ಅಣ್ಣಾ ನಾನು ಊರಿಗೆ ಬರ್ತಿನಿ, ಬೇಕಾದ್ರೆ ಕ್ವಾರೈಂಟೈನ್ ನಲ್ಲಾದ್ರು ಇರ್ತಿನಿ ಆದ್ರೆ ಊರಿಗೆ ಬಂದ್ರೆ ಸಾಕು ಅನ್ನಿಸ್ತಿದೆ, ಹೇಗಾದ್ರು ಮಾಡಿ ನನ್ನನ್ನು ಕರಿಸಿಕೋ ಎನ್ನುವ ಮೊಬೈಲ್ ಕರೆಗಳೀಗ ಸಾಮಾನ್ಯವಾಗಿವೆ. ನಮಗೆ ಒಂದೊತ್ತಿನ ಊಟಕ್ಕೂ ಪರದಾಟವಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದೇ ನಾವು ಪರದಾಡುತ್ತಿದ್ದೇವೆ ಬೇಗ ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಎನ್ನುವ ಅಂಗಲಾಚುವ ಧ್ವನಿ. ಒಂದೆಡೆ ಕಾರ್ಮಿಕರ ಗೋಳು ಮತ್ತೊಂದೆಡೆ ತಮ್ಮ ದೇಹವನ್ನೆ ಬಂಡವಾಳವಾಗಿಸಿಕೊಂಡು ಮುಂಬೈ-ಪುಣೆಯನ್ನೆ ಆಶ್ರಯಿಸಿಕೊಂಡಿದ್ದ ಲೈಂಗಿಕ ಕಾರ್ಯಕರ್ತೆಯರು ಒಪ್ಪತ್ತಿನೂಟಕ್ಕೆ ಪಡುತ್ತಿರುವ ಗೋಳಾಟ ಅಷ್ಟಿಷ್ಟಲ್ಲ. ಇದು ಹೊರರಾಜ್ಯದಲ್ಲಿರುವ ಕನ್ನಡಿಗರ ಸ್ಥಿತಿ. ಆಡಳಿತ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೊರರಾಜ್ಯದ ಕಾರ್ಮಿಕರಿಗೆ ಆಹಾರ ಕಿಟ್ ಕೊಟ್ಟು ಸುಮ್ಮನಾದರು. ಇವರು ಕಳಿಸಿದ ಆಹಾರ ಕಿಟ್ ಆ ಕುಟುಂಬಳಿಗೆ ಎಷ್ಟು ದಿನ ಆಗಬಹುದು? ಇನ್ನು ಆಹಾರ ಕಿಟ್ ಏನೋ ಕೊಟ್ಟರು. ಆದರೆ ಅದೆಷ್ಟೋ ಕುಟುಂಬಳಿಗೆ ಮನೆಗಳೇ ಇಲ್ಲ. ಅವರು ಇರುವುದಾದರೂ ಎಲ್ಲಿ? ಹೀಗೆ ಹೊರರಾಜ್ಯದಲ್ಲಿರುವ ಕನ್ನಡಿಗರ ಸ್ಥಿತಿ ನೆನೆದರಂತೂ ಕರಳು ಕಿತ್ತು ಬರುವಂತಾಗಿದೆ.
ಮುಖ್ಯವಾಗಿ ಗೋವಾ, ಮಹಾರಾಷ್ಟ್ರ,ಕೇರಳ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ರಾಜ್ಯದ ಕಾರ್ಮಿಕರು ವಲಸೆ ಹೋಗುವುದು ಸಾಮಾನ್ಯ. ಆದರೆ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಕನ್ನಡಿಗರಂತೂ ಊರು ತಲುಪಲು ತುದಿಗಾಲು ಮೇಲೆ ನಿಂತಿದ್ದಾರೆ. ಇನ್ನು ನಮ್ಮ ಆಡಳಿತ ಯಂತ್ರ ಆಕಾಶದಲ್ಲಿ ಹಾರಾಡುವವರ ಬಗ್ಗೆ ಯೋಚಿಸಿದರೆ ಹೊರತು ಈ ಕಾರ್ಮಿಕರ ಬಗ್ಗೆ ಯಾರು ಕಿಂಚಿತ್ತು ಕಾಳಜಿ ವಹಿಸಲಿಲ್ಲ.
ಮಹಾರಾಷ್ಟ್ರದಲ್ಲೇನು?
ಇವತ್ತಿನ ವರೆಗೆ ಮಹಾರಾಷ್ಟ್ರದಲ್ಲಿ 8590 ಸೊಂಕಿತರು ಪತ್ತೆಯಾಗಿದ್ದು, ಇದರಲ್ಲಿ 1282 ಜನರು ಗುಣಮುಖರಾಗಿದ್ದಾರೆ. 368 ಜನರು ಸಾವನ್ನಪ್ಪಿದ್ದಾರೆ. ಇದರಿಂದ ಮಹಾ ಸರ್ಕಾರಕ್ಕೀಗ ಕೊರೋನಾ ನಿಯಂತ್ರಣ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ಮಹಾರಾಷ್ಟ್ರದ ಪೂನಾ, ಬಾಂಬೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ನಮ್ಮ ರಾಜ್ಯದ ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ. ಬಡ ಕೂಲಿಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿ ಪರದಾಡಬೇಕಾಗಿದೆ. ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವುದು ಅಸಾಧ್ಯ ಮಾತು ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಗೋವಾದಲ್ಲೇನು?
ಇನ್ನು ಗೋವಾ ರಾಜ್ಯದ ವಿಷಯಕ್ಕೆ ಬಂದಾಗ ಗೋವಾದಲ್ಲಿ 7 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು 7 ಕೇಸ್ ಗಳು ಗುಣಮುಖವಾಗಿವೆ. ಈ ಕಾರಣದಿಂದ ಗೋವಾ ರಾಜ್ಯ ಇದೀಗ ಗ್ರೀನ್ ಝೋನ್ ನಲ್ಲಿದೆ. ಹೀಗಾಗಿ ಗೋವಾಕ್ಕೆ ಹೋಗಿರುವ ಕನ್ನಡಿಗರು ತಮ್ಮನ್ನು ರಾಜ್ಯಕ್ಕೆ ಕರೆಸಿಕೊಳ್ಳುವಂತೆ ತಮ್ಮ ಸ್ಥಳೀಯ ನಾಯಕರಿಗೆ ಒತ್ತಾಯಿಸುತ್ತಿದ್ದಾರೆ. ಆದರೆ ಗೋವಾದಲ್ಲಿ ಎಷ್ಟು ಪ್ರಕರಣಗಳಿದ್ದವು ಅಥವಾ ಎಷ್ಟು ಗುಣಮುಖ ಹೊಂದಿದವು ಎನ್ನುವುದು ಮುಖ್ಯವಲ್ಲ. ಈಗಾಗಲೇ ರಾಜ್ಯದಲ್ಲೂ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಗೋವಾದಿಂದ ಬಂದವರಿಗೆ ಸೋಂಕು ತಗುಲಬಾರದೆಂಬ ಮುನ್ನೆಚ್ಚರಿಕೆ ಕೂಡ ಆಯಾ ಸ್ಥಳೀಯ ಜಿಲ್ಲಾಡಳಿತದ್ದಾಗಿದೆ. ಇನ್ನು ಗೋವಾ ರಾಜ್ಯದಲ್ಲಿರುವ ಕನ್ನಡಿಗರಿಗೆ ಜನಪ್ರತಿನಿಧಿಗಳು ಆಹಾರ ಧಾನ್ಯದ ಕಿಟ್ ಗಳನ್ನು ಕಳುಹಿಸಿ ಸುಮ್ಮನಾದರು, ಎಲ್ಲ ಪಕ್ಷದವರು ಪೈಪೋಟಿಗೆ ಬಿದ್ದಂತೆ ಆಹಾರ ಧಾನ್ಯ ಕಳುಹಿಸಿದರು. ಮಾನವೀಯತೆಯಿಂದ ಇದು ಉತ್ತಮ ಕಾರ್ಯವೇ ಸರಿ. ಆದರೆ ದಿನಸಿ ಕಳಿಸಿದ ನಮ್ಮ ಯಾವ ನಾಯಕರು ಅಲ್ಲಿರುವವರು ಎಷ್ಟು ಜನ ಮನೆಯಲ್ಲಿದ್ದಾರೆ, ಎಷ್ಟು ಜನ ಬೀದಿಯಲ್ಲಿದ್ದಾರೆ ಎಂದು ಯೋಚಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸ.
ಈ ಕಾರಣದಿಂದ ಮಹಾರಾಷ್ಟ್ರ ಆಗಲಿ ಅಥವಾ ಗೋವಾದಲ್ಲಿರುವವರೆ ಆಗಲಿ ಸದ್ಯದ ಪರಿಸ್ಥಿತಿಯಲ್ಲಿ ಊರು ಸೇರುವ ವಿಚಾರ ಮಾಡುವುದು ಸಮಾಜದ ಹಾಗೂ ವಯಕ್ತಿಕ ಆರೋಗ್ಯ ದೃಷ್ಟಿಯಿಂದ ಒಳಿತಲ್ಲ. ಈಗಾಗಲೇ ಕರ್ನಾಟಕದಲ್ಲಿಯೂ ಕೂಡ ಇವತ್ತಿನವರೆಗೆ 523 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 207 ಪ್ರಕರಣ ಗುಣಮುಖವಾಗಿದ್ದು 20 ಸಾವಾಗಿವೆ. ಈ ಕಾರಣದಿಂದ ರಾಜ್ಯ ಸರ್ಕಾರಕ್ಕೂ ಕೂಡ ಕೊರೋನಾ ಸೋಂಕು ನಿಯಂತ್ರಣ ತಲೆನೋವಿನ ಸಂಗತಿ.
ಇದನ್ನು ಹೊರರಾಜ್ಯದಲ್ಲಿರುವವರು ಕೂಡ ಅರ್ಥೈಸಿಕೊಳ್ಳಲೇಬೇಕಾದ ಸಂಗತಿ. ಇನ್ನು ವಲಸಿಗರಿಂದಲೇ ಸೋಂಕು ಹರಡಲಿ ಅಥವಾ ಇಲ್ಲಿಗೆ ಬಂದ ಮೇಲೆ ಬೇರೆಯವರಿಂದ ವಲಸಿಗರಿಗೆ ಸೋಂಕು ತಗುಲಲಿ ಯಾವುದಾದರೂ ಕೂಡ ಅಪಾಯದ ಸಂಕೇತವೇ? ಆದರೆ ನಾವೀಗ ಅವರನ್ನು ಈ ಮಾತುಗಳಿಂದ ಸಂತೈಸಲು ಹೋದರೆ ಹಸಿದ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು ಹೇಗೆ ಎಂದು ಅವರು ಪ್ರಶ್ನೆ ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲದಂತಾಗಿದೆ.
ಕೇರಳದಲ್ಲೇನು?
ಲಾಕ್ ಡೌನ್ ಆರಂಭವಾಗುತ್ತಿದ್ದಂತೆ ಸಾಕಷ್ಟು ಜನ ಜೀವ ಭಯದಿಂದ ರಾತ್ರೋರಾತ್ರಿ ಸಾವಿರಾರು ಕಿಲೋಮೀಟರ್ ನಡೆದುಕೊಂಡೆ ಬಂದು ಮನೆ ಸೆರಿದ್ದಾರೆ. ಇನ್ನು ರಸ್ತೆ ಮದ್ಯದಲ್ಲಿ ಸಾವು ನೋವು ಸಂಭವಿಸಿದ ಉದಾಹರಣೆಗಳು ಕೂಡ ಇದೀಗ ನಾಡಿನ ಚರಿತ್ರೆಯಲ್ಲಿ ದಾಖಲಾಗಿದೆ. ಇದರ ಬದಲಾಗಿ ಸರ್ಕಾರಗಳು ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವ ಮೂಲಕ ಅವರನ್ನು ಕ್ವಾರಂಟೈನ್ ನಲ್ಲಿಡಬೇಕಿತ್ತು. ಇದರಿಂದ ಕೊಂಚವಾದರೂ ಬಡ ಕಾರ್ಮಿಕರಿಗೆ ಅನುಕೂಲವಾಗುತ್ತಿತ್ತು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರು ಅನುಸರಿಸಿದ ಕ್ರಮದ ಅರ್ಧದಷ್ಟಾದರೂ ದೇಶದ ಎಲ್ಲ ರಾಜ್ಯಗಳು ಅನುಸರಿಸಿದ್ದರೆ ಅನ್ನಕ್ಕಾಗಿ ನಮ್ಮ ಜನ ಪರಿತಪಿಸಬೇಕಾದ ಪ್ರಮೆಯವೇ ಇರುತ್ತಿರಲಿಲ್ಲ.
ಲಾಕ್ ಡೌನ್ ಘೋಷಣೆಯಾದ ತಕ್ಷಣ ಕೇರಳ ಸರ್ಕಾರ 20,000 ಕೋಟಿಯಲ್ಲಿ ಯೋಜನೆ ರೂಪಿಸಿ ಕೇರಳದ ಪ್ರತಿಯೊಂದು ಬಡ ಕುಟುಂಬಕ್ಕೆ ತಿಂಗಳಿಗಾಗುವಷ್ಟು ದಿನಸಿ(ತರಕಾರಿ ಸೇರಿ), ಗ್ಯಾಸ್ ಸಿಲಿಂಡರ್ ಜೊತೆಗೆ ಕೈ ಖರ್ಚಿಗೆ ಹಣ ಕೂಡ ನೀಡಿತು. ಇದರಿಂದಾಗಿ ಅಲ್ಲಿನ ಕಾರ್ಮಿಕರ ಸಮಸ್ಯೆ ಅಷ್ಟಾಗಿ ಕೇಳಿ ಬರುತ್ತಿಲ್ಲ. ಈಗಾಗಲೇ ಕೇರಳದಲ್ಲಿಯೂ ಇವತ್ತಿನವರೆಗೆ 482 ಪಾಸಿಟಿವ್ ಪ್ರಕರಣಗಳಿದ್ದು ಇದರಲ್ಲಿ 355 ಗುಣಮುಖ ಹೊಂದಿದ್ದು 4 ಸಾವಾಗಿವೆ. ತತ್ ಕ್ಷಣಕ್ಕೆ ಜಾಗೃತವಾದ ಕೇರಳ ಸರ್ಕಾರ ಸ್ಥಳೀಯ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹೆಚ್ಚುವರಿಯಾಗಿರುವ ಜನರ ಸರ್ವೇ ಮಾಡಿಸಿತು. ಅವರು ಯಾವುದೇ ರಾಜ್ಯದವರಿದ್ದರೂ ಅವರಿಗೂ ಕೂಡ ಆಹಾರ ಕಿಟ್ ಪೂರೈಸಿತು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಟಾಲ್ ಫ್ರೀ ನಂಬರ್ ಗಳನ್ನು ಸಿದ್ಧಪಡಿಸಿ ಹೆಚ್ಚು ಪ್ರಚಾರ ಮಾಡಿದರು. ಮನೆಗಳಿಲ್ಲದ ಕಾರ್ಮಿಕರಿಗೆ ಹಾಸ್ಟೇಲ್ ಹಾಗೂ ಶಾಲಾ ಕಟ್ಟಡಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಯಿತು. ಮುಖ್ಯವಾಗಿ ಯಾವುದೇ ಖಾಸಗಿ ಆಸ್ಪತ್ರೆಗಳು ಬಂದ್ ಆಗಲಿಲ್ಲ. ಖಾಸಗಿ ಆಸ್ಪತ್ರೆಯ ಸಿಬ್ಬಂಧಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಗೆ ತೆಗೆದುಕೊಂಡರು. ಜೊತೆಗೆ ನಿತ್ಯ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಕೊರೋನಾ ಸೋಂಕಿನ ಬಗ್ಗೆ ಜಾಗೃತಿಯ ಜೊತೆಗೆ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು. ಇನ್ನು ಕೇರಳದ ಗೃಹ ಮಂತ್ರಿಯಂತೂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದರು. ಕೇರಳದಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ ತಯಾರಿಸಿದ ಸ್ಪಿರಿಟ್ ಹೊರಗಡೆ ಕಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿ ಅದರಿಂದ ಸ್ಯಾನಿಟೈಸರ್ ತಯಾರಿಸಿ ಪ್ರತಿ ಕುಟುಂಬಕ್ಕೆ ಆಹಾರ ಕಿಟ್ ಜೊತೆ ಸ್ಯಾನಿಟೈಸರ್ ಕೂಡ ವಿತರಿಸಿದರು. ಇದರಿಂದ ಕೇರಳಕ್ಕೆ ವಲಸೆ ಹೋದವರು ಕೊಂಚ ಮಟ್ಟಿಗೆ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ.
ಕೇಂದ್ರಕ್ಕೂ ಮಾದರಿ ಕೇರಳ
ಲಾಕ್ ಡೌನ್ ಘೋಷಣೆಯಾದ ತಕ್ಷಣ ಕೇಂದ್ರ ಸರ್ಕಾರ ಕೂಡ ಸಾವಿರಾರು ಕೋಟಿ ಹಣಕಾಸಿನ ನೆರವು ಘೋಷಿಸಿತು. ಆದರೆ ಯಾವುದಕ್ಕೆ ಎಷ್ಟು ಎನ್ನುವ ಸ್ಪಷ್ಟವಾದ ಯೋಜನೆ ಇರಲಿಲ್ಲ ಎನ್ನುವುದು ಬಹುತೇಕರ ವಾದ. ಸರ್ಕಾರಕ್ಕೊಂದು ವಿಜನ್ ಅವಶ್ಯಕವಾಗಿ ಬೇಕು. ಈ ವಿಷಯದಲ್ಲಿ ಕೇರಳ ಸರ್ಕಾರಕ್ಕೆ ಒಂದು ನಿರ್ಧಿಷ್ಟವಾದ ವಿಜನ್ ಇರುವುದರಿಂದಲೇ ಅಲ್ಲಿನ ಯೋಜನೆಗಳು ಯಶಸ್ವಿಯಾದವು. ದೇಶದ ಆಹಾರ ಸಂಗ್ರಹ ವ್ಯವಸ್ಥೆ ಕೂಡ ಕೇಂದ್ರ ಸರ್ಕಾರದ ಅಧಿನದಲ್ಲಿರುತ್ತದೆ. ಸಂಗ್ರಹವಿರುವ ಆಹಾರ ಪೂರೈಸಿ ಬಡ ಜನರಿಗೆ ನೆರವು ನೀಡಬಹುದಿತ್ತು. ಲಾಕ್ ಡೌನ್ ಘೋಷಣೆಯ ತತ್ ಕ್ಷಣವೇ ಸರ್ವೇ ಕಾರ್ಯ ಕೈಗೊಂಡು ಯಾವ ರಾಜ್ಯದಲ್ಲಿ ಎಷ್ಟು ವಲಸಿಗರಿದ್ದಾರೆ ಎನ್ನುವ ನಿಖರ ಮಾಹಿತಿ ಪಡೆದು ಅವರಿಗೆ ಅಹಾರ ಹಾಗೂ ವಸತಿ ಸೌಲಭ್ಯ ಒದಗಿಸಬಹುದಿತ್ತು. ಪ್ರತೀ ಊರಲ್ಲೂ ಸರ್ಕಾರಿ ಕಟ್ಟಡಗಳು, ಶಾಲೆ, ವಸತಿ ನಿಲಯಗಳು ಇರುತ್ತವೆ. ಅವುಗಳಲ್ಲಿ ವಲಸಿಗರಿಗೆ ವಸತಿ ಸೌಲಭ್ಯ ವದಗಿಸುವ ವ್ಯವಸ್ಥೆ ಮಾಡಬಹುದಿತ್ತು. ಆರಂಭದ ಹಂತದಲ್ಲಿಯೇ ಕೇಂದ್ರ ಸರ್ಕಾರ ಯೋಜನೆ ರೂಪಿಸುವಲ್ಲಿ ವಿಫಲವಾದ ಕಾರಣ ಜನಸಾಮಾನ್ಯರು ಗೋಳಾಡುವಂತಾಯಿತು. ಕೇಂದ್ರ ಸರ್ಕಾರ ಶಿಘ್ರ ವಲಸಿಗ ಕಾರ್ಮಿಕರು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಮುಂದಾಗಬೇಕಾದ ಅನಿವಾರ್ಯತೆಯೂ ಇದೆ.
2 comments
Good information and suggestions
I m from karnataka gadag beldari Tanda I live in anjuna north goa I have problem I have 2 son I work labour for every day now I dont have work also. I don’t have ration also I need to go back to karnataka please help me. Contact 7756053044