ಭೋಪಾಲ್: ಹತ್ತನೆ ಕ್ಲಾಸ್ ಪರೀಕ್ಷೆಯಲ್ಲಿ ಬರೊಬ್ಬರಿ 98.75 ಪರ್ಸೆಂಟು ಮಾಡಿದ ಈ ಛೋಟಿ, ರಾಜ್ಯಕ್ಕೆ 8ನೇ ರಾಂಕ್ ಗಳಿಸಿದ್ದಾಳೆ.
ಇಲ್ಲಿ ಇದು ಏಕೆ ಮುಖ್ಯವೆಂದರೆ, ಈ ಪೋರಿ ದಿನವೂ 24 ಕಿಮೀ ಸೈಕಲ್ ತುಳಿದು ಶಾಲೆ ಕಲಿತಿದ್ದಾಳೆ. ಮನೆಯಿಂದ ಶಾಲೆ ಇರುವ ಪಟ್ಟಣ 12 ಕಿಮೀ ಇದೆ. ಹೋಗುವಾಗ 12, ಬರುವಾಗ 12 ಕಿಮೀ ಸೈಕ್ಲಿಂಗ್ ಮಾಡಿದ್ದಾಳೆ.
ಮಧ್ಯಪ್ರದೇಶದ ಚಂಬಲ್ ಪ್ರದೇಶದ ಭಿಂಡ್ ಜಿಲ್ಲೆಯ ಅಜ್ನೋಲ್ ಎಂಬ ಗ್ರಾಮದ ರೊಶಿನಿ ಬಡೋರಿಯಾ ಈ ಸಾಧನೆ ಮಾಡಿದ್ದಾಳೆ.
ಸಣ್ಣ ರೈತರಾಗಿರುವ ಈಕೆಯ ತಂದೆ ಪುರುಷೋತ್ತಮ್, ಇಡೀ ಊರೇ ಮಗಳ ಸಾಧನೆಗೆ ಹೆಮ್ಮೆ ಪಡುತ್ತಿದೆ. 8ನೆ ತರಗತಿವರೆಗೆ ಊರಲ್ಲೇ ಓದಲು ಅವಕಾಶವಿತ್ತು. 9ನೆ ತರಗತಿಯಿಂದ ಮೆಹಗಾಂವ್ ಪಟ್ಟಣದ ಸರಕಾರಿ ಶಾಲೆಗೆ ಸೇರಿದಳು. ಇಲ್ಲಿ ಬಸ್ ಸೌಲಭ್ಯ ಸರಿಯಿಲ್ಲ. ಶಾಲೆಗೆ ಹೋಗುವ ಸಮಯ ಮತ್ತು ವಾಪಸ್ ಬರುವ ಸಮಯಕ್ಕೆ ಬಸ್ ಇಲ್ಲ. ಖಾಸಗಿ ವಾಹನಗಳ ಓಡಾಟವೂ ಅಷ್ಟಕ್ಕಷ್ಟೇ. ಹೀಗಾಗಿ ಮಗಳು ಸೈಕಲ್ ಸವಾರಿ ಮಾಡಲೇಬೇಕಾಗಿತು’ ಎಂದು ಹೇಳುತ್ತಾರೆ.
ಈ ಕುರಿತು ಮಾತಾಡಿರುವ ರೊಶಿನಿ, ‘ಎಷ್ಟು ದಿನ ಸೈಕಲ್ ಓಡಿಸಿದೆ ಲೆಕ್ಕ ಇಟ್ಟಿಲ್ಲ. ವರ್ಷದಲ್ಲಿ 120-130 ದಿನ ಸೈಕಲ್ ಬಳಸಿದ್ದೇನೆ. ಓದಲೇಬೇಕೆಂಬ ಗುರಿಯಿದೆ. ದಿನಕ್ಕೆ 7-8 ತಾಸು ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ’ ಎಂದಿದ್ದಾಳೆ.
ಸಿವಿಲ್ ಪರೀಕ್ಷೆ ಪಾಸು ಮಾಡುವ ಗುರಿ ಹೊಂದಿರುವ ಈ ಹೆಮ್ಮೆಯ ಹುಡುಗಿಗೆ ಈ ವರ್ಷದಿಂದ ಸ್ಕೂಟಿ ಕೊಡಿಸಲು ಅವರಪ್ಪ ನಿರ್ಧರಿಸಿದ್ದಾರೆ.
ಹ್ಯಾಟ್ಸಾಪ್ ಹಳ್ಳಿ ಹುಡುಗಿ.