ಬೆಂಗಳೂರು : ಮೊದಲು ನೀವು ನಿಮ್ಮ ಪಕ್ಷದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇತ್ತೀಚೆಗೆ ಕಳೆದ ಹಲವು ದಿನಗಳಿಂದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವೆ ಟ್ವೀಟ್ ವಾರ್ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇಂದು ನಳಿನ್ ಅವರನ್ನು ಸಿದ್ದರಾಮಯ್ಯ ಅವರು ಕಾಡು ಮನುಷ್ಯನಿಗೆ ಹೊಲಿಕೆ ಮಾಡಿದ್ದಾರೆ. ಹೀಗಾಗಿ ವಾರ್ ಜೋರಾಗಿದೆ.
ಮಾಜಿ ಮುಖ್ಯಮಂತ್ರಿಗಳೇ ಹಿಂದೊಂದು ಪಕ್ಷ ತಮ್ಮನ್ನು ಮೂಲೆಗುಂಪು ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡದ್ದನ್ನು ಮರೆಯದಿರಿ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪಾಗುತ್ತಿರುವ ನೋವನ್ನು ತೋಡಿಕೊಳ್ಳುವ ದಾರಿಯಿಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಕೀಳಾಗಿ ಮಾತನಾಡಿದ್ದು ದುರದೃಷ್ಟಕರ ಮತ್ತು ಅತ್ಯಂತ ಕೀಳು ಮಟ್ಟದ ರಾಜಕೀಯ. ರಾಜ್ಯದಲ್ಲಿ ಬಿಎಸ್ ವೈಯವರೇ ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನೀವು ಮೊದಲು ನಿಮ್ಮ ಮನೆಯ ಯಜಮಾನ ಯಾರು ಎನ್ನುವುದನ್ನು ನಿರ್ಧಾರ ಮಾಡಿ. ಮನೆಯೊಂದು ನೂರು ಬಾಗಿಲು ಎಂಬಂತೆ ಇರುವ ನಿಮ್ಮ ಪಕ್ಷವನ್ನು, ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ ಎಂದು ಕಾಲೆಳೆದಿದ್ದಾರೆ.