ಬೆಂಗಳೂರು: ಲಾಕ್ ಡೌನ್ ಬಗ್ಗೆ ಸರ್ಕಾರ ಈಗಾಗಲೇ ನೀಡಿರುವ ಮಾರ್ಗಸೂಚಿಗೆ ಕೆಲವೊಂದು ಅಂಶಗಳನ್ನು ಸೇರ್ಪಡಿಸಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ಹೊಸ ಆದೇಶದಂತೆ ದಿನಾಂಕ 05/07/2020 ಭಾನುವಾರದಿಂದ 02/08/2020 ರ ವರೆಗಿನ 4 ಭಾನುವಾರಗಳು ದಿನಪೂರ್ತಿ ಲಾಕ್‌ಡೌನ್ ಇರಲಿದೆ. ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜುಲೈ 10 ರಿಂದ ಆಗಸ್ಟ್ 08 ರವರೆಗೆ ಎಲ್ಲಾ ಶನಿವಾರಗಳು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಚೇರಿಗಳು, ಬೋರ್ಡುಗಳು ಹಾಗೂ ಕಾರ್ಪೊರೇಷನ್‌ಗಳು ಮುಚ್ಚಲು ಆದೇಶ ನೀಡಲಾಗಿದೆ. ತುರ್ತು ಮತ್ತು ಅಗತ್ಯ ಸೇವೆಗಳನ್ನು ನೀಡುವ ಸಂಸ್ಥೆಗಳು ಇದರಿಂದ ಹೊರತಾಗಿರುತ್ತದೆ.
ರಾಜ್ಯಾದ್ಯಂತ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ರ ವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕರ್ಫ್ಯೂ ಅವಧಿಯಲ್ಲಿ ಅನಗತ್ಯವಾಗಿ ತಿರುಗಾಡದಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

