ಹೊಸದೆಹಲಿ: ಭಾರತ ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಗರಿಷ್ಠ ಮಟ್ಟದ ತೆರಿಗೆ ವಿಧಿಸಿದ ರಾಷ್ಟ್ರವಾಗಿದೆ. ದೇಶದಲ್ಲಿ ಶೇ. 69ರಷ್ಟು ತೆರಿಗೆ ವಿಧಿಸಲಾಗಿದೆ. ಇಟಲಿ ಎರಡನೇ ಸ್ಥಾನದಲ್ಲಿದ್ದು ಅಲ್ಲಿ ಶೇ. 64ರಷ್ಟು ತೆರಿಗೆ ವಿಧಿಸಲಾಗಿದೆ. ಪೆಟ್ರೋಲ್ ಮೇಲೆ ರೂ.10, ಡೀಸೆಲ್ ಮೇಲೆ ರೂ.13 ಅಬಕಾರಿ ಸುಂಕ ಮತ್ತು ರಸ್ತೆ ಸೆಸ್ ಅನ್ನು ಕೇಂದ್ರ ಸರ್ಕಾರ ಬುಧವಾರ ವಿಧಿಸಿದ್ದು, ಈ ಬಳಿಕ ಇಂಧನದ ಮೇಲಿನ ತೆರಿಗೆ ಶೇ. 69ಕ್ಕೆ ಏರಿದಂತಾಗಿದೆ.
ಅಬಕಾರಿ ಸುಂಕ ಏರಿಕೆಯಿಂದಾಗಿ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ರೂ.1.6 ಲಕ್ಷ ಕೋಟಿ ಹಣ ಹರಿದು ಬರಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪಾತಾಳಕ್ಕೆ ಕುಸಿದಿದ್ದರೂ ಇದರ ಲಾಭವನ್ನು ಸರ್ಕಾರವು ಗ್ರಾಹಕರಿಗೆ ನೀಡುತ್ತಿಲ್ಲ. ಅಬಕಾರಿ ಸುಂಕ ಹೆಚ್ಚಳವನ್ನು ಈ ಲಾಭದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.
ಕೇಂದ್ರ ಅಬಕಾರಿ ಸುಂಕ ಹೆಚ್ಚಿಸಿದ ಬೆನ್ನಲ್ಲಿಯೇ ರಾಜ್ಯಗಳೂ ವ್ಯಾಟ್ ಹೆಚ್ಚಿಸುತ್ತಿವೆ. ದೆಹಲಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇ. 27 ರಿಂದ 30ಕ್ಕೆ, ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ. 16.75ರಿಂದ 30ಕ್ಕೆ ಏರಿಸಿದೆ. ಉತ್ತರ ಪ್ರದೇಶ ಸರ್ಕಾರವು ಪೆಟ್ರೋಲ್ ದರವನ್ನು 2 ರೂ. ಮತ್ತು ಡೀಸೆಲ್ ದರವನ್ನು 1 ರೂ. ಹೆಚ್ಚಿಸಲು ಬುಧವಾರ ಅನುಮತಿ ನೀಡಿದೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಸದ್ಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಷ್ಟ ಅನುಭವಿಸುತ್ತಿವೆ. ಸದ್ಯ ತಮ್ಮ ಆದಾ ಗಳಿಕೆ ಇಂಧನವನ್ನೇ ಅವಲಂಬಿಸಿವೆ ಎಂಬಂತಾಗಿದೆ.