ಆಲಮಟ್ಟಿ; ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆಯನ್ನು ವೃದ್ಧಿಸಿ, ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ಉದ್ದೇಶದಿಂದ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಆಯೋಜಿಸಿದೆ. ನರೇಗಾ ಯೋಜನೆಯಡಿ ದುರ್ಬಲ ವರ್ಗದವರಿಗೆ, ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ರೈತರಿಗಾಗಿ ಸಾಕಷ್ಟು ಸೌಲಭ್ಯಗಳಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಎಸ್.ಜೆ. ಉದಯಕುಮಾರ ಹೇಳಿದರು.
ಆಲಮಟ್ಟಿ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ, ವಿಶೇಷ ಮಹಿಳಾ ಗ್ರಾಮಸಭೆ, ಇ-ಶ್ರಮ ಕಾರ್ಡ್ ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಖಾಸಗಿ ಕಾಮಗಾರಿ ಸೇರಿದಂತೆ ಇತರೆಡೆ ಮಹಿಳೆಯರು ದುಡಿದರೆ ನೀಡುವ ವೇತನದಲ್ಲಿ ತಾರತಮ್ಯವಿದೆ. ಪುರುಷರಿಗೆ ಕೊಡುವಷ್ಟು ಕೂಲಿ ಹಣವನ್ನು ಮಹಿಳಾ ಕಾರ್ಮಿಕರಿಗೆ ನೀಡುವುದಿಲ್ಲ. ಆದರೆ, ನರೇಗಾದಡಿ ಸಮಾನ ಕೂಲಿ ನಿಯಮವಿದೆ. ಅಕುಶಲ ಮಹಿಳೆಯರು ಮತ್ತು ಶ್ರಮಚೇತನರು ನಿರ್ವಹಿಸುವ ಕೆಲಸಕ್ಕೆ ಶೇ.20 ರಷ್ಟು ಕೆಲಸ ಪ್ರಮಾಣದಲ್ಲಿ ರಿಯಾಯತಿ ನೀಡುವ ಮೂಲಕ ಮಹಿಳಾ ಭಾಗವಹಿಸುವಿಕೆಯನ್ನು ಕನಿಷ್ಟ ಶೇ.60 ರಷ್ಟು ಪ್ರತಿಶತಕ್ಕೆ ಹೆಚ್ಚಿಸುವ ಉದ್ದೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಕ್ರೀಯಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ವಿ.ಎಸ್. ಹಿರೇಮಠ ಮಾತನಾಡಿ,ವಾರಕ್ಕೊಮ್ಮೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಂದುಕೊರತೆ ಸಭೆ ಆಯೋಜಿಸಿ ಕೂಲಿಕಾರ್ಮಿಕರ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲಪಿಸುವುದಾಗಿ ಹೇಳಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಚ್.ಆರ್.ವಡ್ಡರ್ ಅವರು ಮಾತನಾಡಿದರು. ಶುಗರ್, ಬಿಪಿ ತಪಾಸಣೆ : ಆರೋಗ್ಯ ತಪಾಸಣೆ ಶಿಬಿರದಲ್ಲಿ ಒಟ್ಟು 90 ಜನ ಕೂಲಿಕಾರರಿಗೆ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಪರಿಶೀಲನೆ ಮಾಡಿ, ಔಷಧಿಗಳನ್ನು ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ತಾಂತ್ರಿಕ ಸಂಯೋಜಕರಾದ ಶಿವಾನಂದ ಹಂಚಿನಾಳ, ತಾಲ್ಲೂಕು ಮಾಹಿತಿ,ಶಿಕ್ಷಣ ಹಾಗೂ ಸಂವಹನ ಸಂಯೋಜಕ ದಸ್ತಗೀರ್ ಗುಡಿಹಾಳ, ಐಸಿಟಿಸಿ ಆಪ್ತ ಸಮಲೋಚಕ ಮೌನೇಶ, ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದ ಅನುರಾಧ, ಆತ್ಮವತಿ ಹಿಟ್ನಾಳ, ರೂಪ ಹತ್ತರಕಿಹಾಳ, ರಫೀಕ್, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮಹಿಳೆಯರು ಭಾಗವಹಿಸಿದ್ದರು.