
ಬೆಂಗಳೂರು: ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದರೆ ಮಾಡಿದ ಸಹಾಯಕ್ಕೆ ಹೆಚ್ಚು ಮಹತ್ವ ಬರುತ್ತದೆ. ಜನರ ಸಂಕಷ್ಟ ಅರಿತ ಸ್ಯಾಂಡಲ್ ವುಡ್ ಸ್ಟಾರ್ ಗಳು ಅವರ ಕೈಲಾದಷ್ಟು ಸೇವೆಗೆ ಮುಂದಾಗಿದ್ದಾರೆ. ಈಗಾಗಲೇ ಕೊರೊನಾ ಮೊದಲ ಅಲೆಯಿಂದಲೇ ಜನಸೇವೆ ಮುಂದಾಗಿರುವ ನಟಿ ಹರ್ಷಿಕ ಪುಣಚ್ಚ ಹಾಗೂ ನಟ ಭುವನ್ ಕೊಡುಗಿನ ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊಡವ ಡ್ಯಾನ್ಸ್ ಮಾಡುವ ಮೂಲಕ ಸೋಂಕಿತರಿಗೆ ರಂಜಿಸಿದ್ದಾರೆ. ಈಗಾಗಲೇ ಹರ್ಷಿಕಾ ಪೂಣಚ್ಚ ಮತ್ತು ಭುವನ್, ಕೊಡಗಿನಲ್ಲಿ ಸಂಭವಿಸಿದ ಪ್ರವಾಹದ ವೇಳೆ ಜನರ ಕಷ್ಟಕ್ಕೆ ಮರುಗಿ ಸಮಾಜ ಸೇವೆಗಿಳಿದಿದ್ದರು. ಕೊರೊನಾ ಎರಡನೇ ಅಲೆ ಆರಂಭದಿಂದ ಈವರೆಗೆ ನಿರಂತರವಾಗಿ ಜನಸೇಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಭುವನಂ ಫೌಂಡೇಶನ್ ಹೆಸರಿನಲ್ಲಿ ಈಗಾಗಲೇ ಅನೇಕ ಕಾರ್ಯಗಳನ್ನು ಮಾಡಿರುವ ಇವರಿಬ್ಬರು ಇದೀಗ ನೇರವಾಗಿ ಕೊರೊನಾ ಸೋಂಕಿತರಿಗೆ ಧೈರ್ಯ ತುಂಬ ಕೆಲಸ ಮಾಡಿದ್ದಾರೆ. ಹರ್ಷಿಕಾ ಹಾಗೂ ಭುವನ್ ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಕೊರೊನಾ ವಾರ್ಡ್ ಗಳಿಗೆ ಭೇಟಿ ನೀಡಿದ್ದು, ಪಿಪಿಇ ಕಿಟ್ ಧರಿಸಿ ಅಲ್ಲಿರುವ 400 ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ.
ಇನ್ನು ಶ್ವಾಸ ಅಭಿಯಾನದಡಿ ಬಸ್ಗಳಲ್ಲಿ ಆಮ್ಲಜನಕ ಯಂತ್ರಗಳನ್ನ ಅಳವಡಿಸಿದ್ದು, ಈ ಬಸ್ಗಳು ವಿಕ್ಟೋರಿಯಾ, ಬೌರಿಂಗ್ ಹಾಗೂ ಒಂದಷ್ಟು ಆಸ್ಪತ್ರೆಗಳ ಎದುರು ನಿಲ್ಲಲಿವೆ. ಯಾರೆಲ್ಲಾ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ಗೆ ಕಾಯ್ತಾ ಇರ್ತಾರೋ ಅವರಿಗೆ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆಯಾಗೋವರೆಗೂ ಈ ಬಸ್ಗಳಲ್ಲಿ ಆಕ್ಸಿಜನ್ ಪಡೆದುಕೊಳ್ಳಬಹುದಾಗಿದೆ.
ಇನ್ನು ಭಾಂಧವ ಹೆಸರಿನ ಆಟೋಗಳು ಬೆಂಗಳೂರಿನ 4 ದಿಕ್ಕುಗಳಲ್ಲೂ ಸಂಚರಿಸಲಿವೆ. ಅದರಲ್ಲೂ ಆಮ್ಲಜನಕ ಯಂತ್ರ ಮತ್ತು ಔಷಧೀಗಳು, ದಿನಸಿ ಕಿಟ್ಗಳು ಲಭ್ಯವಿರುತ್ತೆ. ಯಾರಿಗೆ ಅವಶ್ಯಕತೆ ಇದೆಯೋ ಅವರು ಈ ಸೌಲಭ್ಯವನ್ನ ಪಡೆದುಕೊಳ್ಳಬಹುದು. ಈ ಎಲ್ಲಾ ಯೋಜನೆಗಳನ್ನು ಹರ್ಷಿಕಾ ಪೂಣಚ್ಚ ಮತ್ತು ಭುವನ್ ಜನರ ಹಿತಕ್ಕಾಗಿ ಕಾರ್ಯ ರೂಪಕ್ಕೆ ತಂದಿದ್ದಾರೆ. ಏನೇ ಆಗಲಿ ಕೊರೊನಾ ಚಿಂತೆಯಲ್ಲಿರುವವರು ಹರ್ಷಿಕಾ ಕೊಡವಾ ಡ್ಯಾನ್ಸ್ ಗೆ ಹರ್ಷಗೊಂಡಿದ್ದಾರೆ.