ತ್ಯಾವಣಿಗೆ (ಚನ್ನಗಿರಿ): ಅರೇಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಂತ ಸೇವಾಲಾಲ್ ದೇವಸ್ಥಾನದ ಅಡಿಪಾಯವನ್ನು ಕೆಡವಿಹಾಕಿದ್ದರಿಂದ ಬಂಜಾರ ಹಾಗೂ ಇನ್ನಿತರ ಸಮುದಾಯಗಳ ನಡುವೆ ನಡೆದ ಘರ್ಷಣೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಅರೇಹಳ್ಳಿ ಗ್ರಾಮದಲ್ಲಿ ಸಂತ ಸೇವಾಲಾಲ್ ದೇವಸ್ಥಾನ ಮತ್ತು ಕುಕ್ಕುವಾಡೇಶ್ವರಿ ದೇವಾಲಯಗಳ ಭಕ್ತರ ನಡುವೆ ಮಂಗಳವಾರ ವಾಗ್ವಾದ ನಡೆದಿದೆ.
ಸೇವಾಲಾಲ್ ದೇವಸ್ಥಾನದ ಅಡಿಪಾಯವನ್ನು ಒಂದು ಗುಂಪಿನವರು ಕೆಡವಿ ಹಾಕಿದ್ದು, ದೇವಸ್ಥಾನದ ಗರ್ಭಗಡಿಯಲ್ಲಿ ಕಸದ ತೊಟ್ಟಿ ಇಟ್ಟು ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಂತ ಸೇವಾಲಾಲ್ ಭಕ್ತರು ಈ ಜಾಗದಲ್ಲಿ ಪ್ರತಿಮೆ ಸೃಷ್ಟಿಸಿ ಅರಿಶಿಣ ಕುಂಕುಮ ಲೇಪಿಸಿ ಪೂಜೆ ಸಲ್ಲಿಸಿದ್ದಾರೆ. ಅಲ್ಲಿ ಪೂಜೆ ಮಾಡುತ್ತಿದ್ದೇವೆಯೇ ಹೊರತು ಕಟ್ಟಡ ನಿರ್ಮಿಸುತ್ತಿರಲಿಲ್ಲ ಎಂಬುದು ಸೇವಾಲಾಲರ ಭಕ್ತರವಾದ. ಗ್ರಾಮದಲ್ಲಿ ಸೇವಾಲಾಲ್ ಅವರ ಒಂದು ದೇವಸ್ಥಾನವಿದೆ. ಹೀಗಿದ್ದರೂ ಇನ್ನೊಂದು ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಇನ್ನೊಂದು ಗುಂಪಿನವರ ವಾದವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿವೈಎಸ್‌ಪಿ ಪ್ರಶಾಂತ್ ಮನ್ನೋಳಿ, ಸಿಪಿಐ ಆರ್.ಆರ್.ಪಾಟೀಲ್, ಚನ್ನಗಿರಿ ತಹಶೀಲ್ದಾರ್ ಎನ್.ಜೆ.ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.