ಉತ್ತರಪ್ರಭ ಸುದ್ದಿ
ಬಾಗೇಪಲ್ಲಿ: 100 ದಿನಗಳ ಅವಧಿಯಲ್ಲಿ ರಾಜ್ಯದ 5 ಲಕ್ಷ 20 ಸಾವಿರ ನಾಗರೀಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತ ಹೆಲ್ತ್ ಕಾರ್ಡ್ ಗಳನ್ನು ವಿತರಿಸಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಲಿದ್ದೇವೆ ಎಂದು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ತಾಲೂಕಿನ ಜೂಲಪಾಳ್ಯ ಗ್ರಾಮದ ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ 1 ಕೋಟಿ 80 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಜೂಲಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ವಿಶ್ವದ ಯಾವುದೇ ದೇಶದಲ್ಲಿ ಉಚಿತ ಆರೋಗ್ಯ ವಿಮೆ ಯೋಜನೆ ಜಾರಿಯಲ್ಲಿ ಇಲ್ಲ, ಹೊರ ದೇಶದ ಪ್ರತಿ ನಾಗರೀಕರು ಪ್ರತಿ ವರ್ಷ ವೈಧ್ಯಕೀಯ ಚಿಕಿತ್ಸೆಗಾಗಿ ಹಣ ಕೊಟ್ಟು ವಿಮೆ ಮಾಡಿಸಿಕೊಳ್ಳಬೇಕು. ಆದರೇ ನಮ್ಮ ದೇಶ ಮತ್ತು ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಹೆಲ್ತ್ ಕಾರ್ಡ್ ಮೂಲಕ 5 ಲಕ್ಷ ರೂಗಳವೆರೆಗೂ ಉಚಿತ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಮುಂದಿನ 100 ದಿನಗಳ ಅವಧಿಯೊಳಗೆ ರಾಜ್ಯದ 5 ಕೋಟಿ 20 ಲಕ್ಷ ಜನರಿಗೆ ಉಚಿತ ಹೆಲ್ತ್ ಕಾರ್ಡ್ಗಳನ್ನು ವಿತರಿಸಿ ಮನೆ ಮನೆಗೂ ಉಚಿತ ಆರೋಗ್ಯ ಸೇವೆಗಳನ್ನು ತಲುಪಿಸುವ ಯೋಜನೆ ಅನುಷ್ಠಾನಗೊಳಿಸಲಿದ್ದೇವೆ, ಅದೇ ರೀತಿಯಲ್ಲಿ ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಿಸುವ ಯೋಜನೆಯನ್ನು ಇಲಾಖೆಯಿಂದ ರೂಪಿಸಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರದಲ್ಲಿ 800 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವೈಧ್ಯಕೀಯ ಕಾಲೇಜು 2023 ರ ಜನವರಿಗೆ ಲೋಕಾರ್ಪಣೆಗೊಳ್ಳಲಿದ್ದು ಬಾಗೇಪಲ್ಲಿ ಕ್ಷೇತ್ರದ ಜನತೆಗೆ ಕೇವಲ 30 ನಿಮಿಷದಲ್ಲಿ ಧ್ವೀತಿಯ ಮತ್ತು ತೃತೀಯ ಹಂತದಲ್ಲಿ ಉತ್ಕೃಷ್ಟವಾದ ವೈಧ್ಯಕೀಯ ಸೌಲಭ್ಯಗಳು ಸಿಗಲಿವೆ.
ಬಾಗೇಪಲ್ಲಿ ವಿಧಾನ ಸಬಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 24*7 ಆಸ್ಪತ್ರೆಗಳಲ್ಲಿ ಮಹಿಳಾ ವೈಧ್ಯರು ಸೇರಿದಂತೆ ಮೂವರು ವೈಧ್ಯರನ್ನು ನಿಯೋಜಿಸಿ ಗ್ರಾಮೀಣ ಪ್ರದೇಶದಲ್ಲಿ ವೈಧ್ಯಕೀಯ ಸೇವೆಗಳನ್ನು ಮೇಲ್ದೆರ್ಜೆಗೇರಿಸಿ ಗ್ರಾಮೀಣ ಜನರಿಗೆ ಹೆಚ್ಚಿನ ಚಿಕಿತ್ಸೆಗಳನ್ನು ನೀಡುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯ ಹಲವು ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈಧ್ಯರ ಮತ್ತು ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಿ, ಹೆಚ್ಚುವರಿ ಆಸ್ಪತ್ರೆಗಳನ್ನು ಮಂಜೂರು ಮಾಡಿಕೊಡುವಂತೆ ಬಾಗೇಪಲ್ಲಿಯ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ವೇಧಿಕೆಯಲ್ಲಿ ಮನವಿ ಸಲ್ಲಿಸಿದ್ದು, ಶೀಘ್ರವೇ ಖಾಲಿಯಿರುವ ವೈಧ್ಯರ ಹುದ್ದೆಗಳನ್ನು ಭರ್ತಿಮಾಡಿ ಒಂದು ತಿಂಗಳಳೊಗೆ ತಾಲೂಕು ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವುದಾಗಿ ಶಾಸಕರಿಗೆ ಭರವಸೆ ನೀಡಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಬಾಗೇಪಲ್ಲಿ ವಿಧಾನ ಕ್ಷೇತ್ರ ಗಡಿ ಭಾಗದಲ್ಲಿದ್ದು ಈ ಭಾಗದ ಜನರಿಗೆ ಆರೋಗ್ಯ ತಿಳುವಳಿಕೆ ಇಲ್ಲದ ಕಾರಣ ದೂರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗುವುದಿಲ್ಲ.ಆದ ಕಾರಣ ಗಡಿ ಭಾಗದ ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಮತ್ತು ಸಮೂಹ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ವೈಧ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿ, ಖಾಲಿಯಿರುವ ವೈಧ್ಯರನ್ನು ಭರ್ತಿ ಮಾಡಿ ಸಕಾಲಕ್ಕೆ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕಾಗಿದೆ. ಕೋವಿಡ್ ಸಮಯದಲ್ಲಿ ಮೃತಪಟ್ಟಿರುವ ರೋಗಿಗಳ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾಗಿರುವ ಪರಿಹಾರ ಹಣ ಶೇ 25 ಜನರಿಗೆ ಮಾತ್ರ ಸಿಕ್ಕಿದ್ದು, ಉಳಿದಂತಹ ಕುಟುಂಬಗಳಿಗೂ ಪರಿಹಾರ ಹಣ ಬಿಡುಗಡೆಗೊಳಿಸಿಕೊಡಬೇಕೆಂದು ವೈಧ್ಯಕೀಯ ಶಿಕ್ಷಣ ಸಚಿವರಿಗೆ ಶಾಸಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಣ್ಣ, ಟಿ.ಹೆಚ್.ಓ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಮಂಜುನಾಥ್, ಜೂಲಪಾಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಚಿಕ್ಕಬೈರಾರೆಡ್ಡಿ, ಸದಸ್ಯರಾದ ವಿ.ಬೈರಾರೆಡ್ಡಿ, ಪೈಪಾಳ್ಯ ಜಗನ್ನಾಥ್, ಶ್ರೀರಾಮಪ್ಪ, ರಾಮಚಂದ್ರ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಹರಿ, ಎಸ್‌ಟಿಆರ್‌ಆರ್ ಅಧ್ಯಕ್ಷ ಸಿ.ಮುನಿರಾಜು, ಗ್ರಾ.ಪಂ.ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಬಿಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಪ್, ಮುಖಂಡರಾದ ಎಂ.ಜಿ.ಕಿರಣ್‌ಕುಮಾರ್, ಎನ್.ಜಿ.ಶ್ರೀನಿವಾಸರೆಡ್ಡಿ, ಚೊಕ್ಕಂಪಲ್ಲಿ ಕಾಮರೆಡ್ಡಿ, ಆ.ನ.ಮೂರ್ತಿ, ಲಕ್ಷ್ಮಿನರಸಿಂಹಪ್ಪ, ಪೊಟ್ಲವಾರಪಲ್ಲಿ ರಮೇಶ್ ಮತ್ತಿತರರು ಇದ್ದರು.