ಉತ್ತರಪ್ರಭ
ವಿಜಯಪುರ: ಜೀವನದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಛಲ ಬಿಡದೇ ನಿರ್ವಹಿಸಿದಾಗ ಅಲ್ಲಿ ಯಶಸ್ವಿ ದೊರೆಯುತ್ತದೆ. ಆ ಕಾರಣ ವಿದ್ಯಾಭ್ಯಾಸದ ವ್ಯಾಮೋಹ ಹೆಚ್ಚಾಗಬೇಕು. ಉತ್ತಮ ಮಟ್ಟದ ಕಲಿಕೆಗೆ ಆಸಕ್ತಿ ತೋರಬೇಕು.ವಿದ್ಯಾ ಕಲಿಕೆಯ ಜ್ಞಾನ ಇಂದಿನ ಮಕ್ಕಳಿಗೆ ಅಗತ್ಯವಾಗಿದ್ದು ಪ್ರತಿ ಮಗು ಜಾಣ್ಮೆಯ ಚಾಕಚಕ್ಯತೆಯಿಂದ ನೈಪುಣ್ಯ ಹೊಂದಿ ಬದುಕಿನಲ್ಲಿ ಉನ್ನತಿ ಕಾಣಬೇಕು ಎಂದು ವಿಜಯಪುರ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಶ್ರೀಮತಿ ದ್ರಾಕ್ಷಾಯಣಿ ಚಾಳೀಕಾರ ಹೇಳಿದರು.

ನಗರದ ಅಪ್ಸರಾ ಥೇಟರ್ ಸಭಾ ಭವನದಲ್ಲಿ ಡಾ. ಅಶೋಕಕುಮಾರ ಜಾಧವ ಹಾಗು ಗುಲಾಬಚಂದ ಜಾಧವ ಸಹೋದರರು ತಮ್ಮ 22 ನೇ ವಿವಾಹ ವಾಷಿ೯ಕೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಓದು ಕಾಟಾಚಾರವಾಗಬಾರದು. ಶ್ರಮ, ನಿಷ್ಟೆ, ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಗೆಲುವು ಖಚಿತ. ಇವು ಯಶಸ್ವಿಯ ಮೂಲ ಮಂತ್ರ. ಯಶಸ್ಸು ಸಾಧಿಸಿದರೆ ಸಮಾಜ ಗೌರವಿಸುತ್ತದೆ. ಗೌರವಯುತ ಬದುಕು ನಿಮ್ಮದಾಗಬೇಕು. ಅರಿತು ನಡೆಯುವ ಭಾವ ತಾಳಬೇಕು. ನಿಮ್ಮ ಜವಾಬ್ದಾರಿ ನಿಮ್ಮದೇ ಹೆಗಲಿಗೆ ಎಂಬುದು ಮನಗಾಣಬೇಕು ಎಂದರು. ನಿಮ್ಮೊಳಗಿರುವ ಪ್ರತಿಭೆ,ಕೌಶಲ್ಯ ತಮ್ಮ ಸ್ವಸಾಮರ್ಥ್ಯದಿಂದ ಪ್ರಕಾಶಿಸಿಕೊಳ್ಳಬೇಕು. ಸಾಮಾಜಿಕ ಮೌಲ್ಯಗಳು ಚಿಕ್ಕವರಿದ್ದಾಗಲೇ ಮೊಳಕೆಯೊಡೆಯಬೇಕು. ಮಕ್ಕಳ ಮನದಲ್ಲಿ ಉತ್ಕಟ ಬದಲಾವಣೆವಾಗಬೇಕು. ಪರಿವರ್ತನೆ ದಾರಿಯಲ್ಲಿ ಯುವ ವಿದ್ಯಾರ್ಥಿಗಳು ಸಾಗಬೇಕು ಎಂದರು.
ಜಾಧವ ಸಹೋದರರು ತಮ್ಮ ಮದುವೆ ವಾಷಿ೯ಕೋತ್ಸವ ಇಲ್ಲಿ ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದು ಸಾಧಕರಿಗೆ ಸನ್ಮಾನಿಸಿ ಪ್ರೋತ್ಸಾಹಿಸಿರುವ ಕಾರ್ಯ ಶ್ಲಾಘನೀಯ. ಅವರಲ್ಲಿನ ಶಿಕ್ಷಣ ಪ್ರೀತಿ, ಕಳಕಳಿ ಎತ್ತಿ ತೋರುವಂತಿದೆ ಎಂದರು.

ಖ್ಯಾತ ವೈದ್ಯ ಡಾ.ಬಾಬು ರಾಜೇಂದ್ರ ನಾಯಕ ಮಾತನಾಡಿ, ವಿದ್ಯೆಯಿಂದಲೇ ಜೀವನ ರೂಪಗೊಳ್ಳುವುದು.ಓದಿಗೆ ಹೆಚ್ಚಿನ ಗಮನವಿರಲಿ, ಸಾಧಿಸುವ ಗುರಿ ಸ್ಪಷ್ಟತೆಯಿಂದ ಕೂಡಿರಲಿ. ಸನ್ಮಾರ್ಗದ ದಾರಿಯಿಂದ ಹೆತ್ತವರ ಹೆಸರು,ನಾಡಿನ ಕೀರ್ತಿ ತರಲಿ. ಉಜ್ವಲ ಭವಿಷ್ಯತ್ತಿನ ಚಿಂತೆ ತಲೆಯಲ್ಲಿ ಸುಳಿದಾಡುತ್ತಿರಲಿ. ಮಕ್ಕಳಿಗೆ ಅಧ್ಯಯನ ಶೋಭಿತ. ಆ ಗೀಳು ವೈಚಾರಿಕ ಮಾನವೀಯ ಮೌಲ್ಯದಿಂದ ಹೆಚ್ಚಾಗಲಿ. ವಿದ್ಯೆ ಸಿರಿಸಂಪತ್ತಿನ ಮುಂದೆ ಎಲ್ಲ ಸಂಪತ್ತು ನಗಣ್ಯ. ಸಕಾರಾತ್ಮಕ ಆಲೋಚನೆಯಿಂದ ಮನಸ್ಸು ಶುದ್ಧೀಕರಿಸಿಕೊಂಡು ಕಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಿ. ವೈದ್ಯಕೀಯ ಶಿಕ್ಷಣಾಸಕ್ತಿ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ವೈದ್ಯರಾಗಿ ಮಿನುಗಬೇಕು ಎಂದರು. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಒಳ್ಳೆಯ ಫಲಿತಾಂಶ ಜಿಲ್ಲೆಗೆ ತಂದಿದ್ದು ಸಂತಸ ಎಂದರು.
ಕನಾ೯ಟಕ ರಕ್ಷಣಾ ವೇದಿಕೆ ನಗರ ಅಧ್ಯಕ್ಷ ,ಸಂಪಾದಕ ಫಯಾಜ್ ಕಲಾದಗಿ, ಕಲಿಕಾ ಪ್ರಕ್ರಿಯೆ ನಿರಂತರವಾಗಿ ಸಾಗಿದರೆ ವ್ಯಕ್ತಿತ್ವ ಚಹರೆಗಳು ಶ್ರೀಮಂತಗೊಳ್ಳುವುದು.ಈ ಬಾರಿ ಮಕ್ಕಳ ಐತಿಹಾಸಿಕ ಸಾಧನೆಯಿಂದ ಜಿಲ್ಲೆಗೆ ಮೆರಗು ಬಂದಿದೆ. ಪ್ರಥಮ ಸ್ಥಾನದಲ್ಲಿ ಮಿನುಗಿದ್ದು ಹೆಮ್ಮೆ ಪಡುವ ವಿಷಯವಾಗಿದೆ. ಇದೇ ರೀತಿಯ ಸಾಧನೆ ಇಮ್ಮಡಿಗೊಳ್ಳುತ್ತಿರಲಿ. ಮಕ್ಕಳಿಗೆ ಪಾಲಕರು ಪ್ರೋತ್ಸಾಹದ ಪ್ರೋಟೀನ್ ನೀಡಿ ಸಾಧನೆಗೆ ಪ್ರೇರೇಪಿಸಬೇಕು. ಅಧ್ಯಯನಕ್ಕೆ ಪೂರಕ, ಸುಂದರ ವಾತಾವರಣ ಕಲ್ಪಿಸಿದಾಗ ಪ್ರತಿಫಲ ಲಭಿಸಲು ಸಾಧ್ಯ. ಮಕ್ಕಳ ಸಾಧನೆಗಳಿಗೆ ನಾವೆಲ್ಲರೂ ಕೊಂಡಿಯಾಗಿ ನಿಲ್ಲಬೇಕು ಎಂದರು. ಆ ದಿಸೆಯಲ್ಲಿ ಜಾಧವ ಬ್ರದರ್ಸ್ ರ ಸಾಮಾಜಿಕ ಸೇವಾ ಕಾರ್ಯಗಳು ಸ್ಪೂರ್ತಿಗಳಾಗಿವೆ ಎಂದರು.
ಪಿಡಿಓ ಸತ್ಯಕಾಮ ಕಟ್ಟಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗು ಸೂಕ್ತ ಮಾರ್ಗದರ್ಶನ ನೀಡುವುದು ಒಂದು ಪವಿತ್ರವಾದ ಕಾರ್ಯ. ಸೃಜನಶೀಲತೆಯಿಂದ ನಕ್ಷತ್ರಗಳಂತೆ ಮಕ್ಕಳು ಹೊಳೆಯಬೇಕು. ಸರಿಯಾದ ಕೋರ್ಸ್ ಆಯ್ಕೆಗೆ ಸಹಕರಿಸಬೇಕು. ಮಕ್ಕಳಲ್ಲೂ ವಿನಮ್ರತೆ, ವಿಧೇಯತೆ ಗುಣಗಳು ಅಂಕುರಗೊಳ್ಳಬೇಕು. ನೈತಿಕ ಬದ್ದತೆ, ಸಹಾನುಭೂತಿ ಗುಣಗಳಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಓದು, ಬರಹ ಹವ್ಯಾಸದ ಶಕ್ತಿಯಿಂದ ಅಕ್ಷರಲೋಕದ ವಿಸ್ಮಯದಲ್ಲಿ ಮಕ್ಕಳು ತಮ್ಮದೇ ಅದಂಥ ಹೆಜ್ಜೆ ಗುರುತುಗಳನ್ನು ಮೂಡಿಸಬೇಕು ಎಂದು ಹೇಳಿದ ಅವರು, ಜಾಧವ ಕುಟುಂಬ ಪರೋಪಕಾರಿ ಭಾವ ಹೊಂದಿದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ (ಶೇ.99.9) ಪಡೆದು ಸಾಧನೆ ಗೈದಿರುವ ಮಹಮ್ಮದ್ ಅಕಿಸ್ ಕೆಂಭಾವಿ, 618 ಅಂಕ ( ಶೇ.98.88) ಪಡೆದು ಸಾಧನೆ ಮಾಡಿರುವ ಸೃುಷ್ಟಿ ಜಾಧವ ಪ್ರತಿಭಾನ್ವಿತ ಮಕ್ಕಳಿಗೆ ಶಾಲು ಹೊದಿಸಿ ಹೃತ್ಪೂರ್ವಕ ಅಭಿನಂದನೆಗಳೊಂದಿಗೆ ಸತ್ಕರಿಸಲಾಯಿತು.
ಮಹಿಳಾ ವಿವಿ ಉಪನ್ಯಾಸಕ ಡಾ. ಗಂಗಶೆಟ್ಟಿ, ರಾಜ್ಯ ಮಹಿಳಾ ಕ್ರಿಕೆಟ್ ತಂಡದ ಆಟಗಾತಿ೯ ಅನುಶ್ರೀ ಸಮಗೊಂಡ, ಡಾ. ಬಿ.ಎಂ.ಕೊರಬು, ಡಾ.ಶ್ರೀಮಂತ ಚವ್ಹಾಣ, ಡಾ.ಚಂದ್ರಕಾಂತ, ಗ್ರಂಥಪಾಲಕ ಜಗದೀಶ ಪತಂಗೆ, ಚಿತ್ರಕಲಾವಿದ ಸೋಮಶೇಖರ್ ರಾಠೋಡ, ಡಾ. ವಿಜಯಲಕ್ಷ್ಮೀ ಬೆಳಗುಂಪಿ, ಡಾ. ಜಹೀದಾ ಮಕಾನದಾರ, ಡಾ. ಅಜರಾ ಪರವಿನ, ಅತಿಥಿ ಉಪನ್ಯಾಸಕಿ ವೀಣಾ ಜಾಧವ, ಡಾ. ಎಂ.ಆರ್.ಕೆಂಬಾವಿ, ಲಯನ್.ವಾಲು ಚವ್ಹಾಣ, ಮೀನುಗಾರಿಕೆ ಇಲಾಖೆಯ ಸಂತೋಷ ಜಾಧವ, ದಾಮೂ ಚವ್ಹಾಣ, ಮಾಜಿ ಪೋಲಿಸ್ ಅಧಿಕಾರಿ ಎ.ಎ.ಜಾಗೀರದಾರ ಇತರರಿದ್ದರು. ಡಾ .ಅಶೋಕಕುಮಾರ ಜಾಧವ ಭುವನೇಶ್ವರೀ, ಗುಲಾಬಚಂದ ಜಾಧವ ಸುನೀತಾ ದಂಪತಿಗಳ ಈ ವಿಶೇಷ ವಿವಾಹ ವಾಷಿ೯ಕೋತ್ಸವಕ್ಕೆ ಹಿತೈಸಿಗಳು ಶುಭ ಹಾರೈಸಿ ಅಭಿನಂದಿಸಿದರು.