ಬೆಂಗಳೂರು:ನಾನು ಸಿಎಂ ಆಗಿದ್ದಾಗ ಕೇವಲ ₹26 ಕೋಟಿ ಆಗಿದ್ದ ತಿರುಪತಿ ವಸತಿ ಸಮುಚ್ಚಯ ಯೋಜನೆ, @BSYBJP ಸರ್ಕಾರದಲ್ಲಿ, ಒಂದೇ ವರ್ಷದಲ್ಲಿ 200 ಕೋಟಿಗೆ ಏರಿಕೆಯಾಗಿದೆ. ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ. ಆದರೆ ಕೋವಿಡ್ ಕಾಲದ ಈ ಲೂಟಿಗಲ್ಲ. ಸರ್ಕಾರ ಕೂಡಲೇ ಈ ಯೋಜನೆಯನ್ನು ನಿಲ್ಲಿಸಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅಪಾರ ದೈವಭಕ್ತ ಕುಟುಂಬದಿಂದ ಬಂದ ಎಚ್ ಡಿ ಕುಮಾರಸ್ವಾಮಿಯವರು ಇಂತಹ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವೇ ಎಂಬ ಅನುಮಾನ ವ್ಯಕ್ತವಾಗುವುದು ಸಹಜ. ಆದರೆ, ಇಂದು ಈ ಕುರಿತು ಅವರು ಎರಡು ಟ್ವೀಟ್ ಮಾಡಿದ್ದು, ಈ ಯೋಜನೆಗೆ ರಾಜ್ಯ ಸರ್ಕಾರ ಟಿಟಿಡಿಗೆ 200 ಕೋಟಿ, ವಿನ್ಯಾಸ, ವಾಸ್ತುಶಿಲ್ಪಕ್ಕಾಗಿ ಖಾಸಗಿ ಸಂಸ್ಥೆಗೆ ಯೋಜನೆಯ ಶೇ.5(10 ಕೋಟಿ) ಅನ್ನು ನೀಡುತ್ತಿದೆ. ಈ ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯದ ಲೋಕೋಪಯೋಗಿ ಇಲಾಖೆ ಶಕ್ತವಲ್ಲವೇ? ವಿನ್ಯಾಸ ರೂಪಿಸಲು ಇಲಾಖೆಯಲ್ಲಿ ಯಾರೂ ಇಲ್ಲವೇ? ಕೋವಿಡ್ ಸಂಕಷ್ಟ ಕಾಲದಲ್ಲಿ ಈ ಯೋಜನೆ ಅಗತ್ಯವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ಮೊದಲೇ ಕೊರೊನಾ ಹೆಸರಿನಲ್ಲಿ ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಸಾಮಾಜಿಕ ಹೋರಾಟಗಾರರು, ನೆಟ್ಟಿಗರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇಗ ಎಚ್.ಡಿ.ಕುಮಾರಸ್ವಾಮಿ ಕೂಡ ರಾಜ್ಯ ಸರ್ಕಾರದ ವಿರುದ್ಧ ಲೂಟಿಯ ಆರೋಪ ಹೊರಿಸಿದ್ದಾರೆ.