ಉತ್ತರಪ್ರಭ ಸುದ್ದಿ
ಆಲಮಟ್ಟಿ: ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಭವಿಷ್ಯ ರೂಪಗೊಳ್ಳುತ್ತದೆ ಎಂದು ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ನುಡಿದರು. ಸ್ಥಳೀಯ ಎಸ್.ವಿ.ವಿ.ಸಂಸ್ಥೆಯ ಎಂ.ಎಚ್.ಎಂ.ಪ.ಪೂ.ಕಾಲೇಜಿನಲ್ಲಿ ಈಚೆಗೆ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಸಮೂಹ ಕಲಿಕಾ ಸಮಯದಲ್ಲಿಯೇ ನೈತಿಕತೆಯ ಮೌಲ್ಯಾಧಾರಿತ ಗುಣಗಳನ್ನು ಮೈಗೂಡಿಸಿಕೊಂಡು ಜೀವನ ಪಥದಲ್ಲಿ ಯಶಸ್ವಿ ಕಾಣಲು ಮುಂದಾಗಬೇಕು ಎಂದರು.


ಗುರು-ಶಿಷ್ಯರೆಲ್ಲರು ರಾಧಾಕೃಷ್ಣನರವರ ಆದರ್ಶ ನೀತಿ, ತತ್ವ ಸಿದ್ದಾಂತಗಳನ್ನು ಪರಿಪಾಲಿಸಿದಾಗ ಇಂಥ ಆಚರಣೆಗೆ ಇನ್ನಷ್ಟು ಮಹತ್ವಪೂರ್ಣ ಮೆರಗು ಬರಲು ಸಾಧ್ಯ ಎಂದರು. ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಧುಮುಕಿ ಅವಿಸ್ಮರಣೀಯ ಕಾಯಕ ಗೈದಿದ್ದಾರೆ. ಅವರು ಸಮಾಜಸೇವಕರಾಗಿ ರಾಷ್ಟ್ರ ನಾಯಕರಾಗಿ ಮಿನುಗಿದ್ದಾರೆ.
ಇಂಥ ಅಮೂಲ್ಯ,ಅನರ್ಘ್ಯ ರತ್ನನ ನಾಮಾಂಕಿತದ ಈ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಬಳಗ ಹಾಗೂ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳೇ ನಿಜಕ್ಕೂಪುಣ್ಯವಂತರು. ದೊರೆತ ಈ ಪವಿತ್ರ ಸೌಭಾಗ್ಯ ಸದುಪಯೋಗ ಪಡಿಸಿಕೊಂಡು ಜೀವನ ಚರಿತ್ರೆ ಸಾರ್ಥಕತೆ ಪಡಿಸಿಕೊಳೋಣ ಎಂದರು. ಮಂಜಪ್ಪನವರ ಜೀವನ ಸಾಧನೆಯ ಯಶೋಗಾಥೆ ವಿದ್ಯಾರ್ಥಿಗಳು ಅರಿಯಬೇಕು. ಮಹಾನ ನಾಯಕನ ತತ್ವಾದರ್ಶದ ಚಿಂತನೆಗಳು ಸರ್ವಕಾಲಿಕ ಶ್ರೇಷ್ಠವಾಗಿವೆ ಎಂದು ಹೇಮಗಿರಿಮಠ ಅಭಿಪ್ರಾಯಿಸಿದರು.
ಉಪನ್ಯಾಸಕ ಪಿ.ವೈ. ಧನಶೆಟ್ಟಿ, ಎಮ್.ಎಸ್.ಸಜ್ಜನ, ವಿದ್ಯಾರ್ಥಿಗಳು ಆದರ್ಶರಾಗಿ ಬಾಳಿ ಬದುಕಬೇಕು. ಜನ್ಮ ನೀಡಿದ ತಂದೆ ತಾಯಿ,ಅಕ್ಷರಗಳ ಜ್ಞಾನ ಧಾರೆ ಎರೆಯುವ ಗುರುಗಳಿಗೆ, ಸಂಸ್ಕೃತಿ, ಸಂಪ್ರದಾಯದ ಮಾರ್ಗದಲ್ಲಿ ಕೊಂಡೊಯ್ಯಲು ಪ್ರೇರಿಸುವ ಹಿರಿಯರಿಗೆ ಗೌರವ ನೀಡಿದಾಗ ಮಾತ್ರ ಜೀವನ ಪಾವನವಾಗಬಲ್ಲದು ಎಂದರು. ಉಪನ್ಯಾಸಕ ಟಿ.ಬಿ.ಕರದಾನಿ, ಮಮತಾ ಕರೆಮುರಗಿ, ಸುನೇರಾಬಾನು ಜಾಲವಾದಿ ಮಾತನಾಡಿದರು.
ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿನಿಯರಾದ ಭಾಗ್ಯಶ್ರೀ ಮನಗೂಳಿ, ಸಾನಿಯಾ ಬ್ಯಾಹಟ್ಟಿ, ಅಕ್ಷತಾ ಕುಂಬಾರ ಅನಿಸಿಕೆಗಳನ್ನು ಹಂಚಿಕೊಂಡರು. ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಕರಣಿಕ ಡಿ.ಟಿ.ಸಿಂಗಾರಿ, ಜವಾನ ತಿಮ್ಮಣ್ಣ ದಾಸರ, ವಿದ್ಯಾರ್ಥಿ ಪ್ರತಿನಿಧಿ ಸಂಗಮೇಶ್ ವಕ್ರ, ಆರತಿ ಬಿರಾದಾರ ಇತರರಿದ್ದರು. ಅನಿತಾ ಕನಕಪ್ಪಗೋಳ, ಚಂದ್ರಕಲಾ ಬಾಗೇವಾಡಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಪೂಜಾ ರಾಠೋಡ ಸ್ವಾಗತಿಸಿದರು. ಸಾನಿಯಾ ಸುಂಕದ ನಿರೂಪಿಸಿದರು. ಅಕ್ಷತಾ ಕುಂಬಾರ ವಂದಿಸಿದರು.