ಬೆಂಗಳೂರು : ಕೊರೊನಾ ಮಹಾಮಾರಿಯಿಂದಾಗಿ ಹಲವು ಸೆಲೆಬ್ರಿಟಿಗಳು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿಲ್ಲ. ಅಲ್ಲದೇ, ಅವರೆಲ್ಲ ಅಭಿಮಾನಿಗಳಿಗೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ, ಮಹಾಮಾರಿ ಹೋದ ಮೇಲೆ ಹಬ್ಬ ಆಚರಿಸೋಣ ಎಂದು ಕಿವಿ ಮಾತು ಹೇಳಿದ್ದಾರೆ. ಸದ್ಯ ಈಗ ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಇದೇ ತಿಂಗಳ 12ರಂದು ಶಿವಣ್ಣ ಅವರ ಹುಟ್ಟು ಹಬ್ಬವಿದೆ. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳು ಶಿವಣ್ಣ ಅವರ ಹುಟ್ಟು ಹಬ್ಬ ಆಚರಿಸುತ್ತಿದ್ದರು. ಹೂವಿನ ಹಾರ, ಕೇಕ್ ತಂದು ಸಂಭ್ರಮಿಸುತ್ತಿದ್ದರು. ಆದರೆ ಈ ಕೊರೊನಾದಿಂದ ಯಾವುದೇ ಸಂಭ್ರಮಕ್ಕೂ ಅವಕಾಶವಿಲ್ಲ. ಹೀಗಾಗಿ ಈ ಬಾರಿ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳದಿರಲು ನಿರ್ಧಾರಿಸಿದ್ದಾರೆ.
ನಟ ಶಿವರಾಜ್ಕುಲಮಾರ್ ಈ ಬಗ್ಗೆ ಇನ್ಸ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ಆರೋಗ್ಯವಾಗಿ ಚೆನ್ನಾಗಿದ್ದೀರಿ ಎಂದುಕೊಂಡಿದ್ದೇನೆ. ನಾನು ಕೂಡ ಆರೋಗ್ಯವಾಗಿದ್ದೀನಿ, ನೀವು ಚೆನ್ನಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಈ ತಿಂಗಳು ನನ್ನ ಹುಟ್ಟು ಹಬ್ಬವಿದೆ. ಆದರೆ ಆ ದಿನ ನಾನು ಮನೆಯಲ್ಲಿ ಇರಲ್ಲ. ಇಂತಹ ಸಂದರ್ಭದಲ್ಲಿ ನನ್ನ ಹುಟ್ಟು ಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂದು ತಿಳಿಸಿದ್ದಾರೆ.