ಉತ್ತರಪ್ರಭ
ಆಲಮಟ್ಟಿ: ರಾಜ್ಯಪಾಲ ಥಾವರ್ ಚೆಂದ ಗೆಹ್ಲೂಟ್ ಮಂಗಳವಾರ ಮುಸ್ಸಂಜೆ ಆಗಮನದ ಹಿನ್ನಲೆಯಲ್ಲಿ ಕೃಷ್ಣಾ ತೀರದ ಹಸಿರು ಐಸಿರಿಯ ಆಲಮಟ್ಟಿ ಸಂಪೂರ್ಣ ಖಾಕಿಪಡೆಗಳ ವಶವಾಗಿತ್ತು. ಎತ್ತ ನೋಡಿದರೂ ಪೋಲೀಸ್ ಕಾವಲು. ಹೆಜ್ಜೆ ಹೆಜ್ಜೆಗೂ ಖಾಕಿಪಡೆಗಳ ಕಣ್ಣಾವಲು ನೆಟ್ಟಿತ್ತು. ಪರಿಣಾಮ ಪ್ರವಾಸಿತಾಣ ಆಲಮಟ್ಟಿ ಮಂಗಳವಾರ ಬೆಳಿಗ್ಗೆಯಿಂದಲೇ ಪೂಲ್ ಟೈಟ್ ಸೆಕ್ಯೂರಿಟಿಯಲ್ಲಿತ್ತು. ಭಾರೀ ಭದ್ರತೆ ವ್ಯವಸ್ಥೆ ಒದಗಿಸಲಾಗಿದ್ದು ಪತ್ರಿಕಾ ಬಳಗದವರು ಸಹ ಪರದಾಡುವಂತಾಯಿತು. ಪ್ರವಾಸಿ ಮಂದಿರ ಸುತ್ತಲೂ ವ್ಯಾಪಕ ಭದ್ರತೆ ಕಲ್ಪಿಸಲಾಗಿತ್ತು. ಪೆಟ್ರೋಲ್ ಪಂಪ ಅಕ್ಕಪಕ್ಕ,ಉದ್ಯಾನವನಗಳ ಮುಂಭಾಗದ ರಸ್ತೆಗಳ ಮೇಲೆ ಪೋಲಿಸರು ತೀವ್ರ ನಿಗಾ ಇರಿಸಿದ್ದರು. ಇಂದು ರಾತ್ರಿ ಆಲಮಟ್ಟಿಯಲ್ಲಿ ರಾಜ್ಯಪಾಲರು ವಾಸ್ತವ್ಯ ಇದ್ದು ಬುಧವಾರ ಬೆಳಗ್ಗೆ ಕೂಡಲ ಸಂಗಮಕ್ಕೆ ತೆರಳಿ ಅಲ್ಲಿಂದ ಬಾಗಲಕೋಟೆ ತೋಟಗಾರಿಕಾ ವಿವಿಯ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಆ ನಿಮಿತ್ಯ ರಾಜ್ಯಪಾಲರ ಆಲಮಟ್ಟಿ ಆಗಮನದ ಹಿನ್ನೆಲೆಯಲ್ಲಿಂದು ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಎಂಟ್ರನ್ಸ್ ಫ್ಲಾಜಾವನ್ನು ಬೆಳಗ್ಗೆಯಿಂದ ಹಾಗೂ ರಾಕ್ ಗಾರ್ಡನ್ ಸೇರಿದಂತೆ ಎಲ್ಲ ಉದ್ಯಾನಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. ಉದ್ಯಾನದಲ್ಲಿನ ಹೊಟೇಲ್, ಮಿಲ್ಕ್ ಪಾರ್ಲರ್, ಕೂಲ್ಡ್ರೀಂಕ್ಸ್ ಅಂಗಡಿಗಳನ್ನು ಮಧ್ಯಾಹ್ನದಿಂದ ಬಂದ್ ಮಾಡಿಸಲಾಗಿತ್ತು.

ಅವಳಿ ಜಿಲ್ಲೆಯ ಎಸ್ಪಿಗಳು, ಎಎಸ್ಪಿಗಳು, ಒರ್ವ ಡಿವೈಎಸ್ಪಿ, ಮೂವರು ಸಿಪಿಐಗಳು, 9ಪಿಎಸೈಗಳು, 14ಎಎಸೈ, 35ಮುಖ್ಯಪೇದೆ, 76 ಪೇದೆ, 18 ಮಹಿಳಾ ಪೇದೆ ಸೇರಿ ಒಟ್ಟು 156 ಪೊಲೀಸ್ ಸಿಬ್ಬಂದಿ, ಎರಡು ಡಿಆರ್ ತುಕುಡಿ, ಒಂದು ಐಆರ್ ಬಿ ತುಕುಡಿ ನಿಯೋಜಿಸಲಾಗಿತ್ತು. ಜತೆಗೆ ಜಲಾಶಯ ಭದ್ರತೆಗೆ ನಿಯೋಜಿಸಿದ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಕೂಡ ಭದ್ರತೆ ಒದಗಿಸಿದ್ದರು.