ಹೂಲಗೇರಿ: ತಂಬಾಕು ನಿರ್ಮೂಲನಾ ಜಾಗೃತಿ ದಿನಾಚರಣೆ ಕೆರೂರ ( ಬಾಗಲಕೋಟೆ ಜಿಲ್ಲೆ)
ಎಲ್ಲ ಭಾಗ್ಯಗಳಲ್ಲೇ ಆರೋಗ್ಯ ಭಾಗ್ಯವೇ ಮಿಗಿಲು. ಸಕಲ ಸೌಲಭ್ಯಗಳಿಗಿಂತಲೂ ನಮ್ಮ ಆರೋಗ್ಯಯುತ ಸದೃಢ ಶರೀರ ಕಾಪಾಡಿಕೊಳ್ಳುವುದೇ ಮುಖ್ಯ, ಆರೋಗ್ಯ ಸರಿಯಿಲ್ಲದಿದ್ದರೇ ಬದುಕು ಕಷ್ಟಸಾಧ್ಯ, ತಂಬಾಕು, ಮದ್ಯಪಾನ ಮತ್ತೀತರ ದುಶ್ಚಟಗಳಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಇದು ವಿಪಯಾ೯ಸ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಶಶಿಕಾಂತ ಕುಮಟಿಹಳ್ಳಿ ಅಭಿಪ್ರಾಯಪಟ್ಟರು.

ಸಮೀಪದ ಹೂಲಗೇರಿ ಎಚ್.ಆರ್. ಪಾಟೀಲ ಸರ್ಕಾರಿ ಪ್ರೌಡಶಾಲೆಯಲ್ಲಿ ಗುರುವಾರ, ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಜರುಗಿದ ತಂಬಾಕು ನಿರ್ಮೂಲನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ತಂಬಾಕು ತಿನ್ನುವುದರಿಂದ ಪ್ರತಿ ವರ್ಷ ಲಕ್ಷಾಂತರ ಜನ ಕ್ಯಾನ್ಸರ್ ಗೆ ತುತ್ತಾಗಿ ತಮ್ಮ ಅಮೂಲ್ಯ ಬಾಳನ್ನು ಗೋಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಆರ್.ಎಸ್. ಬಾದವಾಡಗಿ ಮಾತನಾಡಿ, ತಂಬಾಕು ಚಟ ಎಲ್ಲೆಂದರಲ್ಲಿ ಹೆಚ್ಚಾಗುತ್ತಲ್ಲಿದೆ. ಇದರ ಹಾಗು ಮದ್ಯಪಾನಗಳ ವ್ಯಾಮೋಹಕ್ಕೆ ಈಡಾಗಿ ನಿರಂತರ ವ್ಯಸನೀಗಳಾದರೆ ಕ್ಯಾನ್ಸರ್ ದಂಥ ಇತರೆ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಚಟದಿಂದ ಚಟ್ಟಕ್ಕೆರಬೇಕಾಗದ ಅನಿವಾರ್ಯತೆ ಎದುರಾದೀತು. ಯುವ ಪೀಳಿಗೆ ದುಶ್ಚಟಗಳ ದುಷ್ಪರಿಣಾಮ ಅರಿತು ಅಮೂಲ್ಯ ಜೀವ ರಕ್ಷಿಸಿಕೊಳ್ಳಲು ದೃಢ ಮನಸ್ಸು ಮಾಡಬೇಕು. ಸುಂದರ ಜೀವಕ್ಕೆ ಮಾರಕವಾಗುವಂಥ ಚಟಗಳಿಂದ ದೂರ ಇರಬೇಕು. ಅಂಟಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ತಂಬಾಕು ನಿಮೂ೯ಲನೆಗಾಗಿ ಸರ್ಕಾರ ನಾನಾ ಕ್ರಮ ಕೈಗೊಂಡಿದೆ, ತಂಬಾಕು ಉತ್ಪನ್ನಗಳನ್ನು ಶಾಲೆ, ಕಾಲೇಜು ಆವರಣದ ಸುತ್ತಮುತ್ತಲೂ ನಿಷೇಧಿಸಲಾಗಿದೆ, ಆದರೂ ಯುವಕರು ತಂಬಾಕಿನತ್ತ ಆಕರ್ಷಣೆಗೊಳ್ಳುತ್ತಿರುವುದು ಖೇದಕರ ಎಂದರು.

ಆರೋಗ್ಯ ಇಲಾಖೆಯ ಎ.ಡಿ. ಜತ್ತಿ, ಶಿವಲಿಂಗ ಕರಗಣಿ, ಪದ್ಮಾ ಕಮತರ, ಸುಮಿತ್ರಾ ಹಂಬೂರ, ಸುರೇಶ ಹದ್ಲಿ ಮಾತನಾಡಿದರು.
ಪ್ರಮೀಳಾ ಮಹೇಂದ್ರಕರ, ಎಸ್.ಎಚ್. ರಾಠೋಡ, ಎಸ್.ಎಸ್. ಓಂಕಾರ, ಎಸ್.ಎನ್. ಕಲ್ಲಗೋನಾಳ ವೇದಿಕೆಯ ಮೇಲಿದ್ದರು. ಎಸ್.ಎಚ್. ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಓಂಕಾರ ಸ್ವಾಗತಿಸಿದರು. ಎಸ್.ಎನ್. ಕಲ್ಲಗೋನಾಳ ವಂದಿಸಿದರು.