ಆಲಮಟ್ಟಿ: ಅಲ್ಲಿ ಗಣಿತ, ಭಾಷೆ ಸೇರಿ ನಾನಾ ವಿಷಯಗಳ ಕಠಿಣ ಪರಿಕಲ್ಪನೆಗಳನ್ನು ನಾನಾ ಹೊಸ ಹೊಸ ಕಲಿಕಾ ಆಯಾಮದ ಮಾದರಿಗಳೊಂದಿಗೆ ವಿದ್ಯಾರ್ಥಿಗಳೇ ವಿವರಿಸುತ್ತಿದ್ದರು. ಒತ್ತಕ್ಷರ, ಪದಶಬ್ದ, ಗೊಂಬೆಯೊಂದಿಗೆ ಆಟ, ಕಲ್ಲುಹಾಸು ಆಟ, ಕಲ್ಲು ಬೀಜ ಆಟ, ಆಡುತ್ತಾ ಕಲಿ, ಆಂಗ್ಲಭಾಷೆಯ ನಾನಾ ವ್ಯಾಕರಣಗಳು…ಅಬ್ಬಬ್ಬಾ ! ರೋಮಾಂಚಕಾರಿ ಕಲಿಕಾ ನಲಿಕಾ ಮೇಳದ ದರ್ಶನ ಕಂಗಳಲ್ಲಿ ಸೆರೆಯಾಗುತ್ತಿದ್ದವು !
ಹೀಗೆ ಸುಮಾರು ಹತ್ತಕ್ಕೂ ಹೆಚ್ಚು ವಿವಿಧ ಸ್ಟಾಲ್ ಗಳಲ್ಲಿ 3 ರಿಂದ 5 ನೇ ವರ್ಗದ ಮಕ್ಕಳೇ ಅರಳು ಹುರಿದಂತೆ ಮಾದರಿಗಳ ಬಗ್ಗೆ ವಿವರಣೆ ನೀಡುತ್ತಿದ್ದರು.
ಇದು ಶುಕ್ರವಾರ ಕಂಡು ಬಂದಿದ್ದು ಸಮೀಪದ ಬೇನಾಳ ಆರ್.ಎಸ್. ಪ್ರಾಥಮಿಕ ಶಾಲಾ ಆವರಣದಲ್ಲಿ. ಅಜೀಂ ಪ್ರೇಮ್ ಜಿ ಫೌಂಡೇಶನ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಲಿಕಾ ಚೇತರಿಕೆ ವರ್ಷ ಪ್ರಯುಕ್ತ ನಡೆದ ಆಲಮಟ್ಟಿ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಮೇಳದ ದೃಶ್ಯಗಳು.

ಆಂಗ್ಲಭಾಷೆಯ ಸ್ವರಗಳು, ವ್ಯಂಜನಗಳನ್ನು ವಿವಿಧ ಮಾದರಿಗಳ ಮೂಲಕ ವಿವರಿಸುತ್ತಿದ್ದ ಆಲಮಟ್ಟಿ ಡಿಎಸ್ ಶಾಲೆಯ ವಿದ್ಯಾರ್ಥಿಗಳು ಗಮನಸೆಳೆದರು. ಸುಲಭವಾಗಿ ಸಂಕಲನ ಮಾಡುವ ಬಗೆ, ಹಾಳಾದ ವಸ್ತುಗಳ ಮರುಬಳಕೆಯಿಂದ ಕನ್ನಡ ಅಕ್ಷರಗಳನ್ನು ಜೋಡಿಸುವುದು ಬೇನಾಳ ಶಾಲೆಯ ವಿದ್ಯಾರ್ಥಿಗಳ ಚಾಕಚಕ್ಯತೆ ಪ್ರದರ್ಶಿಸಿದರು.
ಇನ್ನೂ ಅರಳದಿನ್ನಿ ಶಾಲೆಯ ವಿದ್ಯಾರ್ಥಿಗಳು ಮಾಡಿದ ಹಾಸುಗಲ್ಲ ಆಟ ಗಮನಸೆಳೆಯಿತು. ಹಾವು ಏಣಿಯ ಆಟದಲ್ಲಿ ಸಂಕಲನ ಮತ್ತು ವ್ಯವಕಲನ ಆಟ ಮೋಜಿನ ಜತೆ ಗಣಿತ ಕ್ರಿಯೆಗಳನ್ನು ಪರಿಚಯ ಮಾಡಿಕೊಟ್ಟಿತು.
ಕಲಿಕಾ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಿಕ್ಷಕ ಸಂಘಟನೆಯ ಮುಖಂಡ ಬಿ.ಟಿ. ಗೌಡರ, ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಜಾರಿಗೆ ತಂದಿರುವ ಕಲಿಕಾ ಚೇತರಿಕೆಯ ಹಿಂದೆ ಅಜೀಂಪ್ರೇಮ್ ಜೀ ಫೌಂಡೇಶನ್ ನ ಸಂಶೋಧನಾತ್ಮಕ ಕಾರ್ಯಚಟುವಟಿಕೆ ಅಡಗಿದೆ ಎಂದರು. ನಲಿಯುತ್ತಾ, ಮಾಡಿ ಕಲಿ ತತ್ವಕ್ಕೆ ಪೂರಕವಾಗಿ ಈ ಮೇಳ ಶಿಕ್ಷಕರಿಗೂ ಸಹಕಾರಿಯಾಗಿದೆ ಎಂದರು.

ಅಜೀಂ ಪೇಮ್ ಜಿ ಫೌಂಡೇಶನ್ ಜಿಲ್ಲಾ ಸಂಯೋಜಕಿ ಸುನಿತಾ ಬಾಸೂತ್ಕರ್ ಮಾತನಾಡಿ, 3 ರಿಂದ 5 ನೇ ವರ್ಗದ ಮಕ್ಕಳು ಭಾಷೆ, ಗಣಿತದ ಪರಿಕಲ್ಪನೆ ಸುಲಭೀಕರಿಸಲು ಕಲಿಕೋಪಕರಣಗಳು ಅಗತ್ಯ, ಇದಕ್ಕಾಗಿ ಪ್ರತಿ ಶಾಲೆಯ ಶಿಕ್ಷಕರೊಂದಿಗೆ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳು ಕೈಜೋಡಿಸಿ ಮಕ್ಕಳ ಸಹಾಯದಿಂದ ಈ ಕಲಿಕೋಪಕರಣಗಳನ್ನು ತಯಾರಿಸಿದ್ದಾರೆ ಎಂದರು. ಆಡುತ್ತಾ ಕಲಿಯುವುದರಿಂದ ಪರಿಣಾಮಕಾರಿ ಕಲಿಕೆ ಜತೆ ಮೇಳಗಳಿಂದ ಸರ್ಕಾರಿ ಶಾಲೆಯ ಬಗ್ಗೆ ಸಮುದಾಯದಲ್ಲಿಯೂ ಆಸಕ್ತಿ ಹೆಚ್ಚುತ್ತದೆ ಎಂದರು.
ಮಕ್ಕಳ ಕಲಿಕಾ ಮೇಳವನ್ನು ಎಸ್ ಡಿಎಂಸಿ ಅಧ್ಯಕ್ಷ ಜಿ.ಸಿ. ಮುತ್ತಲದಿನ್ನಿ ಉದ್ಘಾಟಿಸಿದರು. ಬಿ.ಎಚ್. ಗಣಿ, ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ, ಸಿಆರ್ ಪಿ ಸುರೇಶ ಹುರಕಡ್ಲಿ, ಮುಖ್ಯ ಶಿಕ್ಷಕ ಎಸ್.ಎಂ. ಭಾವಿಕಟ್ಟಿ ಮಾತನಾಡಿದರು.

ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಪ್ರಧಾನ ಕಾರ್ಯದರ್ಶಿ ಸಲಿಂ ದಡೆದ, ಆರ್.ಬಿ. ಗೌಡರ, ಆರ್.ಎಸ್. ಕಮತ, ವಿ.ಕೆ. ಮಸೂತಿ, ನೇತಾಜಿ ಗಾಂಧಿ, ಎಂ.ಬಿ. ರಕರೆಡ್ಡಿ, ಅಲ್ಪಸಂಖ್ಯಾತ ನೌಕರರ ಸಂಘದ ಅಧ್ಯಕ್ಷ ಎಂ.ಆರ್. ಮಕಾನದಾರ, ಬಸವರಾಜ ಯರವಿನತೆಲಿಮಠ, ಬಿ.ಐ. ಖ್ಯಾಡಿ, ಸಿ.ಬಿ. ಪಾಟೀಲ, ನಾರಾಯಣ ದಾಸರ ಇನ್ನೀತರರು ವೇದಿಕೆಯ ಮೇಲಿದ್ದರು.
ಇಡೀ ದಿನ ನಡೆದ ಕಲಿಕಾ ಮೇಳದಲ್ಲಿ ನಿಡಗುಂದಿ ತಾಲ್ಲೂಕಿನ ನಾನಾ ಶಾಲೆಗಳ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 100 ಕ್ಕೂ ಹೆಚ್ಚು ಶಿಕ್ಷಕರು ಮೇಳಕ್ಕೆ ಆಗಮಿಸಿ ವಿದ್ಯಾರ್ಥಿಗಳಿಂದ ವಿಷಯಗಳ ಮಾಹಿತಿ ಪಡೆದರು.