: ಗುಲಾಬಚಂದ ಜಾಧವ
ಆಲಮಟ್ಟಿ : ಶಿಕ್ಷಕರು ತಮ್ಮಲ್ಲಿನ ಅನುಭವದ ಪಾಠ ಕೌಶಲ್ಯ ಹದಗೊಳಿಸಿಕೊಂಡು ವಿದ್ಯಾರ್ಥಿಗಳಿಗೆ ಸನ್ಮಾರ್ಗದ ದಾರಿಯಲ್ಲಿ ಮುನ್ನಡೆಸಬೇಕು ಎಂದು ಗದುಗಿನ ತೋಂಟದ ಡಾ. ಸಿದ್ದರಾಮ ಸ್ವಾಮೀಜಿಯವರ ಹೇಳಿದರು.
ಇಲ್ಲಿನ ಎಸ್.ವಿ.ವಿ.ಸಂಸ್ಥೆಯ ಎಂ.ಎಚ್.ಎಂ.ಆಂಗ್ಲ,ಕನ್ನಡ ಮಾದ್ಯಮದ ಪ್ರಾಥಮಿಕ ಶಾಲೆ ಹಾಗು ಪ್ರೌಢಶಾಲೆ,ಕಾಲೇಜು ಮತ್ತು ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಗೆ ಆಕಸ್ಮಿಕ ಭೇಟಿ ನೀಡಿ ಮಾತನಾಡಿದ ಅವರು,ವಿದ್ಯಾರ್ಥಿಗಳಲ್ಲಿ ಸೃಜನಶೀಲ ಸಾಮಥ್ರ್ಯ ವೃದ್ಧಿಸಿ ಮೌಲ್ಯಾಧಾರಿತ ಜೀವನಕ್ಕೆ ಪ್ರೇರಿಪಿಸಬೇಕು. ಗುಣ ಮಟ್ಟದ ಶಿಕ್ಷಣ ನೀಡಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ತಮ್ಮ ತೋಂಟದಾರ್ಯ ಶ್ರೀ ಮಠ ಆಧ್ಯಾತ್ಮಿಕ ಕಾರ್ಯದ ಜೊತೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹದ ಕೈಂಕರ್ಯ ಹಲವಾರು ದಶಕಗಳಿಂದ ನಡೆಸುತ್ತಿದೆ. ಶಿಕ್ಷಣ ದಿಂದ ಉಜ್ವಲ ಭವಿಷ್ಯ ಸಾಧ್ಯ ಹೀಗಾಗಿ ಶಿಕ್ಷಣಕ್ಕೆ ಒತ್ತು ನೀಡಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚೆಚ್ಚು ತೆರೆಯಲಾಗಿದೆ. ಸಂಸ್ಥೆ ವತಿಯಿಂದ ಶಾಲಾ,ಕಾಲೇಜುಗಳ ಬ್ರಹತ್ ಸುಸಜ್ಜಿತ ಕಟ್ಟಡಗಳನ್ನು ನಿಮಿ೯ಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರಾಜ್ಯದ ವಿವಿಧೆಡೆ ತಮ್ಮ ಸಂಸ್ಥೆಯಿಂದ ನಡೆಯುತ್ತಿರುವ ಶಾಲಾ,ಕಾಲೇಜುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಶಿಕ್ಷಣ ಜ್ಞಾನಾರ್ಜನೆ ಪಡೆಯುತ್ತಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಷಣ್ಮುಖರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ, ಬಸವನ ಬಾಗೇವಾಡಿ ವಿರಕ್ತಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಎಸ್.ಬಿ.ಪಾಟೀಲ, ಎನ್.ಕೆ.ಕುಂಬಾರ, ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಎಚ್.ಎನ್.ಕೆಲೂರ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಎಂ.ಎಸ್.ಸಜ್ಜನ, ಪಿ.ವಾಯ್.ಧನಶೆಟ್ಡಿ, ಮಮತಾ ಕರೇಮುರಗಿ,ತನುಜಾ ಪೂಜಾರಿ, ಮಹಾಂತೇಶ ಚಳಮರದ, ಇಂದುಧರ ದಳವಾಯಿ, ಕಲಗೊಂಡ, ಭಾಂಡವಾಳಕರ್, ಮೇಟಿ, ಯು.ಎ.ಹಿರೇಮಠ, ಎಂ.ಎಚ್.ಬಳಬಟ್ಟಿ, ಜಿ.ಎಂ.ಹಿರೇಮಠ, ಶಾಂತೂ ತಡಸಿ, ಡಿ.ಟಿ.ಸಿಂಗಾರಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳೆಲ್ಲ ಉಪಸ್ಥಿತರಿದ್ದರು.
ಶ್ರೀಗಳವರಿಗೆ ಶಾಲಾ,ಕಾಲೇಜು ಮುಖ್ಯಸ್ಥರು ಶಾಲು ಹೊದಿಸಿ ಗೌರವಿಸಿದರು.