ಗದಗ: ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಗದುಗಿನ ತೋಂಟದಾರ್ಯ ಲಿಂಗೈಕ್ಯ ಪರಮಪೂಜ್ಯ ಡಾಕ್ಟರ್ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಗದಗ-ಬೆಟಗೇರಿ ಅವಳಿ ನಗರದ ಹಿರಿಯ ಸಾಹಿತಿ ಆಶುಕವಿ ರಾಮಣ್ಣ ಬ್ಯಾಟಿ ರವರು ಕನ್ನಡದ ಭಾಮಿನಿ ಷಟ್ಪದಿಯಲ್ಲಿ ವಿಶ್ವರತ್ನ ಮಹಾನಾಯಕ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಪುರಾಣವನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅವರು ಇಂದು ತಮ್ಮ ಸ್ವಗೃಹ ಬೆಟಗೇರಿಯಲ್ಲಿ ವಯೋಸಹಜ ನಿಧನರಾಗಿದ್ದಾರೆ
ಪುರಾಣ ಕವಿ ಡಾ.ತೋಂಟದ ಸಿದ್ಧಲಿಂಗಮಹಾಸ್ವಾಮಿಗಳ ಕೃಪಾರ್ಶೀವಾದದಿಂದ ಬೆಳೆದ ರಾಮಣ್ಣ ಬ್ಯಾಟಿ 75 ವರ್ಷ ಇಂದು ಸಾಯಂಕಾಲ ನಿಧನ ಹೊಂದಿದ್ದಾರೆ, 5ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದು, ಇಂದು ಅವರು ಅಪಾರ ಬಂಧು ಬಳಗ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ರಾಮಣ್ಣ ಬ್ಯಾಟಿ ಅವರದು ಕಡುಬಡತನದ ಬದುಕು ಆದರೆ ಅವರ ಕಾವ್ಯ ಜೀವನ ಅತ್ಯಂತ ಶ್ರೀಮಂತವಾದುದು. ನೇಕಾರ ಕುಟುಂದಲ್ಲಿ ಜನಿಸಿದ ಅವರ ಕುಲಕಸಬು ನೇಕಾರಿಕೆಯಾದರು ಕಾವ್ಯ ರಚನೆಯೇ ಉಸಿರಾಗಿಸಿಕೊಂಡ ಕಾಯಕ ಜೀವಿ.ಇದುವರೆಗೆ ಅನೇಕ ಪುಣ್ಯ ಪುರುಷರ,ಮಹಾತ್ಮರ ಕುರಿತು ಕೃತಿಗಳನ್ನು ರಚಿಸಿ “ಭಕ್ತಕವಿರಾಮ”ಎಂದೆ ಖ್ಯಾತಿ ಪಡೆದಿದ್ದಾರೆ. ಅಧುನಿಕ ಪುರಾಣಕಾರರೆಂದೆ ಹೆಸರು ವಾಸಿಯಾಗಿರುವ ಇವರು ಬಸವಣ್ಣ ,ಅಂಬೇಡ್ಕರ,ಪುಲೆ ದಂಪತಿಗಳ ಪುರಾಣ, ಬಂಜಾರ ಜನರ ಆರಾಧ್ಯದೈವ ಸಂತ ಶ್ರೀ ಸೇವಾಲಾಲ ಪುರಾಣಗಳು ತುಂಬಾ ಜನಪ್ರಿಯವಾಗಿವೆ.

ಶ್ರೀ ರಾಮಣ್ಣ ಬ್ಯಾಟಿ ಅವರದು ದೈವದತ್ತ ಪ್ರತಿಭೆಯನ್ನು ಪಡೆದಿರುವ ಆಶುಕವಿ.ಕಪ್ಪತ್ತಗುಡ್ಡದ ಜಲದ ಶಂಕರನ ಕೃಪೆಯಿಂದ ಕವಿತ್ವ ಪಡೆದ ವರಕವಿ.ಅವರು ಮೊದಮೊದಲು ಭಜನಾ ಪದಗಳು,ಭಕ್ತಿಗೀತೆಗಳ ರಚನೆಯಲ್ಲಿ ತೊಡಗಿಕೊಂಡು,ಗದುಗಿನ ಎಡೆಯೂರ-ಡಂಬಳ ಮಹಾಸಂಸ್ಥಾನಮಠದ ಜಗದ್ಗುರು ಶ್ರೀಮನ್ ನಿರಂಜನ ಪ್ರಣವಸ್ವರೂಪಿ ಲಿಂ.ಡಾ.ತೋAಟದ ಸಿದ್ಧಲಿಂಗ ಮಹಾಸ್ವಮಿಗಳ ಪ್ರೋತ್ಸಾಹ,ಪೊಷಣೆ ಮತ್ತು ಅವರ ಪ್ರೇರಣೆಯಿಂದ ಪುರಾಣಗಳನ್ನು ಬರೆಯಲು ಮುಂದಾದರು.ಸುಮಾರು ಅರ್ಧಶತಕಿಂತ ಹೆಚ್ಚು ಪುರಾಣಗಳನ್ನು ಬರೆದು ಪುಣ್ಯಪುರುಷರ ಕೃಪೆಗೆ ಪಾತ್ರರಾಗಿದ್ದಾರೆ.ಶ್ರೀರಾಮಣ್ಣ ಬ್ಯಾಟಿಯವರು ಅನಕ್ಷರಸ್ಥರು ಅವರಿಂದ ರಚನೆಯಾಗಿರುವ ಪುರಾಣಗಳು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ,ಹೀಗೆ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ,ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಮತ್ತೆ ಇಂತಹ ಮಹಾಪುರುಷರು ಹುಟ್ಟಿ ಬರಲಿ ಎಂಬುದು ಅಭಿಮಾನಿಗಳ ಆಶಯ.