
ಆಲಮಟ್ಟಿ: ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಆಲಮಟ್ಟಿ ಆಣೆಕಟ್ಟುಯಿಂದ 1.25 ಲಕ್ಷ ಕ್ಯುಸೆಕ್ ನೀರು ಹೊರ ಗರಿವಿನ ಮೂಲಕ ಬುಧವಾರ ಮಧ್ಯಾಹ್ನದಿಂದ ಹರಿಸಲಾಗುತ್ತಿದೆ. ಜಲಾಶಯದ ಎಲ್ಲ ಗೇಟಗಳನ್ನು ತೆರೆದು ಜಲಾಶಯದ ಕೆಳಭಾಗದಲ್ಲಿರುವ ಕೃಷ್ಣಾ ನದಿಯ ತಳಪಾತ್ರಕ್ಕೆ ನೀರು ಬಿಡಲಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೃಷ್ಣಾ ನದಿಯ ಹರಿವನ್ನು ಗಮನದಲ್ಲಿಟ್ಟುಕೊಂಡು ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಆಲಮಟ್ಟಿ ಜಲಾಶಯದ ಹೊರಹರಿವನ್ನು ಹೆಚ್ಚಿಸಲಾಗಿದೆ.
ಮಂಗಳವಾರದಿಂದ 1 ಲಕ್ಷ ಕ್ಯುಸೆಕ್ ಇದ್ದ ಹೊರಹರಿವು ಬುಧವಾರ 1.25 ಲಕ್ಷ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.
ಬುಧವಾರ ಸಂಜೆ ಜಲಾಶಯಕ್ಕೆ 1.10 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ನಾಳೆಯೊಳಗೆ ಅದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು. ಪ್ರವಾಹ ಪರಸ್ಥಿತಿ ನಿಯಂತ್ರಣಕ್ಕಾಗಿ ಸುರಕ್ಷಿತ ಅಂತರ ಇಟ್ಟುಕೊಂಡು ಹಂತ ಹಂತವಾಗಿ ಹೊರಹರಿವು ಹೆಚ್ಚಿಸಲಾಗುತ್ತಿದೆ. ಸದ್ಯ ಒಳಹರಿವಿಗಿಂತ ಹೊರಹರಿವು ಹೆಚ್ಚಾದರೂ, ಒಳಹರಿವು ಇನ್ನಷ್ಟು ಹೆಚ್ಚಾಗಲಿದೆ ಎಂದರು. ಜಲಾಶಯಕ್ಕೆ ಬುಧವಾರ 9 ಟಿಎಂಸಿ ಅಡಿಯಷ್ಟು ನೀರು ಹರಿದು ಬಂದಿದೆ. ಸದ್ಯ 519.6 ಮೀ ಎತ್ತರದ ಜಲಾಶಯದಲ್ಲಿ 517.33 ಮೀ.ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 88.63 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕೊಯ್ನಾ 12.3 ಸೆಂ.ಮೀ, ನವಜಾ 14.2 ಸೆಂ.ಮೀ, ಮಹಾಬಳೇಶ್ವರ 13.6 ಸೆಂ.ಮೀ, ರಾಧಾನಗರಿ 12.6 ಸೆಂ.ಮೀ, ದೂಧಗಂಗಾ 9.6 ಸೆಂ.ಮೀ ಮಳೆಯಾಗಿದೆ.
ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 88500 ಕ್ಯುಸೆಕ್ ಹಾಗೂ ದೂಧಗಂಗಾ ನದಿಯಿಂದ 23,760 ಕ್ಯುಸೆಕ್ ಸೇರಿ 1,12,260 ಕ್ಯುಸೆಕ್ ನದಿ ಹರಿವು ಬಂದು ಕಲ್ಲೋಲ ಬ್ಯಾರೇಜ್ ಬಳಿ ಕರ್ನಾಟಕದ ಕೃಷ್ಣಾ ನದಿಯನ್ನು ಸೇರುತ್ತಿದೆ.