ಜೀವನದ ಅರ್ಥವನ್ನು ವಚನಗಳ ಮೂಲಕ ಸರಳವಾಗಿ ಸಾರಿದ ಬಸವೇಶ್ವರರು ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗುತ್ತಾರೆ. ಬಸವ ಜಯಂತಿ ಸಂದರ್ಭದಲ್ಲಿ ಕನ್ನಡ ಬೆಳ್ಳಿತೆರೆ ಮೇಲೆ ಪ್ರಸ್ತಾಪವಾದ ಬಸವೇಶ್ವರರ ಬದುಕು, ವಚನ ಸಾಹಿತ್ಯದ ಬಗೆಗೊಂದು ನೋಟ

ಶಶಿಧರ ಆರ್.

ಆಡು ಭಾಷೆಯ ಶರಣ ಸಾಹಿತ್ಯದೊಂದಿಗೆ ಸಾಮಾನ್ಯರ ಬದುಕಿಗೆ ಬೆಳಕಾದ ಬಸವೇಶ್ವರರು ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ. ಕನ್ನಡ ಬೆಳ್ಳಿತೆರೆ ಮೇಲೆ ಬಸವೇಶ್ವರರ ಜೀವನ, ಕಾಯಕದ ಕುರಿತಾಗಿ ಪ್ರಸ್ತಾಪವಾಗಿದೆ. ಶಿವಶರಣರ ಬದುಕು-ಸಾಧನೆ ಆಧರಿಸಿದ ಚಿತ್ರಗಳಲ್ಲಿಯೂ ಬಸವೇಶ್ವರರು ಬಂದು ಹೋಗುತ್ತಾರೆ. ಬಸವೇಶ್ವರರು ಮತ್ತು ಶಿವಶರಣರು ರಚಿಸಿರುವ ವಚನಗಳನ್ನು ಕೆಲವು ಸಿನಿಮಾಗಳಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

ಕನ್ನಡ ಬೆಳ್ಳಿತೆರೆಯಲ್ಲಿ ಬಸವೇಶ್ವರರ ಪಾತ್ರದಲ್ಲಿ ಅತ್ಯಂತ ಜನಪ್ರಿಯವಾದ ನಟ ಹೊನ್ನಪ್ಪ ಭಾಗವತರ್. ಈ ಪಾತ್ರದ ಬಗ್ಗೆ ಪ್ರಸ್ತಾಪವಾಗುತ್ತಿದ್ದಂತೆ ಹೊನ್ನಪ್ಪನವರ ಸಾತ್ವಿಕ ಮುಖ ಕಣ್ಣೆದುರು ಬರುತ್ತದೆ. ಐವತ್ತರ ದಶಕದ ಕೊನೆಯಲ್ಲಿ ತೆರೆಕಂಡ ‘ಜಗಜ್ಯೋತಿ ಬಸವೇಶ್ವರ’ (೧೯೫೯) ಚಿತ್ರದಲ್ಲಿ ಹೊನ್ನಪ್ಪನವರು ಬಸವೇಶ್ವರರ ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೆಯಾಗಿದ್ದರು. ಡಾ.ರಾಜಕುಮಾರ್ ಬಿಜ್ಜಳನ ಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರವನ್ನು ಟಿ.ವಿ.ಸಿಂಗ್‌ಠಾಕೂರ್ ನಿರ್ದೇಶಿಸಿದ್ದರು. ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರಪ್ರಶಸ್ತಿಗೆ ‘ಜಗಜ್ಯೋತಿ ಬಸವೇಶ್ವರ’ ಪಾತ್ರವಾಗಿತ್ತು.

ಮುಂದೆ ೧೯೮೩ರಲ್ಲಿ ತೆರೆಕಂಡ ‘ಕ್ರಾಂತಿಯೋಗಿ ಬಸವಣ್ಣ’ ಚಿತ್ರದಲ್ಲಿ ಬಸವಣ್ಣನವರ ಕಲ್ಯಾಣ ಕ್ರಾಂತಿಯೊಂದಿಗೆ ಪ್ರಮುಖ ಶಿವಶರಣರೆಲ್ಲರ ಪ್ರಸ್ತಾಪವಿತ್ತು. ದೊಡ್ಡ ತಾರಾಬಳಗವಿದ್ದ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರನೇಕರು ನಟಿಸಿದ್ದರು. ಶೀರ್ಷಿಕೆ ಪಾತ್ರದಲ್ಲಿ ಡಾ.ರಾಜಕುಮಾರ್ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಬಸವೇಶ್ವರರ ಪಾತ್ರಧಾರಿಯಾಗಿ ಅಶೋಕ್ ತೆರೆ ಮೇಲೆ ಬಂದರು. ಬಿಜ್ಜಳ ರಾಜನಾಗಿ ಶ್ರೀನಿವಾಸಮೂರ್ತಿ ಅಭಿನಯಿಸಿದ್ದ ಚಿತ್ರದಲ್ಲಿ ವಚನಗಳು ಸೊಗಸಾಗಿ ಬಳಕೆಯಾಗಿದ್ದವು. ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದಲ್ಲಿ ತೆರೆಕಂಡ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿಸಿದ ಫಲಿತಾಂಶ ವ್ಯಕ್ತವಾಗಲಿಲ್ಲ. ಆದರೆ ಬಸವೇಶ್ವರರ ಕುರಿತಾಗಿ ಅತ್ಯುತ್ತಮ ಸಾಕ್ಷ್ಯಚಿತ್ರವಾಗಿಯೂ ಇದು ದಾಖಲಾಯ್ತು.

ಇನ್ನು ಶಿವಶರಣ, ಶರಣೆಯರಾದ ದಾನಮ್ಮದೇವಿ, ಮಡಿವಾಳ ಮಾಚಿದೇವ, ಹರಳಯ್ಯನವರ ಸಿನಿಮಾಗಳಲ್ಲಿಯೂ ಪ್ರಾಸಂಗಿಕವಾಗಿ ಬಸವೇಶ್ವರರ ಪಾತ್ರಗಳಿದ್ದವು. ಚಿಂದೋಡಿ ಬಂಗಾರೇಶ್ ನಿರ್ದೇಶನದಲ್ಲಿ ತೆರೆಕಂಡ ‘ದಾನಮ್ಮದೇವಿ’ ಚಿತ್ರದಲ್ಲಿ ನಟ ರಾಮಕೃಷ್ಣ ನಿಭಾಯಿಸಿದ್ದ ಬಸವೇಶ್ವರರ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಂಸಲೇಖ ಸಾಹಿತ್ಯ, ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ ‘ದಾನಮ್ಮ ದೇವಿ’ ಗೀತೆಗಳು ಈ ಹೊತ್ತಿಗೂ ಅಚ್ಚಹಸಿರಾಗಿವೆ. ಸದ್ಯ ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ತೆರೆಗೆ ಸಜ್ಜಾಗಿರುವ ‘ಅಲ್ಲಮ’ ಸಿನಿಮಾದಲ್ಲಿ ಬಸವೇಶ್ವರರ ಚಿತ್ರಣದ ಮತ್ತೊಂದು ಆಯಾಮವಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಈ ಚಿತ್ರದಲ್ಲಿ ಬಸವೇಶ್ವರರ ಪಾತ್ರ ನಿರ್ವಹಿಸಿದ್ದಾರೆ. ‘ಅನುಭವ ಮಂಟದಲ್ಲಿ ಅಲ್ಲಮರೊಂದಿಗೆ ಮುಖಾಮುಖಿಯಾಗುವ ಚಿಕ್ಕ ವಯಸ್ಸಿನ ಬಸವೇಶ್ವರರ ಪಾತ್ರವಿದು. ಚಿಕ್ಕಂದಿನಲ್ಲಿ ನಾನು ನನ್ನ ತಂದೆಯನ್ನು ನಾಟಕವೊಂದರಲ್ಲಿ ಬಸವಣ್ಣನ ಪಾತ್ರದಲ್ಲಿ ನೋಡಿದ್ದೆ. ಆಗಿನಿಂದಲೂ ಈ ಪಾತ್ರದಲ್ಲಿ ನಾನು ನಟಿಸಬೇಕೆಂದು ಆಸೆ ಪಟ್ಟಿದ್ದೆ. ನಾಗಾಭರಣರ ಸಿನಿಮಾ ಮೂಲಕ ಆಸೆ ಕೈಗೂಡಿತು’ ಎನ್ನುತ್ತಾರೆ ವಿಜಯ್.

ಕನ್ನಡ ಸಿನಿಮಾ ಕಂಡ ಪ್ರತಿಭಾವಂತ ಕಲಾವಿದ ಶ್ರೀನಿವಾಸಮೂರ್ತಿ ಕಿರುತೆರೆಗಾಗಿ ‘ಕ್ರಾಂತಿಯೋಗಿ ಬಸವಣ್ಣ’ ಧಾರಾವಾಹಿ ನಿರ್ದೇಶಿಸಿ, ಶೀರ್ಷಿಕೆ ಪಾತ್ರಕ್ಕೆ ಜೀವ ತುಂಬಿದ್ದರು. ಒಂದೂವರೆ ದಶಕದ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ಪ್ರತೀ ವಾರ ಎರಡು ವರ್ಷಗಳ ಕಾಲ ಧಾರಾವಾಹಿ ಪ್ರಸಾರವಾಗಿತ್ತು. ‘ಬಸವೇಶ್ವರರ ಪಾತ್ರದಲ್ಲಿ ಅಭಿನಯಿಸಬೇಕೆಂದು ರಂಗಭೂಮಿಯ ಆರಂಭದ ದಿನಗಳಲ್ಲೇ ಆಶಿಸಿದ್ದೆ. ಕಾರಣಾಂತರಗಳಿಂದ ಬೆಳ್ಳಿತೆರೆಯಲ್ಲಿ ನನಗೆ ಈ ಪಾತ್ರ ನಿರ್ವಹಿಸಲು ಸಾಧ್ಯವಾಗಲಿಲ್ಲ. ಮುಂದೆ ಕಿರುತೆರೆಗಾಗಿ ಸರಣಿ ಮಾಡಿದೆ. ದೊಡ್ಡ ಮಟ್ಟದಲ್ಲೇ ತಯಾರಾದ ಸರಣಿಯೊಂದಿಗೆ ಬಹಳಷ್ಟು ಕಲಾವಿದರು ಕಿರುತೆರೆಯಲ್ಲಿ ನೆಲೆ ಕಂಡುಕೊಂಡರು. ಇಂಥದ್ದೊಂದು ಮಹತ್ವದ ಸರಣಿ ಮಾಡಿದ ಸಾರ್ಥಕತೆ ನನ್ನದಾಯ್ತು’ ಎನ್ನುತ್ತಾರೆ ಶ್ರೀನಿವಾಸಮೂರ್ತಿ.

ಮಹಾ ದಾರ್ಶನಿಕ ಬಸವೇಶ್ವರರು ಮತ್ತು ಅವರ ಕಾಲದ ಶರಣ, ಶರಣೆಯರ ವಚನಗಳು ಆಡುಭಾಷೆಯ ಅಮೃತ ಸಿಂಚನ. ಸರಳ ಬದುಕಿಗೆ ಪ್ರೇರಣೆಯಾಗುವ ವಚನಗಳು ನಮ್ಮ ಸಿನಿಮಾಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗಿಲ್ಲ ಎಂದೇ ಹೇಳಬಹುದು.

  • ಚಿಂದೋಡಿ ಬಂಗಾರೇಶ್, ಚಿತ್ರನಿರ್ದೇಶಕ
1 comment
Leave a Reply

Your email address will not be published. Required fields are marked *

You May Also Like

ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಚಲಚಿತ್ರರಂಗದ ಹಿರಿಯ ನಟ ಆರೋಗ್ಯ ಸ್ಥಿತಿ ಗಂಭೀರ. ನಟ ಶಿವರಾಂ ಅವರ  ಆರೋಗ್ಯದಲ್ಲಿ ಏರುಪೇರಾದ…

ಚಂದನ ಶಾಲೆಯ ಪುಟಾಣಿಗಳ ಕೊರೋನಾ ಜಾಗೃತಿ

ಶಾಲೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಕೊರೋನಾ ಬಗ್ಗೆ ನೀಡಿದ ಜಾಗೃತಿ ಸಂದೇಶ ಅದ್ಭುತವಾದದ್ದು. ಇಂತಹ ಪ್ರಯತ್ನಕ್ಕೆ ಮುಂದಾದ ಚಂದನ್ ಶಾಲೆಯ ಪ್ರಯತ್ನ ಕೂಡ ಸಾಮಾಜಿಕ ಕಾಳಜಿ ತೋರಿಸುವಂತಹದ್ದು.

ಮಾರ್ಗಸೂಚಿಗಳು ಕೇಂದ್ರ ಸಚಿವರಿಗೆ ಅನ್ವಯವಾಗುವುದಿಲ್ಲವೇ?

ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗುತ್ತವೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಕೆಲವು ವಿನಾಯಿತಿಗಳು ಇವೆ