ಬೆಂಳೂರು: ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಬಿಜೆಪಿ ಮುಖಂಡ ಬಿ.ಎಲ್.ಸಂತೋಷ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಆಕ್ಷೇಪಕ್ಕೆ ಪ್ರತ್ಯುತ್ತರವನ್ನು ಟ್ವೀಟ್ ಮೂಲಕ ಸಿದ್ದರಾಮಯ್ಯ ನೀಡಿದ್ದು, ಕಾಂಗ್ರೆಸ್ ನೀಡಿದ್ದ ಒಂದು ಕೋಟಿ ರೂಪಾಯಿ ಪರಿಹಾರದ ಲೆಕ್ಕವನ್ನು @blsanthosh ಕೇಳಿದ್ದಾರೆ, ಅದನ್ನು ಕೊಡೋಣ. ಮೊದಲು ಪ್ರತಿಯೊಬ್ಬ ಭಾರತೀಯನ ಖಾತೆಗೆ @narendramodi ಜಮೆ ಮಾಡಿರುವ 15 ಲಕ್ಷ ರೂಪಾಯಿಯ ಲೆಕ್ಕ ಕೊಡಿ, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ ‘ಪಿಎಂ ಕೇರ್ಸ್’ ನಿಧಿಯ ಲೆಕ್ಕಕೊಡಿ ಎಂದು ಕೇಳಿದ್ದಾರೆ.
ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು @blsanthosh ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು @PMOIndia. ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ ಎನ್ನುವುದನ್ನೂ ತಿಳಿಸಲಿ ಎಂದು ಸವಾಲೆಸೆದಿದ್ದಾರೆ.
@blsanthosh ಅವರೇ, @BSYBJP ಅವರಿಗೆ ನೀವು ನೀಡಿರುವ ಶಹಭಾಸ್ ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ? ನೀವು ಆಗಾಗ ಕರ್ನಾಟಕಕ್ಕೆ ಬಂದು ಅವರ ವಿರುದ್ಧ ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಅವರು ನಿಮಗೆ ಶಹಭಾಸ್ಗಿರಿ ಕೊಡಬಹುದೇನೋ ? ಎಂದು ಕಾಲೆಳೆದಿದ್ದಾರೆ.