ಉತ್ತರಪ್ರಭ ಸುದ್ದಿ
ಆಲಮಟ್ಟಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡಿರುವ ಸೂರ್ಯಕಾಂತಿ ಬೆಳೆ ಹುಲುಸಾಗಿ ಬೆಳೆದು ನಿಂತಿದೆ. ಹಚ್ಚು ಹಸಿರಾಗಿ ಮೈದೇಳಿ ನಳನಳಿಸುತ್ತಿದ್ದ ಬೆಳೆಯನ್ನು ಕಂಡು ರೈತರ ಮೊಗದಲ್ಲಿ ಸೂರ್ಯಕಾಂತಿ, ಹೆಸರು ಪರಿಮಳ ಮೊಳಕೆಯೊಡೆದಿತ್ತು. ಇನ್ನೇನು ಫಸಲು ಬಂಪರ ನಿರೀಕ್ಷೆಯಲ್ಲಿದ್ದ ರೈತರಿಗೆ ಕೋರಿ ಹುಳ ಕೀಟಬಾಧೆ ಈಗ ಶಾಕ್ ನೀಡಿದೆ. ಹುಳ ಭೀಕರ ಕೊರೆತದ ಮೊರತಕ್ಕೆ ಅನ್ನದಾತರು ಆಘಾತಕ್ಕೊಳಗಾಗಿದ್ದಾರೆ. ದಿಕ್ಕೂ ತೋಚದೆ ನಲುಗುತ್ತಿದ್ದಾರೆ.

ಈ ಭಾಗದಲ್ಲಿ ಬಿತ್ತನೆಗೊಂಡಿರುವ ಸೂರ್ಯಕಾಂತಿ, ಹೆಸರು ಇತರೆ ವಿವಿಧ ಬೆಳೆಗಳಿಗೆ ವಿವಿಧ ಹುಳಗಳು ಲಗ್ಗೆ ಇಟ್ಟು ಅಟ್ಟಹಾಸ ಮೆರೆಯುತ್ತಿವೆ. ಬೆಳೆಗಳಿಗೆ ಹಲಬಗೆಯ ರೋಗಗಳು ಅಂಟಿಕೊAಡಿವೆ. ಅವುಗಳ ನಿಯಂತ್ರಣಕ್ಕೆ ರೈತರು ಹರಸಾಹಸ ಪಡುತ್ತಿದ್ದಾರೆ. ಆಲಮಟ್ಟಿ ವ್ಯಾಪ್ತಿಯಲ್ಲಿನ ಅರಳದಿನ್ನಿ ಸೇರಿದಂತೆ ವಿವಿಧೆಡೆಯ ಜಮೀನಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆಗಳು ಬಹುತೇಕ ಸಂಪೂರ್ಣ ಕೋರಿ ಹುಳಗಳ ಪಾಲಾಗಿವೆ. ಪ್ರತಿ ಗಿಡಗಳ ಎಲೆಗಳನ್ನು ತಿಂದು ಹಾಕುತ್ತಿರುವ ಕೋರಿ ಹುಳಗಳ ಹಾವಳಿ ವಿಪರೀತವಾಗಿದೆ. ದಿನೆದಿನೆ ವ್ಯಾಪಕ ಸಂಖ್ಯೆಯಲ್ಲಿ ಅವು ವೃದ್ಧಿಯಾಗುತ್ತಿವೆ. ಪ್ರತಿ ಎಲೆಗಳಿಗೆ ನೂರಾರು ಸಂಖ್ಯೆಯಲ್ಲಿ ಹುಳಗಳು ಆವರಿಸಿಕೊಂಡಿವೆ. ಎಲೆಗಳ ಮೇಲೆ ಹುಳಗಳ ಹಿಂಡೇ ಗೋಚರಿಸುತ್ತಿವೆ. ಗಿಡ,ಎಲೆಗಳ ಸತ್ವವನ್ನು ನುಂಗಿ ಹಾಕಿವೆ. ಬೆಳೆಗಳು ಇನ್ನಿಲ್ಲದಂತೆ ಮಾಡುತ್ತಿವೆ. ಎಲೆಗಳ ಆಕಾರ ಆಸ್ತಿಪಂಜರ ಸ್ವರೂಪಕ್ಕೆ ಹೊರಳಿಸಿವೆ. ಸೂರ್ಯಕಾಂತಿ ಬೆಳೆ ದುಸ್ಥಿತಿಯಲ್ಲಿ ಕೊಂಡೊಯ್ದಿವೆ. ಔಷಧೀಯ ಸಿಂಪಡಣೆ ಮಾಡಿದಾಗ್ಯೂ ಹುಳ ನಾಶವಾಗುತ್ತಿಲ್ಲ.ಬದಲಿಗೆ ಬೆಳೆ ನಾಶವಾಗುತ್ತಿದೆ. ಈ ಬೆಳೆಗಳು ಭಾಗಶಃ ರೈತರಿಗೆ ಸಿಗದು. ಕೈಗೆಟುಕುವದು ಕನಸಿನ ಮಾತಾಗಿದೆ. ಇಷ್ಟು ದಿನಗಳಕಾಲ ಮಾಡಿದ ಔಷಧೋಪಚಾರ ಎಲ್ಲವೂ ವ್ಯರ್ಥವಾಗಿ ಹೋಗುವ ಲಕ್ಷಣಗಳು ಸ್ಪಷ್ಟ ಕಾಣುತ್ತಿವೆ. ಇದರಿಂದ ರೈತರು ಕಂಗಾಲಾಗಿ ಕೈಚೆಲ್ಲಿ ಸೂರ್ಯನತ್ತ ಮುಖಮಾಡಿ ನಿರಾಸೆಯಿಂದ ಕುಳಿತುಕೊಳ್ಳುವಂಥ ಪರಸ್ಥಿತಿ ಎದುರಾಗಿದೆ. ಇಲ್ಲಿ ರೈತರ ಗೋಳು ಯಾರು ಕೇಳುವರಿಲ್ಲದಂತಾಗಿದೆ.
ಕೋರಿ ಹುಳ ಕಾಟಕ್ಕೆ ಇಡೀ ಬೆಳೆ ನೆಲಸಮಗೊಳ್ಳುತ್ತಿದೆ. ಇದರಿಂದ ರೈತ ನೆಲೆ ಕಾಣದಂತಾಗಿದೆ. ಸಾಲ ಸೊಲ ಮಾಡಿ ರೈತರಿಲ್ಲಿ ಸೂರ್ಯಕಾಂತಿ, ಹೆಸರು ಇತರೆ ಬೆಳೆ ಬಿತ್ತಿದ್ದಾರೆ. ಆದರೆ ಅವೆಲ್ಲವೂ ಈಗ ಹುಳಬಾಧೆಗೆ ಆಹುತಿಯಾಗುತ್ತಿವೆ. ಕೃಷ್ಣಾ ನದಿಯ ದಂಡೆಯಲ್ಲಿನ ಅರಳದಿನ್ನಿಯ ಜಮೀನುಗಳಲ್ಲಿ ಕೋರಿ ಹುಳಗಳು ನಿರೀಕ್ಷೆಗೂ ಮೀರಿ ನುಸುಳಿ ಬೆಳೆ ನಷ್ಟ ಮಾಡುತ್ತಿವೆ. ಅರಳದಿನ್ನಿಯ ಹುಚ್ಚಪ್ಪ ವಾಲಿಕಾರ, ಲಾಲಸಾಬ ಸಿಂಧೆ, ಮಾಂತೇಶ ಹಿರೇಮಠ, ಅಲಿಸಾಬ್ ನದಾಫ್ ಸೇರಿದಂತೆ ಇನ್ನೂ ಹಲ ರೈತರ ಜಮೀನಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆಗಳು ಕೋರಿ ಹುಳಗಳಿಗೆ ಪೂರ್ಣ ಆಹಾರವಾಗಿದ್ದು ರೈತರು ತತ್ತರಿಸಿದ್ದಾರೆ. ಅವರ ಗೋಳಾಟ ಹೇಳತೀರದು.
ಒಂದು ಎಕರೆ ಜಮೀನಗೆ 20 ರಿಂದ 35 ಸಾವಿರ ರೂ. ಖರ್ಚು ವೆಚ್ಚ ಮಾಡಿ ಬೆಳೆ ಬೆಳೆದಿರುವ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಸಹಾಯಕ್ಕೆ ಸರಕಾರ ಮುಂದಾಗಬೇಕು. ಪರಿಹಾರ ಕಲ್ಪಿಸಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.