ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಶಿಕ್ಷಕರ ಅಗತ್ಯ 17 ಸೇವೆಗಳನ್ನು ಆನ್ ಲೈನ್ ವ್ಯಾಪ್ತಿಗೆ ಬಂದಿದ್ದು, ಮಂಜೂರಾತಿಗಾಗಿ ಕಚೇರಿಗೆ ಅಲೆದಾಡಬೇಕಿಲ್ಲ. ಇದೂ ಸೇರಿದಂತೆ ಶಿಕ್ಷಕರ ನೇಮಕಾತಿ, ವರ್ಗಾವಣೆ ಸೇರಿ ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸಿರುವ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಬಿ.ಸಿ. ನಾಗೇಶರ ಕಾರ್ಯವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹರ್ಷದಿಂದ ಅಭಿನಂದಿಸಿದೆ. ಸಚಿವ ಬಿ.ಸಿ. ನಾಗೇಶ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅತ್ಯಂತ ಪ್ರಾಮಾಣಿಕವಾಗಿ ಸಂಯಮದಿಂದ ರಾಜ್ಯದ ಶಿಕ್ಷಕರ ಬೇಕು ಬೇಡಿಕೆಗಳನ್ನು ಹಾಗೂ ಸಮಸ್ಯೆಗಳನ್ನು ಆಲಿಸುತ್ತಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಗೆ ಹಾಗೂ ಶಿಕ್ಷಕರಿಗೆ ಸಂಬಂಧಿಸಿದ ಸುಮಾರು 17 ಪ್ರಮುಖ ಹಾಗೂ ಅತ್ಯಂತ ಅವಶ್ಯಕ ಸೇವೆಗಳಾದ ರಜಾ ಮಂಜೂರಾತಿ, ನಿಯಮ-32 ಮತ್ತು ನಿಯಮ-68ರ ಅಡಿಯಲ್ಲಿ ಪ್ರಭಾರ ಭತ್ಯೆ, ನಿವೇಶನ ಖರೀದಿ, ಕಟ್ಟಡ ನಿರ್ಮಾಣ, ವಾಹನಗಳ ಇತರೆ ವಸ್ತುಗಳ ಖರೀದಿಗೆ ಇಲಾಖಾ ಅನುಮತಿ, ಹೊಸ ಪಾಸ್ಪೋರ್ಟ್ ನವೀಕರಣಕ್ಕೆ ನಿರಾಕ್ಷೇಪಣಾ ಪತ್ರ ನೀಡುವಿಕೆ, ವೈಯಕ್ತಿಕ ವಿದೇಶ ಪ್ರವಾಸ ಕೈಗೊಳ್ಳಲು ನಿರಾಕ್ಷೇಪಣಾ ಪತ್ರ ನೀಡುವಿಕೆ, ಹೆಚ್ಚುವರಿ ಅರ್ಹತಾದಾಯಕ ಸೇವೆ ಸೇರ್ಪಡೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಅನುಮತಿ ನೀಡುವಿಕೆ, ಎಲ್.ಟಿ.ಸಿ, ಹೆಚ್.ಟಿ.ಸಿ.ಗಳ ಸೌಲಭ್ಯಗಳ ಮಂಜೂರಾತಿ, ಜಿ.ಪಿ.ಎಫ್. ಮುಂಗಡ,ಭಾಗಶಃ ವಾಪಸಾತಿ, ಹಬ್ಬದ ಮುಂಗಡ ಮಂಜೂರಾತಿ, ಸಣ್ಣ ಕುಟುಂಬ ಯೋಜನೆಯಡಿ ವಿಶೇಷ ಭತ್ಯೆ ಮಂಜೂರಾತಿ, ಅಂಗವಿಕಲರ ಭತ್ಯೆ ಮಂಜೂರಾತಿ, ಅಧಿಕಾರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ ಮತ್ತು ಪ್ರವಾಸ ದಿನಚರಿ ಅನುಮೋದನೆ, ಪ್ರಥಮ ವೇತನ ಪ್ರಮಾಣ ಪತ್ರ, ಉನ್ನತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖಾ ಅನುಮತಿ ಪತ್ರ, 10,15,20,25 ವರ್ಷಗಳ ಕಾಲಮಿತಿ, ಸ್ವಯಂ ಚಾಲಿತ ವೇತನ ಬಡ್ತಿ, ವಿಶೇಷ ವೇತನ ಬಡ್ತಿ ಮಂಜೂರಾತಿ, ಖಾಯಂ ಪೂರ್ವ ಅವಧಿ ಘೋಷಣೆ ಪ್ರಸ್ತಾವನೆ. ಹೀಗೆ ಈ 17 ಸೇವೆಗಳನ್ನು ಆನ್ ಲೈನ್ ಗೆ ಒಳಪಡಿಸಿ ಇಲಾಖೆ ಹಾಗೂ ಶಿಕ್ಷಕರ ಸೇವೆಗೆ ಸಚಿವರು ಹೊಸ ದಿಕ್ಸೂಚಿ ಬರೆದಿದ್ದಾರೆ ಎಂದರು.

ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಯನ್ನು ಕಳೆದ ವರ್ಷ ಸಚಿವ ಬಿ.ಸಿ. ನಾಗೇಶ್ ಸಚಿವರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ವರ್ಗಾವಣಾ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ಪ್ರಯುಕ್ತ ರಾಜ್ಯಾದ್ಯಂತ ಸುಮಾರು 23000 ಜನ ಶಿಕ್ಷಕರಿಗೆ ವಗಾ೯ವಣೆಯನ್ನು ಕೌನ್ಸಿಲಿಂಗ್ ಮೂಲಕ ಪಾರದರ್ಶಕವಾಗಿ ದೊರಕಿಸಿದ್ದಾರೆ. ಶಿಕ್ಷಕರು ತಮಗೆ ಬೇಕಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಆ ಎಲ್ಲಾ ಶಿಕ್ಷಕರಿಗೆ ಅನುಕೂಲವಾಗಿದೆ. ಸಚಿವ ಬಿ.ಸಿ. ನಾಗೇಶ್ ನೇತೃತ್ವದಲ್ಲಿ ಇಲಾಖೆಯಲ್ಲೇ ಪ್ರಥಮ ಬಾರಿಗೆ ರಾಜ್ಯಾದ್ಯಂತ ಏಕರೂಪವಾಗಿ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಬಡ್ತಿ ನೀಡಬೇಕೆಂಬ ಸಂಘಟನೆ ಬೇಡಿಕೆಗೆ ಸ್ಪಂದಿಸಿದ ಸಚಿವರು ಏಕರೂಪದ ವೇಳಾಪಟ್ಟಿಯನ್ನು ಹೊರಡಿಸಿದರು. ಇದರ ಪ್ರಯುಕ್ತ ರಾಜ್ಯಾದ್ಯಂತ 5000 ಜನ ಶಿಕ್ಷಕರು ಮುಖ್ಯ ಗುರುಗಳಾಗಿ ಬಡ್ತಿ ಹೊಂದಿದ್ದು ಅವರ ಪ್ರಮಾಣಿಕತೆ ಮತ್ತು ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿರುವ 80000ಕ್ಕೂ ಹೆಚ್ಚು ಪದವಿಯನ್ನು ಪೂರೈಸಿರುವ ಸೇವಾ ನಿರತ ಶಿಕ್ಷಕರಿಗೆ ರಾಜ್ಯದ 78 ಇಲಾಖೆಗಳಲ್ಲಿ ಇಲ್ಲದ ಬಡ್ತಿಗೆ ನಿಗದಿಪಡಿಸಿದ ಪರೀಕ್ಷೆಯನ್ನು ರದ್ದುಗೊಳಿಸಿ ಬಡ್ತಿ ಪ್ರಮಾಣವನ್ನು 25% ರಿಂದ 40% ಕ್ಕೆ ಹೆಚ್ಚಿಸಿ ಆದೇಶಿಸಿದ ಶಿಕ್ಷಣ ಸಚಿವರ ಅತ್ಯಂತ ದಿಟ್ಟ ನಿಧಾ೯ರವನ್ನು ರಾಜ್ಯದ ಶಿಕ್ಷಕರ ಸಂಘಟನೆ ತುಂಬು ಹೃದಯದಿಂದ ಅಭಿನಂದಿಸುತ್ತಾ, ಇದರ ಪ್ರಯುಕ್ತ ಸುಮಾರು 25000 ಜನ ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದರು. ಸರ್ವ ಶಿಕ್ಷಣ ಅಭಿಯಾನದ ಶಿಕ್ಷಕರಿಗೆ ವೇತನ ಪಾವತಿಯಲ್ಲಿ ಆಗುತ್ತಿರುವ ವಿಳಂಬತೆಯ ಬಗ್ಗೆ ಕ್ರಮ ಕೈಗೊಂಡು ಸುಮಾರು 35000 ಜನ ಶಿಕ್ಷಕರು ಅನುಭವಿಸುತ್ತಿದ್ದ ನಿರಂತರ ನೋವಿಗೆ ಸ್ಪಂದಿಸಿದ್ದಾರೆ. ಶಿಕ್ಷಕರ ದಿನಾಚರಣೆಯ ಆಚರಣೆಗೆ ನೀಡುತ್ತಿರುವ ಅನುದಾನವನ್ನು ತಾಲ್ಲೂಕು ಹಂತದಲ್ಲಿ 10000 ದಿಂದ 20000 ರೂಪಾಯಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಆಚರಣೆಗಾಗಿ 15000 ದಿಂದ 30000 ರೂಪಾಯಿಗಳಿಗೆ ಅನುದಾನವನ್ನು ಹೆಚ್ಚಿಸಿದ್ದಾರೆ.

ತಾಲ್ಲೂಕು ಕೇಂದ್ರದಲ್ಲಿ ಗುರುಭವನಗಳ ನಿಮಾ೯ಣಕ್ಕೆ 50 ಲಕ್ಷ ರೂಪಾಯಿಗಳು ಹಾಗೂ ಜಿಲ್ಲಾ ಕೇಂದ್ರದಲ್ಲಿ ಗುರುಭವನಕ್ಕೆ 1 ಕೋಟಿ ರೂಪಾಯಿಗಳನ್ನು ನೀಡುವಂತೆ ಪರಿಷ್ಕೃತ ತೀರ್ಮಾನ ಕೈಗೊಂಡಿದ್ದು, ಶಿಕ್ಷಕರ ಪರ ನಿಲುವು ಆಗಿದೆ. ಮುಖ್ಯ ಗುರುಗಳಿಗೆ ಪ್ರಭಾರ ಭತ್ಯೆ ನೀಡುವಂತೆ ಆದೇಶ ಹೊರಡಿಸುವುದರ ಮೂಲಕ ಎಲ್ಲ ಶಾಲೆಗಳಲ್ಲಿ ಶೈಕ್ಷಣಿಕ ನಾಯಕತ್ವ ಒದಗಿಸಿಕೊಡುವುದರ ಮೂಲಕ ಶಿಕ್ಷಕರಿಗೆ ನ್ಯಾಯ ಒದಗಿಸಿದ್ದಾರೆ ಎಂದು ಶಿಕ್ಷಣ ಸಚಿವರ ನಿಲುವನ್ನು ಮುಕ್ತವಾಗಿ ಶ್ಲಾಘಿಸಿದರು. ರಾಜ್ಯದ ಕೋವಿಡ್ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ವಿದ್ಯಾಗಮ ಹಾಗೂ ಇತರೆ ಕೆಲಸಗಳಿಗೆ ನಿಯೋಜಿಸಿದ್ದ ಶಿಕ್ಷಕರುಗಳಿಗೆ ಗಳಿಕೆ ರಜೆ ನೀಡಿದ್ದಾರೆ.

ಇಡೀ ದೇಶದಲ್ಲೇ ಮಾದರಿಯಾಗುವಂತೆ ಕೋವಿಡ್ ನಿಂದ ಮಕ್ಕಳ ಕಲಿಕೆಯಲ್ಲಿ ಆಗಿರುವ ವ್ಯತ್ಯಾಸವನ್ನು ಸರಿದೂಗಿಸಲು ಪ್ರತಿ ವರ್ಷಕ್ಕಿಂತ ಈ ವರ್ಷ 15 ದಿನಗಳ ಮೊದಲೇ ಇಡೀ ಶಿಕ್ಷಣ ಇಲಾಖೆಗೆ ಶಿಕ್ಷಕರನ್ನು, ಮಕ್ಕಳನ್ನು ಬರುವಂತೆ ಪ್ರೇರೇಪಿಸಿ ಕಲಿಕಾ ಚೇತರಿಕೆಯ ಮೂಲಕ ದೇಶಕ್ಕೆ ಮಾದರಿಯಾಗಿರುವ ಕಲಿಕಾ ಚಟುವಟಿಕೆಯನ್ನು ರೂಪಿಸಿದ್ದು, ಈ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಕೇಂದ್ರ ಸರಕಾರವು ಅಭಿನಂದನೆ ಸಲ್ಲಿಸಿ, ಬೇರೆ ರಾಜ್ಯಗಳಲ್ಲಿ ಅದನ್ನು ಜಾರಿಗೊಳಿಸುವ ತೀಮಾ೯ನ ಮಾಡಿರುವುದು ಇಡೀ ಶಿಕ್ಷಣ ಇಲಾಖೆಗೆ ಸಲ್ಲುವ ಗೌರವವಾಗಿದೆ. ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಶಿಕ್ಷಕರ ಸ್ನೇಹಿ ವರ್ಗಾವಣೆಯನ್ನು ಬರುವ ಅಧಿವೇಶನದಲ್ಲಿ ಶಿಕ್ಷಕರ ವಗಾ೯ವಣೆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಶಿಕ್ಷಕರ ಬಹುತೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇಲಾಖೆಯ ಇತಿಹಾಸದಲ್ಲೇ ಶಾಲಾ ಪ್ರಾರಂಭದಲ್ಲೇ 35000ಕ್ಕೂ ಹೆಚ್ಚು ಅತಿಥಿ ಶಿಕ್ಷಕರನ್ನು ನಿಯೋಜಿಸಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡಿರುವುದು ಶಿಕ್ಷಣ ಸಚಿವರ ದೂರದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ.

ಶಿಕ್ಷಕರು ಪಡೆಯುವ ವೇತನವನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗಾಗಿ ಪಾವತಿಸಬೇಕೆಂದು ಸ್ಪಷ್ಟ ನಿದೇ೯ಶನವನ್ನು ಹಾಗೂ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಾ, ಅವರು ಪಡೆಯುವ ವೇತನದ ಸಂದೇಶವನ್ನು ಅವರ ಮೊಬೈಲ್ ಗಳಿಗೆ ಬರುವಂತೆ ಕ್ರಮವಹಿಸಿದ್ದಾರೆ. ದೂರದ ಊರುಗಳಿಂದ ಬೆಂಗಳೂರಿಗೆ ಬರುವ ಶಿಕ್ಷಕರಿಗೆ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಲು ಇರುವ ಶಿಕ್ಷಕರ ಸದನದಲ್ಲಿ ಶಿಕ್ಷಕರಿಗೆ ಕಡಿಮೆ ವೆಚ್ಚದಲ್ಲಿ ಕೊಠಡಿಗಳ ಸೌಲಭ್ಯ ಹಾಗೂ ಅದರ ಸಂಪೂರ್ಣ ದುರಸ್ಥಿ ಮತ್ತು ನವೀಕರಣಕ್ಕಾಗಿ ಅಂದಾಜು 3.50 ಕೋಟಿ ರೂಪಾಯಿಗಳಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.

ಶಿಕ್ಷಕರ ವೈದ್ಯಕೀಯ ವೆಚ್ಚಗಳ ಮರುಪಾವತಿಗಾಗಿ ಸುಮಾರು 75 ಕೋಟಿಗಳ ಬಿಡುಗಡೆಗೆ ಕ್ರಮ ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು 8000 ಶಾಲಾ ಕೊಠಡಿಗಳ ನಿಮಾ೯ಣಕ್ಕೆ ಅನುದಾನ ಬಿಡುಗಡೆಗೊಳಿಸಿರುವುದು ಸರಕಾರಿ ಶಾಲೆಗಳ ಬಗ್ಗೆ ಇರುವ ಸಚಿವರ ಬದ್ಧತೆ ತೋರಿಸಿಕೊಡುತ್ತದೆ. 15000 ಶಾಲಾ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿಯೂ ಅಮೂಲಾಗ್ರ ಬದಲಾವಣೆ ಮಾಡಿ ಆಯ್ಕೆ ಪ್ರಕ್ರಿಯೆ ಜಾರಿಗೊಳಿಸುತ್ತಿರುವುದು ಇದು ಅತ್ಯಂತ ಶಿಕ್ಷಣ ಸ್ನೇಹಿ ನಿಧಾ೯ರವಾಗಿದೆ ಎಂದು ಶಂಭುಲಿಂಗನಗೌಡ ಪಾಟೀಲ ಹಾಗೂ ಚಂದ್ರಶೇಖರ ನುಗ್ಗಲಿ ತಿಳಿಸಿದರು.

ಒಟ್ಟಾರೆಯಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಬಿ.ಸಿ.ನಾಗೇಶ್ ರವರು ಅತ್ಯಂತ ಸರಳ ಮತ್ತು ಸಜ್ಜನ ಸಚಿವರು ಹಾಗೂ ಅಷ್ಟೇ ಪ್ರಾಮಾಣಿಕ ಸಚಿವರಾಗಿದ್ದು, ಇಡೀ ಶಿಕ್ಷಣ ಸಚಿವರ ತಂಡ ಈ ರಾಜ್ಯದ ಸರಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಗುಣಾತ್ಮಕ ಶಿಕ್ಷಣಕ್ಕಾಗಿ ಈ ರಾಜ್ಯದ ಶಿಕ್ಷಕರ ಅಭಿವೃದ್ಧಿಗಾಗಿ ಹಾಗೂ ಸಮಸ್ಯೆಗಳ ಈಡೇಡಿಕೆಗಾಗಿ ಅತ್ಯಂತ ಪ್ರಮಾಣಿಕವಾಗಿ ಸ್ಪಂದಿಸುತ್ತಿದ್ದಾರೆ. ಜೊತೆಗೆ ಕಛೇರಿಗಳಲ್ಲಿ ತಾಲ್ಲೂಕು ಹಂತದಿಂದ ರಾಜ್ಯ ಹಂತದವರೆಗೆ ಆನ್ಲೈನ್ ವ್ಯವಸ್ಥೆಯನ್ನು ತಂದು ಇಡೀ ಶಿಕ್ಷಣ ಇಲಾಖೆಗೆ ಡಿಜಿಟಲ್ ಸ್ಪರ್ಶ ನೀಡಿದ ಸಚಿವರ ಪ್ರಾಮಾಣಿಕ ಸೇವೆಗೆ ಕೆಲವು ವ್ಯಕ್ತಿಗಳು ಇತ್ತೀಚೆಗೆ ದಕ್ಕೆ ತರುತ್ತಿದ್ದು, ಅಂತಹ ಘಟನೆಗಳು ಸತ್ಯಕ್ಕೆ ದೂರವಾಗಿದ್ದು, ಸಚಿವರು ಹಾಗೂ ಸಚಿವರ ತಂಡ ಅತ್ಯಂತ ಪ್ರಾಮಾಣಿಕವಾಗಿದ್ದು, ಕೆಳಹಂತದಲ್ಲಿ ಜರುಗುವ ಲೋಪದೋಷಗಳನ್ನು ಕೂಡ ಸಚಿವರು ಗುರುತಿಸಿ ಅವುಗಳನ್ನು ಸರಿಪಡಿಸಲು ಕ್ರಮವಹಿಸುತ್ತಿದ್ದಾರೆ.

ಇಲಾಖಾ ಅಭಿವೃದ್ಧಿ ಕಾರ್ಯಕ್ಕೆ ಇಡೀ ಇಲಾಖೆ, ಶಿಕ್ಷಕರು, ಮಕ್ಕಳು, ಸಂಘಟನೆಗಳು, ಪಾಲಕರು-ಪೋಷಕರು, ಅಧಿಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಿ.ಸಿ. ನಾಗೇಶ್ ರವರ ನಾಯಕತ್ವದಲ್ಲಿ ಶಿಕ್ಷಣ ಇಲಾಖೆಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಒಟ್ಟಾರೆಯಾಗಿ ಈ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ ಶಿಕ್ಷಣ ಸಚಿವರು, ಪ್ರಧಾನ ಕಾರ್ಯದಶಿ೯ಗಳು, ಆಯುಕ್ತರು ಸ್ಪಂದಿಸುತ್ತಿದ್ದು, ಶೇ 25 ಖಾಲಿ ವಗಾ೯ವಣೆ ಇಲ್ಲ ಎಂಬ ಅಂಶ ಹೊರತುಪಡಿಸಿ ಇನ್ನುಳಿದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿದ್ದು, ಅವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ತಾವು ಅಭಿನಂದನೆ ಸಲ್ಲಿಸುತ್ತಿರುವದಾಗಿ ತಿಳಿಸಿದರು. ವರ್ಗಾವಣೆಯ ವಿಷಯದಲ್ಲಿಯೂ ಇನ್ನಷ್ಟು ಪ್ರಯತ್ನ ಮುಂದುವರೆಸಲಾಗುತ್ತದೆ ಎಂದು ಶಂಭುಲಿಂಗನಗೌಡ ಪಾಟೀಲ ಹಾಗೂ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಐರನ್ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಉತ್ತರಪ್ರಭ ಪಾವಗಡ: ತುಮಕೂರು ಜಿಲ್ಲೆಯ ಗಡಿ ಪ್ರದೇಶವಾದ ಪಾವಗಡ ತಾಲ್ಲೂಕಿನ ತಮ್ಮ ಸ್ವ ಗ್ರಾಮವಾದ ಮಂಗಳವಾಡ…

ದಿಂಗಾಲೇಶ್ವರ ಶ್ರೀಗಳ ಹೇಳಿಕೆ: ಅಭಿನವ ಡಾ.ಅನ್ನದಾನ ಮಹಾಸ್ವಾಮಿಗಳ ಮೇಲಿನ ಭಕ್ತರ ಪ್ರೀತಿಗೆ ಬೆಲೆ ಕಟ್ಟಲಾಗದು

ಉಪಕಾರ ಸ್ಮರಣಯೇ ಜನ್ಮದಿನವಾಗಿರುತ್ತದೆ. ಅಭಿನವ ಡಾ.ಅನ್ನದಾನ ಮಹಾಸ್ವಾಮಿಗಳ ಮೇಲಿನ ಭಕ್ತರ ಪ್ರೀತಿಗೆ ಬೆಲೆಯನ್ನು ಕಟ್ಟುವುದು ಅಸಾಧ್ಯವಾದ ಮಾತಾಗಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.