ಜಿನೆವಾ: ಕೊರೊನಾ ವೈರಸ್ ಗೆ ಪರಿಣಾಮಕಾರಿ ಮದ್ದು ಎನ್ನಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಡೆ ನೀಡಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಮದ್ದಿನಿಂದಾಗಿ ಕೊರೊನಾ ವೈರಸ್ ರೋಗಿಗಳು ಗುಣಮುಖರಾಗುವುದಕ್ಕಿಂತ ಸಾಯುವ ಅಪಾಯವೇ ಹೆಚ್ಚು ಎಂಬ ವೈದ್ಯಕೀಯ ವರದಿಯ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕಾ ಕ್ರಮವಾಗಿ ಈ ತಡೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವದಾದ್ಯಂತ ಸಾವಿರಾರು ಆಸ್ಪತ್ರೆಗಳು ಕ್ಲಿನಿಕಲ್ ಟ್ರಯಲ್‌ಗಾಗಿ ರೋಗಿಗಳನ್ನು ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಗುಂಪಿನ ಸಾಲಿಡಾರಿಟಿ ಟ್ರಯಲ್‌ನಲ್ಲಿ (ಒಗ್ಗಟ್ಟಿನ ಪ್ರಯೋಗ) ನೊಂದಾಯಿಸಿವೆ. ಈ ಕ್ಲಿನಿಕಲ್ ಪ್ರಯೋಗದಲ್ಲಿ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿರುವ ಮಾರಕ ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯುವ ಸಲುವಾಗಿ ವಿಶ್ವಾದ್ಯಂತ ನೂರಾರು ಔಷಧ ತಯಾರಿಕಾ ಸಂಸ್ಥೆಗಳು ಸಂಶೋಧನೆಯಲ್ಲಿ ತೊಡಗಿವೆ.