ್.