ಮಸ್ಕಿ: ಎನ್ ಆರ್ ಬಿ ಸಿ 5ಎ ನಾಲಾ ಯೋಜನೆ ಜಾರಿಗಾಗಿ ಕಳೆದ 9 ದಿನಗಳಿಂದ ಪಾಮನಕೆಲ್ಲೂರಿನಲ್ಲಿ ನಡೆದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ರೈತರು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು.
ಶನಿವಾರ ಭೇಟಿ ನೀಡಿದ ವೇಳೆ ನೀರಾವರಿ ಯೊಜನೆಗಾಗಿ ಕಳೆದ 9 ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಒಂದು ದಿನವಾದರು ಕೆಬಿಜೆಎನ್ಎಲ್ ಅಧಿಕಾರಿಗಳು ಭೇಟಿ ನೀಡಲಿಲ್ಲ. ತಾಲೂಕ ಆಡಳಿತದ ವೈಫಲ್ಯವೇ ಇದಕ್ಕೆ ಕಾರವಾಗಿದೆ ಎಂದು ಅಸಮಾಧಾನ ಹೊರ ಹಾಕಿದರು. ಈ ವೇಳೆ ಆಕ್ರೋಶಗೊಂಡ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಪ್ರತಿ ದಿನದ ಮಾಹಿತಿ ಪಡೆದುಕೊಂಡು ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಗಮನಕ್ಕೆ ತಂದಿದ್ದೇನೆ. ಈ ಹೋರಾಟದ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೂ ಇದೆ ಎಂದು ಸಮಜಾಯಿಷಿ ನೀಡಿದರು.
ಈ ಸಂದರ್ಭದಲ್ಲಿ ನಾಗರೆಡ್ಡಪ್ಪ ದೇವರಮನಿ, ಶಿವನಗೌಡ ವಟಗಲ್, ಬಸವರಾಜಪ್ಪಗೌಡ ವಟಗಲ್, ಶಿವನಗೌಡ ಮಾಲಿಪಾಟೀಲ್, ಪರ್ವತರೆಡ್ಡಿ ಹತ್ತಿಗುಡ್ಡ ಸೇರಿದಂತೆ ಅನೇಕ ರೈತರು ಮಾತನಾಡಿದರು.
ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪುರ, ಹುಚ್ಚಬುಡ್ಡಪ್ಪ ಅಮೀನಗಡ, ಮಂಜೂರ ಪಾಷ ಅಮೀನಗಡ, ಮೌನೇಶ ಬುದ್ದಿನ್ನಿ, ಯಮನಪ್ಪ ಮುದಬಾಳ, ಬುದ್ದಿನ್ನಿ ಎಸ್, ನೆಲ ಕೊಳ್ಳ, ಅಮೀನಗಡ, ವಟಗಲ್, ಚಿಲ್ಕರಾಗಿ, ಅನಂದಗಲ್, ಪಾಮನಕೆಲ್ಲೂರು ಸೇರಿದಂತೆ ಇನ್ನಿತರ ಗ್ರಾಮದ ರೈತರಿದ್ದರು.