ಉತ್ತರಪ್ರಭ
ಆಲಮಟ್ಟಿ: (ವಿಜಯಪುರ ಜಿಲ್ಲೆ) ಮೊಟ್ಟಮೊದಲ ಬಾರಿಗೆ ಬಯಲುನಾಡಿನ ಪ್ರಾಕೃತಿಕ ತಾಣದಲ್ಲಿ ರಾಜ್ಯದ ರಾಜ್ಯಪಾಲರ ದಿವ್ಯ ದರ್ಶನ ! ಅಭೂತಪೂರ್ವ ಹಸಿರೆಲೆಗಳ ವಯ್ಯಾರಕ್ಕೆ ಚಿಕಿತ ! ಕಗ್ಗತ್ತಲ್ಲೂ ಹೊಳಪಿನ ಸುಗಂಧ ಪರಿಮಳಯುತ ಸೊಗಸಿಗೆ ಅವರ ಮನ ಪುಳಕಿತ ! ಧರೆ ಮೇಲಿನ ಸ್ವರ್ಗದಂತಿರುವ ನಿಸರ್ಗ ಪರಿಸರದ ಸ್ವಾದ ಮನಸ್ಸಾರೆ ಸವಿದರು ರಾಜ್ಯದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ ಗೆಹ್ಲೂಟ್ ! ಪ್ರವಾಸಿ ತಾಣ ಖ್ಯಾತಿಯ ಆಲಮಟ್ಟಿಗೆ ಅವರು ಮಂಗಳವಾರ ಮುಸ್ಸಂಜೆ ಆಗಮಿಸಿದರು.
ಇಲ್ಲಿನ ಹಚ್ಚಹಸಿರಿನ ಅಂದಚೆಂದಕ್ಕೆ ಮನ ಸೋತರು ! ಹಸಿರು ಸಸ್ಯ ಪ್ರೇಮಾಂಕುರದಲ್ಲಿ ಮಿಂದೆದ್ದರು. ದಿಲ್ ಖುಷ್ ಮನ್ ಫಿದಾಗೊಂಡು ಸಂತಸ, ಉಲ್ಲಾಸಿತಭಾವದಿಂದ ಆನಂದಗೊಂಡರು! ಹಸಿರುತನಕ್ಕೆ ಮಾರು ಹೋದರು!.

ಮಂಗಳವಾರ ರಾತ್ರಿ 9 ಗಂಟೆಯ ಸುಮಾರು ಆಲಮಟ್ಟಿಯ ಸಂಗೀತ ಕಾರಂಜಿ, ಲೇಸರ್ ಫೌಂಟೇನ್, ತ್ರೀಡಿ ಪ್ರೊಜೆಕ್ಶನ್ ಮ್ಯಾಪಿಂಗ್ ವೀಕ್ಷಿಸಿ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ಯಾಕರ್ಷಕ ಮೊಘಲ್ ಉದ್ಯಾನದ ಸ್ಥಿರ ಕಾರಂಜಿಗಳು, ಲೇಸರ್ ಫೌಂಟೇನ್ ನ ಹಾಡುಗಳು, ಸಂಗೀತ ಕಾರಂಜಿಯ ಹಾಡುಗಳಿಗೆ ತಕ್ಕಂತೆ ನೃತ್ಯ ಮಾಡುವ ಕಾರಂಜಿಗಳ ಜಲರಸ ಕಾವ್ಯ ಗಾನಕ್ಕೆ ತಲೆದೂಗಿದರು.
ಹೆಚ್ಚು ಕಡಿಮೆ ಒಂದು ಕಿ.ಮೀ ಸರಾಗವಾಗಿ ನಡೆದೇ ಇವೆಲ್ಲ ರಂಗುರಂಗಿನ ಚಿತ್ತಾರವನ್ನು ತಮ್ಮ ನಯನದಲ್ಲಿ ಖುಷಿಯಿಂದ ಸೆರೆ ಹಿಡಿದು ಆಹ್ಲಾದಿಸಿದರು. ಸಮಾಧಾನ ಚಿತ್ತದಿಂದ ಆಲಮಟ್ಟಿ ಐಸಿರಿ ವೈಭವ ವೀಕ್ಷಿಸಿದ ರಾಜ್ಯಪಾಲರು ಹಸಿರು ಬೆಡಗಿಗೆ ಮನ ಸೋತು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸುಮಾರು ಒಂದೂವರೆ ಕಿ.ಮೀ ನಡೆದು ಪ್ರತಿ ಉದ್ಯಾನವನ್ನು ವೀಕ್ಷಿಸಿದರು.
ಉದ್ಯಾನದಲ್ಲಿ ನಳನಳಿಸುತ್ತಿದ್ದ ಹಸರೀಕರಣ ಸೊಬಗು, ನಾನಾ ಪುಷ್ಪಗಳ ಭಿನ್ನಾಣಗಳನ್ನೆಲ್ಲ ಕಣ್ತುಂಬಿಸಿಕೊಂಡು ಸಂತಸಗೊಂಡರು. ಕೊನೆಗೆ ಎಂಟ್ರನ್ಸ್ ಪ್ಲಾಜಾ ಅಳವಡಿಸಿರುವ ತ್ರೀಡಿ ಪ್ರೊಜೆಕ್ಶನ್ ಮ್ಯಾಪಿಂಗ್ ವೀಕ್ಷಿಸಿದರು. ಇಡೀ ಎಂಟ್ರನ್ಸ್ ಪ್ಲಾಜಾದ ಮೇಲೆ ತ್ರೀಡಿ ಚಿತ್ರಗಳು ಗಮನ ಸೆಳೆದು ಹೃನ್ಮನ ತಣಿಸಿದವು. ಲಿಮ್ಕಾ ದಾಖಲೆಯಾದ ಆಲಮಟ್ಟಿಯ ನಾಮಫಲಕದ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ರಾಜ್ಯಪಾಲರು ಪಡೆದರು.
ಇದಕ್ಕೂ ಮೊದಲು ಹುಬ್ಬಳ್ಳಿಯಿಂದ ರಸ್ತೆ ಮೂಲಕ ಆಲಮಟ್ಟಿಗೆ ಕೆಎಚ್‍ಟಿಡಿಸಿ ಐಬಿಗೆ ಬಂದ ರಾಜ್ಯಪಾಲರು ಜಲಾಶಯದ ಮೂಲಕ ಉದ್ಯಾನಕ್ಕೆ ಬಂದರು. ಜಲಾಶಯದಲ್ಲಿಯೂ ಕೆಲಹೊತ್ತು ನಿಂತು ಅಧಿಕಾರಿಗಳಿಂದ ಮಾಹಿತಿ ಪಡೆದರು. ರಾಜ್ಯಪಾಲರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಸಿಇಓ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ, ಬಾಗಲಕೋಟೆ ಜಿಲ್ಲಾಧಿಕಾರಿ ಸುನಿಲಕುಮಾರ, ಎಸ್‍ಪಿ ಲೋಕೇಶ ಜಗಲಾಸರ, ಭದ್ರತೆಯ ಮುಖ್ಯಸ್ಥ ಸಾಬು ಥಾಮಸ್, ಎಚ್. ಸುರೇಶ, ಡಿ. ಬಸವರಾಜ ಇತರರು ಇದ್ದರು.

ಭಾರಿ ಬಂದೋಬಸ್ತ:
ರಾಜ್ಯಪಾಲರ ಆಗಮನದ ಹಿನ್ನಲೆಯಲ್ಲಿ ಆಲಮಟ್ಟಿಯ ಎಲ್ಲಾ ಉದ್ಯಾನಗಳನ್ನು ಮಧ್ಯಾಹ್ನ 3 ಗಂಟೆಯಿಂದಲೇ ಬಂದ್ ಮಾಡಲಾಗಿತ್ತು.
ಎಸ್.ಪಿ. ಎಚ್.ಡಿ. ಆನಂದಕುಮಾರ ನೇತೃತೃತ್ವದಲ್ಲಿ, ಇಬ್ಬರು ಡಿವೈಎಸ್ ಪಿ, ಐವರು ಸಿಪಿಐ, 10 ಪಿಎಸ್ ಐ, 14 ಜನ ಎಎಸ್ ಐ, 35 ಜನ ಹೆಡ್ ಕಾನ್ಸ್ ಟೇಬಲ್, 76 ಜನ ಕಾನ್ಸಟೇಬಲ್, 18 ಮಹಿಳಾ ಕಾನ್ಸಟೇಬಲ್, ಎರಡು ಡಿಆರ್ ವಾಹನ, ಒಂದು ಐಆರ್ ಬಿ ವಾಹನದ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದಾರೆ. ಅಗ್ನಿಶಾಮಕ ವಾಹನ, ತಜ್ಞ ವೈದ್ಯರುಳ್ಳ ಎರಡು ಅಂಬುಲೆನ್ಸ್ ಕೂಡಾ ಸ್ಥಳದಲ್ಲಿದೆ.